ನಮ್ಮ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಇದರ ಬಗ್ಗೆ ಹಲವಾರು ವರ್ಷಗಳಿಂದ ರಸ್ತೆ ತಡೆ ಬಂದ್ ಮಾಡುವ ಮೂಲಕ ಹಲವಾರು ಬಾರಿ ಸರ್ಕಾರದ ಧೋರಣೆ ಖಂಡಿಸಿ ಪ್ರತೀಭಟಿಸಿ ಮನವಿ ಮಾಡಿದರೂ ಯಾವುದೇ ಶಾಶ್ವತ ಪರಿಹಾರ ಸಿಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಬೇಲೂರು

ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದ್ದು, ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗು ಜಾಗ ಬಿಟ್ಟು ಕದಲುವುದಿಲ್ಲ ಎಂದು ತಾಲೂಕಿನ ಚಿಕ್ಕೋಡಿನಲ್ಲಿ ರಸ್ತೆ ತಡೆ ನಡೆಸುವ ಮೂಲಕ ಬೆಳೆಗಾರರು ಉಗ್ರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಕುಮಾರ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಇದರ ಬಗ್ಗೆ ಹಲವಾರು ವರ್ಷಗಳಿಂದ ರಸ್ತೆ ತಡೆ ಬಂದ್ ಮಾಡುವ ಮೂಲಕ ಹಲವಾರು ಬಾರಿ ಸರ್ಕಾರದ ಧೋರಣೆ ಖಂಡಿಸಿ ಪ್ರತೀಭಟಿಸಿ ಮನವಿ ಮಾಡಿದರೂ ಯಾವುದೇ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಅಲ್ಲದೆ ನಮ್ಮ ತಾಲೂಕಿನಲ್ಲಿ 8 ಜನ ಕೂಲಿ ಕಾರ್ಮಿಕರು ಕಾಡಾನೆಗಳ ದಾಳಿಗೆ ಸಾವನ್ನಪ್ಪಿದ್ದು ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆ ಮಣ್ಣು ಪಾಲಾಗಿದೆ.

ಇಷ್ಟೆಲ್ಲಾ ಸಂಭವಿಸುತ್ತಿದ್ದರು ಅರಣ್ಯ ಇಲಾಖೆ ಕಣ್ಮುಚ್ಚಿ ಕೂತಿದ್ದಾರೆ. ಮೂರು ಬಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರೂ ಸಹ ಅದರ ಬಗ್ಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಇಂದು ಸಾಂಕೇತಿಕವಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದು ನಮಗೆ ಇಲ್ಲಿಯೂ ಸೂಕ್ತ ಮಾಹಿತಿ ನೀಡದೆ ಅಧಿಕಾರಿಗಳು ರೈತರನ್ನು ಕಣ್ಣೊರೆಸುವ ತಂತ್ರ ಮಾಡಿದರೆ ಮುಂದೆ ಯಾವ ರೀತಿ ಉಗ್ರ ಪ್ರತಿಭಟನೆ ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ಇದರ ಜೊತೆಯಲ್ಲಿ ಕಾಫಿ ಕಳ್ಳತನ ಜಾಸ್ತಿಯಾಗುತಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನಹರಿಸಿ ಅವುಗಳನ್ನು ತಡೆಗಟ್ಟುವ ಕೆಲಸ ಮಾಡಬೇಕು ಎಂದರು.ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ನಾವು ನಿಮಗೆ ಒಂದು ವಾರದ ಗಡುವನ್ನು ಕೊಡುತ್ತೇವೆ. ಇಲ್ಲಿವರೆಗೂ ಅರಣ್ಯ ಇಲಾಖೆ ಬರಿ ನಾಟಕ ಮಾಡಿಕೊಂಡು ಬರುತ್ತಿದ್ದಾರೆ. ನಮಗೆ ಸಂಪೂರ್ಣ ಶಾಶ್ವತ ಪರಿಹಾರ ಬೇಕು. ನಮಗೆ ಇಂದು ಸಹ ಸುಳ್ಳು ಭರವಸೆ ಕೊಟ್ಟು ಅರಣ್ಯ ಇಲಾಖೆ ಹೋದರೆ ಇನ್ನೆರಡು ದಿನಗಳಲ್ಲಿ ಕಾಡಾನೆಗಳನ್ನು ಬೇರೆಕಡೆ ಓಡಿಸದಿದ್ದರೆ ನಾವೆ ರೈತ ಸಂಘದವರು ಬೆಳೆಗಾರರು ಸೇರಿದಂತೆ ಹಾಸನ ಜಿಲ್ಲೆ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಮುದ್ರೆ ಹಾಕಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕಾಫಿ ಪ್ಲಾಂಟರ್ಸ್ ಸಂಘದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಇಲ್ಲಿನ ಅರಣ್ಯ ಇಲಾಖೆಯವರು ಚಿಕ್ಕಮಗಳೂರು ಭಾಗಕ್ಕೆ ಓಡಿಸಲು ಹೆದರಿಸುತ್ತಿದ್ದಾರೆ. ಅಲ್ಲಿರುವ ಬಲಾಡ್ಯ ರಾಜಕಾರಣಿಗಳಿದ್ದು ಅವರಿಗೆ ಹೆದರುತ್ತಿದ್ದಾರೆ. ಮೂರು ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕರೆ ತಂದರೆ ರೈತರು ಹಾಗೂ ಬೆಳೆಗಾರರು ಎಲ್ಲಾ ಸೇರಿ ಒಮ್ಮೆಲೆ ಇಲ್ಲಿಂದ ಕಾಡಾನೆಗಳನ್ನು ಓಡಿಸಬಹುದು. ಆದರೆ ನಿಮಗೆ ಅವುಗಳನ್ನು ಓಡಿಸಲು ಸಾಧ್ಯವಾಗದಿದ್ದರೆ ದಯಮಾಡಿ ನೀವು ಯಾರು ಇಲ್ಲಿಗೆ ಬರಬೇಡಿ ನಿಮ್ಮ ಸುಳ್ಳು ಭರವಸೆ ನಮಗೆ ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದಿದ್ದ ಡಿಎಫ್ಒ ಅವರಿಗೆ ಮಾತನಾಡಲು ಅವಕಾಶ ನೀಡದೆ ಪ್ರತಿಭಟನೆ ನಡೆಸಿದರು. ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು. ಸುಮಾರು 5 ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಸ್ಥಳಕ್ಕೆ ಆಗಮಿಸಿದ ಡಿಎಫ್ಒ ಸೌರಭ್ ಕುಮಾರ್ ಮಾತನಾಡಿ, ಈಗಾಗಲೇ ಇಲ್ಲಿಯ ಸಮಸ್ಯೆಗಳನ್ನು ನಾನು ಅರಣ್ಯ ಸಚಿವರ ಬಳಿ ಹಾಗೂ ನಮ್ಮ ಮುಖ್ಯ ಕಾರ್ಯದರ್ಶಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಪ್ರತಿನಿತ್ಯ ಜಿಲ್ಲಾಧಿಕಾರಿಗಳೊಂದಿಗೆ ಕಾಡಾನೆ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಆದರೆ ಇವುಗಳು ಇಲ್ಲಿಂದ ತೆರಳುತ್ತಿಲ್ಲ. ಆಲೂರು ಭಾಗದ ಕಡೆಯಿಂದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿಕೊಂಡು ಬರುತ್ತಿದ್ದು ನಮ್ಮ ಮೇಲಾಧಿಕಾರಿಗಳು ಪಕ್ಕದ ಅರಣ್ಯ ಇಲಾಖೆ ಜೊತೆ ಚರ್ಚಿಸಿದ್ದು ಇನ್ನೆರಡು ವಾರದಲ್ಲಿ ಕೆಲವು ಆನೆಗಳನ್ನು ನಿಧಾನವಾಗಿ ಭದ್ರ ಅರಣ್ಯ ಕಡೆಗೆ ಓಡಿಸಲಾಗುತ್ತದೆ. ಬೆಳೆ ನಷ್ಟಕ್ಕೆ ಈಗಾಗಲೇ ಪರಿಹಾರಕ್ಕೆ ಬರೆಯಲಾಗಿದ್ದು ಈಗಾಗಲೇ 35 ಕಿಮೀ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದ್ದು ಬಜೆಟ್‌ನಲ್ಲೂ ಸಹ ಬ್ಯಾರಿಕೇಡ್‌ಗೆ ಅನುಮೋದನೆ ಸಿಕ್ಕಿದ್ದು ಅವುಗಳನ್ನು ನಿಧಾನವಾಗಿ ಭದ್ರ ಅರಣ್ಯ ಕಾಡಿಗೆ ಓಡಿಸಲಾಗುವುದು ಎಂದರು.ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿದ ನಂತರ ತಾತ್ಕಾಲಿಕವಾಗಿ ಪ್ರತಿಭಟನೆ ಕೈ ಬಿಡಲಾಯಿತು. ಬೇಲೂರು ವೃತ್ತ ನಿರೀಕ್ಷಕರಾದ ಜಗದೀಶ್ ಹಾಗೂ ಪಿಐ ರೇವಣ್ಣ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಎಸಿಎಫ್ ಮೋಹನ್ ಕುಮಾರ್,ವಲಯ ಅರಣ್ಯಾಧಿಕಾರಿ ಯತೀಶ್ ಕಾಫಿ ಬೆಳೆಗಾರ ಸಂಘದ ಬಸವರಾಜು, ಗೋವಿಂದ ಶೆಟ್ಟರು, ಶಿವಶಂಕರ್ ಕಮಲಾ ಚೆನ್ನಪ್ಪ, ರೈತ ಸಂಘದ ಸ್ವಾಮಿಗೌಡ, ಬಿರಟೆಮನೆ ಸುರೇಶ್, ಮಲ್ಲಿಕಾರ್ಜುನ, ಬಂಡೆ ರಮೇಶ್, ರವೀಂದ್ರ, ಹರೀಶ್ ಸೇರಿದಂತೆ ಇತರರು ಹಾಜರಿದ್ದರು.