ರೈತರು ಬೆಳೆಯುವ ಯಾವುದೇ ಬೆಳೆಗಳಿಗೆ ನೈಜ್ಯವಾದ ಬೆಂಬಲ ಬೆಲೆ ಸಿಗದಿರುವುದು ದೊಡ್ಡ ದುರಂತವಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಸಮಸ್ಯೆಗಳು ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ನವೀನ್ ಕುಮಾರ್ ಮಾತನಾಡಿ, ರೈತರು ಬೆಳೆಯುವ ಯಾವುದೇ ಬೆಳೆಗಳಿಗೆ ನೈಜ್ಯವಾದ ಬೆಂಬಲ ಬೆಲೆ ಸಿಗದಿರುವುದು ದೊಡ್ಡ ದುರಂತವಾಗಿದೆ. ಇನ್ನು ಕಬ್ಬು ಬೆಳೆಗಾರರ ಸ್ಥಿತಿ ಹೇಳಿಕೊಳ್ಳುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಬ್ಬು ಬೆಳೆಯನ್ನೇ ನಂಬಿರುವ ರೈತರು ನಿರೀಕ್ಷೆಯಂತೆ ಲಾಭಹಾಗೂ ಸರ್ಕಾರದಿಂದ ಬೆಂಬಲ ಬೆಲೆ ಸೇರಿದಂತೆ ಅಗತ್ಯ ಸೌಕರ್ಯಗಳು ಸಿಗದೇ ಬದುಕು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಈ ಬಗ್ಗೆ ಎಲ್ಲಾ ರೈತರು ಒಗ್ಗಟ್ಟಿನಿಂದ ತಮ್ಮ ಹಕ್ಕುಗಳನ್ನು ಹೋರಾಟ ಮಾಡುವ ಮೂಲಕ ಪಡೆದುಕೊಳ್ಳಬೇಕಾಗಿದೆ. ರೈತರಿಗೆ ಪ್ರತಿ ಬಾರಿಯೂ ನಿಗದಿತ ಬೆಂಬಲ ಬೆಲೆಯನ್ನು ನೀಡದೆ ವಂಚನೆ ಮಾಡಲಾಗುತ್ತದೆ. ಈ ಬಗ್ಗೆ ಕೂಡಲೇ ಅಧಿಕಾರಿ ವರ್ಗ ಮಧ್ಯಪ್ರದೇಶ ಮಾಡಿ ಕಬ್ಬು ಬೆಳಗಾರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.ಬೆಲ್ಲ, ಸಕ್ಕರೆಯ ದರ ಹಾಗೂ ತಲಾ ಟನ್ ಕಬ್ಬಿಗೆ ಸಿಗುತ್ತಿರುವ ಬೆಲೆಯನ್ನು ಲೆಕ್ಕಾಚಾರ ಹಾಕಿದರೆ ಕಬ್ಬು ಬೆಳೆಗಾರರಿಗೆ ಸಿಪ್ಪೆ, ಕಾರ್ಖಾನೆ ಅಥವಾ ಸರ್ಕಾರಕ್ಕೆ ಸಿಗುತ್ತಿರುವುದು ಹಣ್ಣು ಎಂಬಂತಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಇನ್ನೂ ಐದು ವ? ಹಿಂದೆ ಉಳಿದಿರುವಂತೆ ಕಾಣಿಸುತ್ತಿದೆ ಎಂದು ತಿಳಿಸಿದರು.ಸರ್ಕಾರ ಇತ್ತ ಗಮನಹರಿಸಿ ಮಧ್ಯಸ್ಥಿಕೆ ವಹಿಸುವ ಮೂಲಕ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸದಿದ್ದರೆ ಮುಂದೊಂದು ದಿನ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಹಾಗೂ ಹಾಸನ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್, ಗೊಲ್ಲರ ಹೊಸಹಳ್ಳಿ ಮಂಜುನಾಥ್, ಕಲ್ಕೆರೆ ವಾಸುದೇವ್, ಗೋವಿನಕೆರೆ ತೇಜಸ್, ಜೋಗಿಪುರ ಮಂಜೇಗೌಡ ಸೇರಿದಂತೆ ತಾಲೂಕು ವ್ಯಾಪ್ತಿಯ ಕಬ್ಬು ಬೆಳೆಗಾರರು ಹಾಜರಿದ್ದರು.