ಕನ್ನಡಪ್ರಭ ವಾರ್ತೆ ಮಂಡ್ಯ
ಡಿ.ದೇವರಾಜ ಅರಸು ಆಡಳಿತಾವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಜೊತೆಗೆ ರಾಜಕೀಯ ನ್ಯಾಯವೂ ಲಭ್ಯವಾಗಿದ್ದ ಕಾರಣದಿಂದಲೇ ೬೦ಕ್ಕೂ ಹೆಚ್ಚು ಅತಿ ಹಿಂದುಳಿದ ಸಮುದಾಯದ ಶಾಸಕರು ವಿಧಾನಸಭೆಯಲ್ಲಿ ಇದ್ದರು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಗೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ನಗರದ ಜೆ.ಸಿ.ವೃತ್ತದಲ್ಲಿ ನಡೆದ ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಅರಸು ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದಂತಹ ಹತ್ತಾರು ಸಮುದಾಯದ ಮುಖಂಡರಿಗೆ ಶಾಸಕತ್ವವನ್ನು ನೀಡುವ ಮೂಲಕ ರಾಜಕೀಯ ಸಮಾನತೆ ಪ್ರದರ್ಶಿಸಿದ್ದರು ಎಂದು ಬಣ್ಣಿಸಿದರು.
ಆಧುನಿಕ ಕಾಲಮಾನದ ಈ ಪರಿಸ್ಥಿತಿಯಲ್ಲಿ ಕೂಡ ಹಿಂದುಳಿದ ಸಮಾಜಗಳ ಶಾಸಕರ ಸಂಖ್ಯೆ ೨೦ ರಿಂದ ೨೫ಕ್ಕೆ ಸೀಮಿತವಾಗಿದೆ. ಆದರೆ, ೭೦ರ ದಶಕದ ಅರಸು ಕಾಲದಲ್ಲಿ ೬೦ಕ್ಕೂ ಹೆಚ್ಚು ಜನ ಹಿಂದುಳಿದ ಸಮುದಾಯಗಳ ಪ್ರತಿನಿಧಿಯಾಗಿ, ಧ್ವನಿಯಾಗಿ ಇದ್ದದ್ದು ವಿಶೇಷವಾಗಿದೆ. ಇಂದಿಗೂ ಲೋಕಸಭೆ ಮತ್ತು ವಿಧಾನ ಸಭೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಆಯೋಗದ ಮೂಲಕ ಹಿಂದುಳಿದ ಮತ್ತು ಶೂದ್ರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದಂತೆ ಅರಸು ಅವರು ಕೂಡ ಎಲ್.ಜೆ.ಹಾವನೂರು ವರದಿಯನ್ನು ಅನುಷ್ಠಾನಗೊಳಿಸಿ ಹಿಂದುಳಿದ ವರ್ಗಗಳಿಗೆ ಉದ್ಯೋಗ-ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿದರು. ಆದರೆ, ನಂತರದ ಆಯೋಗಗಳ ಬಹುತೇಕ ವರದಿಗಳು ಸ್ವೀಕೃತಿಯನ್ನೂ ಪಡೆಯದೆ ಕಡೆಗಣೆಗೆ ಗುರಿಯಾದದ್ದು ಹಿಂದುಳಿದ ವರ್ಗಗಳ ದುರಂತವಾಗಿದೆ ಎಂದು ವಿಷಾದಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಧುಕರ್ ನಾಯಕ್ ವರದಿಯನ್ನು ಸ್ವೀಕರಿಸಿದ್ದು, ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಿಂದುಳಿದ ವರ್ಗಗಳ ಸಚಿವಾಲಯ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಅರಸು ಜನ್ಮ ದಿನಾಚರಣೆಯ ಸಾರ್ಥಕತೆಯನ್ನು ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.
ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಡಿ.ದೇವರಾಜ ಅಸರು ಅವರು ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು ಉಳುವವರಿಗೆ ಭೂಮಿ, ಅಸಾಯಕರಿಗೆ ಆಶ್ರಯ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿದರು ಎಂದು ಬಣ್ಣಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ದೇಶಕ್ಕೆ ಮಾದರಿಯಾದ ಆಡಳಿತವನ್ನು ನೀಡಿದವರು ಡಿ. ದೇವರಾಜ ಅಸರು. ಅವರ ಆದರ್ಶ ಮತ್ತು ಚಿಂತನೆಗಳನ್ನು ಇಂದಿನ ರಾಜಕಾರಣಿಗಳು ಅನುಸರಿಸಬೇಕು. ಸಮಾಜದ ಎಲ್ಲ ವರ್ಗದ ಜನರ ಏಳಿಗೆಗೆ ಎಲ್ಲರೂ ಶ್ರಮಿಸಬೇಕು ಎಂದು ಅಭಿಪ್ರಾಯಿಸಿದರು.ಕನ್ನಡ ಸಂಘಟನೆಯ ಮುಖಂಡರಾದ ಎಸ್.ನಾರಾಯಣ್, ಎಚ್.ಡಿ.ಜಯರಾಂ, ಕನ್ನಡ ಸೇನೆ ಮಂಜು, ದಸಂಸ ಮುಖಂಡ ಚೀರನಹಳ್ಳಿ ಲಕ್ಷ್ಮಣ್, ಹಿಂದುಳಿದ ಸಮಾಜದ ಮುಖಂಡರಾದ ಎಂ. ಕೃಷ್ಣ, ಸಂತೆಕಸಲಗೆರೆ ಬಸವರಾಜು ಇತರರು ಮಾತನಾಡಿದರು.
ಮುಖಂಡರಾದ ಬಸವರಾಜು, ಕುಮಾರ್, ಸಿದ್ದಶೆಟ್ಟಿ, ಎನ್. ದೊಡ್ಡಯ್ಯ, ಪ್ರದೀಪ್, ರಾಜಣ್ಣ, ಉಮ್ಮಡಹಳ್ಳಿ ನಾಗೇಶ್, ಮಂಚಶೆಟ್ಟಿ, ಕಮ್ಮನಾಯಕನಹಳ್ಳಿ ನಾಗೇಶ್, ಗುರಪ್ಪ ಸೇರಿದಂತೆ ಇತರರು ಇದ್ದರು.