ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಿಂದ ಕವಲು ರಸ್ತೆಗಳಿರುವಲ್ಲಿ ಸಮರ್ಪಕ ಕಾಮಗಾರಿ ಇಲ್ಲ. ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಕುಮಟಾ-ಶಿರಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ
ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ । ತಾಪಂ ಮಾಜಿ ಅಧ್ಯಕ್ಷ ಬೆಳ್ಳೆಯ ಜಿ.ಜಿ. ಹೆಗಡೆ ಎಚ್ಚರಿಕೆಕನ್ನಡಪ್ರಭ ವಾರ್ತೆ ಕುಮಟಾ
ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಿಂದ ಕವಲು ರಸ್ತೆಗಳಿರುವಲ್ಲಿ ಸಮರ್ಪಕ ಕಾಮಗಾರಿ ಇಲ್ಲ. ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ವಾರದೊಳಗೆ ನಮ್ಮ ಭಾಗದಲ್ಲಿ ಕಾಮಗಾರಿ ನಡೆಯದಿದ್ದಲ್ಲಿ ರಸ್ತೆ ಬಂದ್ ಮಾಡಬೇಕಾಗುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ಬೆಳ್ಳೆಯ ಜಿ.ಜಿ. ಹೆಗಡೆ ಎಚ್ಚರಿಕೆ ನೀಡಿದರು.ತಾಪಂ ಸಭಾಭವನದಲ್ಲಿ ಮಂಗಳವಾರ ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಿಂದ ಜಿಲ್ಲಾ ಮುಖ್ಯರಸ್ತೆ ಹಾಗೂ ಇತರ ಗ್ರಾಮೀಣ ರಸ್ತೆಗಳಿಗೆ ಅಪ್ರೋಚ್ ಸರಿಪಡಿಸುವುದು ಯಾರ ಜವಾಬ್ದಾರಿ ಎಂದು ಜಿ.ಜಿ. ಹೆಗಡೆ ಪ್ರಶ್ನಿಸಿದರು. ಕಾಮಗಾರಿಯ ಆಮೆಗತಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಆರ್.ಎನ್.ಎಸ್ ಎಂಡಿ ನಿತೀಶ್ ಶೆಟ್ಟಿ ಅವರಿಗೆ ಕೂಡಲೇ ರಸ್ತೆ ಕಾಮಗಾರಿ ಪೂರೈಸಲು ಶಾಸಕರು ಸೂಚಿಸಿದರು. ಮುಂದಿನ ಶುಕ್ರವಾರದಂದು ಕಾಮಗಾರಿ ಆರಂಭಿಸುವುದಾಗಿ ನಿತೀಶ ಭರವಸೆ ನೀಡಿದರು.ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ, ಆಸ್ಪತ್ರೆಯಲ್ಲಿ ಕಳೆದ ತಿಂಗಳು ೧೫೦ಕ್ಕೂ ಹೆಚ್ಚು ಮಂದಿ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳು ಕಳವಳಕಾರಿ ಎಂದರು. ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ ಡಯಾಲಿಸಿಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸೂಕ್ತ ಅಧ್ಯಯನವಾಗಲಿ. ಸಾರ್ವಜನಿಕರೊಂದಿಗೆ ಸೌಜನ್ಯಯುತ ವರ್ತಿಸದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸಂಬಳ ತಡೆದು ಕೊಡಿ ಎಂದರು.
ಎಆರ್‌ಟಿಇ ರವೀಂದ್ರ ಮಾತನಾಡಿ, ಚಿತ್ರದುರ್ಗದಲ್ಲಿ ಬಸ್ಸಿಗೆ ಬೆಂಕಿ ದುರಂತದ ಬಗ್ಗೆ ಚರ್ಚೆ ನಡೆದು ಬಸ್‌ಗಳಲ್ಲಿ ಹಿಂದೆ ಎಮರ್ಜೆನ್ಸಿ ಡೋರ್ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಒಡೆಯುವಂತಹ ಗ್ಲಾಸ್ ಅಳವಡಿಸುವ ಬಗ್ಗೆ ಸೂಕ್ತ ಕ್ರಮವಹಿಸಲು ಈಗಾಗಲೇ ಸರ್ಕಾರದಿಂದ ಮಾರ್ಗದರ್ಶಿ ಸೂತ್ರ ಬಂದಿದೆ ಎಂದರು.ಶೂ ಸಾಕ್ಸ್ ಅನುದಾನವನ್ನು ಅನುದಾನಿತ ಶಾಲೆಗಳಿಗೆ ಇನ್ನೂ ತನಕ ನೀಡದ ಬಗ್ಗೆ ವಿಧಾನಸಭೆಯಲ್ಲಿ ಶಾಸಕರು ಮಾತನಾಡಬೇಕು ಎಂದು ಧೀರು ಶಾನಭಾಗ ಹೇಳಿದರು.
ಸಾರಿಗೆ ಡಿಪೊ ಮೆನೇಜರ್ ವಿನಾಯಕ ಭಂಡಾರಿ ಮಾತನಾಡಿ, ಶಿರಸಿ, ಉಪ್ಪಿನಪಟ್ಟಣ, ಬೊಗರಿಬೈಲ್, ಚಂದಾವರ, ಹೊನ್ನಾವರ ಮಾರ್ಗವಾಗಿ ಬಸ್ ಬಿಡುವ ಬಗ್ಗೆ ಚರ್ಚಿಸಲಾಯಿತು. ರಾತ್ರಿ ೯ ಗಂಟೆ ನಂತರ ಗೋಕರ್ಣಕ್ಕೆ ಒಂದು ಬಸ್ ಬಿಡುವಂತೆ ಕೆಡಿಪಿ ಸದಸ್ಯ ಜಗದೀಶ ಹರಿಕಂತ್ರ ವಿನಂತಿಸಿದರು. ಅಬಕಾರಿ ಇಲಾಖೆ ವಿಷಯಕ್ಕೆ ಸಂಬಂಧಿಸಿ, ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಶಾಸಕರು ಸೂಚಿಸಿದರು.ಯಶಸ್ವಿನಿ ಯೋಜನೆ ನೋಂದಣಿ ಹಾಗೂ ನವೀಕರಣಕ್ಕೆ ಮಾರ್ಚ್ ೩೧ ರವರೆಗೆ ಅವಕಾಶ ನೀಡಲಾಗಿದೆ. ಅದರೆ ಮಣಿಪಾಲ, ಯೇನಪೋಯದಂತಹ ಪ್ರಸಿದ್ಧ ಆಸ್ಪತ್ರೆಗಳಲ್ಲೂ ಯಶಸ್ವಿನಿ ಯೋಜನೆಯ ನೈಜ ಲಾಭ ಜನರಿಗೆ ಸಿಗುತ್ತಿಲ್ಲ. ನೆಟ್‌ವರ್ಕ್ ಆಸ್ಪತ್ರೆಗಳ ಬಗ್ಗೆ ಜನರಿಗೆ ಮಾಹಿತಿ ಪ್ರಚಾರ ಅಗತ್ಯವಿದೆ. ಆಯುಷ್ಮಾನ ಯೋಜನೆಯ ಸ್ಥಿತಿಯೂ ಹೀಗೇ ಆಗಿದೆ ಎಂಬ ವಿಷಯ ಚರ್ಚೆಯಾಯಿತು.
ಕೆಡಿಪಿ ಸದಸ್ಯ ರಾಜಗೋಪಾಲ ಅಡಿ ಮಾತನಾಡಿ, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಸಾರ್ವಜನಿಕರ ಅನುಕೂಲತೆ ದೃಷ್ಟಿಯಿಂದ ಮೊದಲಿದ್ದಂತೆ ಬೆಳಗ್ಗೆ ೬ ಗಂಟೆಯಿಂದ ೧೨.೩೦ ಹಾಗೂ ಸಂಜೆ ೫ ರಿಂದ ೮.೧೫ರವರೆಗೆ ಗಂಟೆಯವರೆಗೆ ಉಪಾಧಿವಂತ ವೈದಿಕರ ಮೂಲಕ ಭಕ್ತಾದಿಗಳಿಗೆ ಪೂಜೆಗೆ ಅವಕಾಶ ನೀಡಬೇಕು ಎಂದರು.ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಪ್ರತಿಕ್ರಿಯಿಸಿ, ಈ ವಿಚಾರ ದೇವಾಲಯದ ಪ್ರಸ್ತುತ ಆಡಳಿತ ಸಮಿತಿಯಿಂದ ಆಗಬೇಕಾಗಿದೆ ಎಂದರು. ಭಕ್ತಾದಿಗಳ ಅನುಕೂಲಕ್ಕಾಗಿ ಆಗಬೇಕಾದ ಕೆಲಸ ಇದು. ನೀವು ಪ್ರಸ್ತಾವನೆ ಕಳುಹಿಸಿ ಎಂದು ತಹಸೀಲ್ದಾರರಿಗೆ ಶಾಸಕ ಶೆಟ್ಟಿ ಸೂಚಿಸಿದರು. ಪಶುಸಂಗೋಪನಾಧಿಕಾರಿ ಡಾ. ವಿಶ್ವನಾಥ ಹೆಗಡೆ ಇತರ ಅಧಿಕಾರಿಗಳಿದ್ದರು.