ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಮತ್ತು ಕನ್ನಡಸೇನೆ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ರಸ್ತೆ ತಡೆ ನಡೆಸಿದರು. ಬಳಿಕ ಪೊಲೀಸರು ವಾಟಾಳ್ ನಾಗರಾಜ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ನಗರದ ಜೆ.ಸಿ.ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು.

ನಂತರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಲು ಮುಂದಾದರು. ಪೊಲೀಸರು ತೆರವುಗೊಳಿಸಲು ಯತ್ನಿಸಿದಾದರೂ ವಿಫಲವಾದರು. ಕೊನೆಗೆ ವಾಟಾಳ್ ನಾಗರಾಜ್, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ. ಕುಮಾರ್, ಜಿಲ್ಲಾಧ್ಯಕ್ಷ ಮಂಜುನಾಥ್, ಸೌಭಾಗ್ಯ ಮಹದೇವು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ವಾಟಾಳ್ ನಾಗರಾಜ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ಕಾವೇರಿ ಕಣಿವೆ ರೈತರು ಮತ್ತು ಜನರನ್ನು ವಂಚಿಸುತ್ತಿದ್ದಾರೆ. ಸರ್ಕಾರದಿಂದ ಕರ್ನಾಟಕಕ್ಕೆ ಕಾವೇರಿ ನೀರನ್ನೂ ಕೊಡಲಾಗುತ್ತಿಲ್ಲ, ಇತ್ತ ಮೇಕೆದಾಟು ಅಣೆಕಟ್ಟೆಯನ್ನೂ ನಿರ್ಮಿಸಲಾಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು.


ರಾಜ್ಯದ ಜನರು, ರೈತರು, ಬೆಂಗಳೂರಿನ ಜನತೆಯೂ ಹೋರಾಟಕ್ಕೆ ಇಳಿಯಬೇಕು. ಕೆ.ಆರ್‌ಎಸ್ ಸುತ್ತಲೂ ರಾಜ್ಯ ಸರ್ಕಾರ ಪೊಲೀಸ್ ಬೆಂಗಾವಲು ಹಾಕಿದೆ. ನಿತ್ಯ ತಮಿಳುನಾಡಿಗೆ ೬ ಸಾವಿರ ಕ್ಯೂಸೆಕ್ ನೀರನ್ನು ಬಿಡುತ್ತಿದ್ದೇವೆ ಸಚಿವ ಚಲುವರಾಯಸ್ವಾಮಿ ಹೇಳುತ್ತಾರೆ. ಆದರೆ, ಪ್ರಾಧಿಕಾರ ಆದೇಶ ನೀಡಿರುವಂತೆ ರಾಜ್ಯದಿಂದ ತಮಿಳುನಾಡಿಗೆ ನಿತ್ಯ ೧೨ ಸಾವಿರಕ್ಕೂ ಹೆಚ್ಚು ಪ್ರಮಾಣದ ನೀರನ್ನು ಹರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆ ಕರ್ನಾಟಕ ಬಂದ್ ಮಾಡಿದ್ದೇವು. ಕೆಲವರು ಬಂದ್‌ಗೆ ಬೆಂಬಲ ನೀಡಿ ಕಡೇ ಘಳಿಗೆಯಲ್ಲಿ ಕೈ ಕೊಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಕಾರಣರಾಗಿದ್ದಾರೆ. ಕನ್ನಡ ಸಂಘಟನೆಗಳನ್ನು ಮುಖ್ಯಮಂತ್ರಿಗಳು ಒಡೆದುಹಾಕುತ್ತಿದ್ದಾರೆ. ರೈತರನ್ನೂ ಒಡೆದು ಹಾಕುತ್ತಾರೆ. ಇದು ಒಳ್ಳೆಯ ಕ್ರಮವಲ್ಲ ಎಂದು ಎಚ್ಚರಿಕೆ ನೀಡಿದರು.

೨೬ರಂದು ಕೆ.ಆರ್‌ಎಸ್ ಮುತ್ತಿಗೆ:

ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಆ.೨೬ರಂದು ಕೆ.ಆರ್.ಎಸ್.ಮುತ್ತಿಗೆ ಹಾಕುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು. ಅಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ರೈತರು, ಸಾರ್ವಜನಿಕರೊಡಗೂಡಿ ಕೃಷ್ಣರಾಜಸಾಗರ ಜಲಾಶಯವನ್ನು ಮುತ್ತಿಗೆ ಹಾಕಲಾಗುವುದು. ನಮ್ಮನ್ನೂ ಸೇರಿದಂತೆ ಎಷ್ಟು ಜನರನ್ನೂ ಬೇಕಾದರೂ ಜೈಲಿಗೆ ಹಾಕಲಿ. ನಾವು ಹೆದರುವುದಿಲ್ಲ ಎಂದು ನೇರವಾಗಿ ಹೇಳಿದರು.

ನಾವು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಜೈಲಿಗೆ ಹೋಗಲೂ ಸಿದ್ದನಿದ್ದೇನೆ. ರಾಜ್ಯದ ಪರಿಸ್ಥಿತಿಯನ್ನು ನೆನೆದರೆ ಕಣ್ಣೀರು ಬರುತ್ತೆ. ಈ ಸರ್ಕಾರ ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಒತ್ತಾಯಿಸಿದರು.

ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಸಭೆ ನಡೆಸಲು ಸಿದ್ದರಾಗಿದ್ದಾರೆ. ರಾಹುಲ್‌ಗಾಂಧಿ ಅವರು ಈ ಹಿಂದೆ ಕರುಣಾನಿಧಿ ಪಕ್ಷಕ್ಕೆ ಬೆಂಬಲ ನೀಡಿದ್ದರು. ಈಗ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಆದರೂ ರಾಜ್ಯದ ಜನತೆ ಇನ್ನೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಜಿಲ್ಲಾಧ್ಯಕ್ಷ ಮಂಜುನಾಥ್, ಸೌಭಾಗ್ಯ ಮಹದೇವು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.