ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪಟ್ಟಣ ವ್ಯಾಪ್ತಿಯ ದುರವಸ್ಥೆಗೀಡಾದ ರಸ್ತೆಯಿಂದಾಗಿ ಜನರು ಹೈರಾಣಾಗುತ್ತಿದ್ದಾರೆ. ಪಟ್ಟಣ ಸೇರಿದಂತೆ ಇಲ್ಲಿನ ಬೇತು ರಸ್ತೆ, ಹಳೆ ತಾಲೂಕು ರಸ್ತೆಗಳಲ್ಲಿ ಹೊಂಡ ಗುಂಡಿಗಳಾಗಿದ್ದು, ಸಂಚಾರ ದುಸ್ತರವಾಗಿದೆ. ಪಾದಚಾರಿಗಳು, ಪ್ರಯಾಣಿಕರು ವಾಹನ ಚಾಲಕರು ಹಿಡಿಶಾಪ ಹಾಕುವಂತಾಗಿದೆ.

ಮಳೆಗಾಲಕ್ಕೂ ಮುನ್ನ ಅದ್ವಾನಗೊಂಡ ರಸ್ತೆಗಳನ್ನು ದುರಸ್ತಿಪಡಿಸಲಾಗುವುದು ಎಂಬ ಆಶಾಭಾವನೆಯೊಂದಿಗೆ ಹೊಂಡ ಗುಂಡಿಗಳ ರಸ್ತೆಗಳಲ್ಲಿ ಸವಾರರು ಸಂಚರಿಸುತ್ತಿದ್ದರು. ಜನಪ್ರತಿನಿಧಿಗಳ ಭರವಸೆ ಭರವಸೆಯಾಗಿಯೇ ಉಳಿದಿದ್ದು ಇದೀಗ ಮಳೆ ಸುರಿಯುತ್ತಿದ್ದು, ಹೊಂಡಗಳಲ್ಲಿ ನೀರು ತುಂಬಿಕೊಂಡು ವಾಹನ ಚಾಲಕರು ವಾಹನ ಚಾಲನೆ ಮಾಡಲು ಹರ ಸಾಹಸ ಪಟ್ಟರೆ ಇತ್ತ ಪಾದಚಾರಿಗಳ ಮೇಲೆ ಕೆಸರಿನ ಸಿಂಚನವಾಗುತ್ತಿದೆ.

ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಕೆಲವೊಮ್ಮೆ ರಸ್ತೆಗೂ ಬಿದ್ದು ಕಷ್ಟಪಟ್ಟು ತೆರಳುವಂತಾಗಿದೆ.


ಪಟ್ಟಣದಿಂದ ಹಳೆ ತಾಲೂಕಿಗೆ ತೆರಳುವ ನಾಪೋಕ್ಲು ಭಾಗಮಂಡಲ ಮುಖ್ಯ ರಸ್ತೆಯ ಕೆಪಿಎಸ್ ಶಾಲೆ ಬಳಿ, ಪೊನ್ನು ಮುತ್ತಪ್ಪ ದೇವಾಲಯದ ಬಳಿ ಹಾಗೂ ನೂತನವಾಗಿ ನಿರ್ಮಾಣಗೊಂಡಿರುವ ಪೆಟ್ರೋಲ್ ಬಂಕ್ ಬಳಿ ಡಾಮರ್‌ ಎಂಬುದೇ ಇಲ್ಲ. ಎಲ್ಲೆಂದರಲ್ಲಿ ಗುಂಡಿಗಳಾಗಿದ್ದು, ವಾಹನಗಳು ಎದ್ದು ಬಿದ್ದು ಸಂಚರಿಸುವಂತಾಗಿದೆ.

ಬೇತು ಗ್ರಾಮಕ್ಕೆ ತೆರಳುವ ನಾಪೋಕ್ಲು ಪಾರಾಣೆ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ರಸ್ತೆ ಸಂಚಾರ ದುಸ್ತರವಾಗಿದೆ. ಪಟ್ಟಣದಿಂದ ಅನತಿ ದೂರಕ್ಕೆ ತೆರಳುತ್ತಿದ್ದಂತೆ ರಸ್ತೆ ಮಧ್ಯದಲ್ಲಿ ದೊಡ್ಡ ಹೊಂಡ ಇದ್ದು ವಾಹನಗಳು ಗುಂಡಿಗೆ ಬಿದ್ದೇ ಮುಂದೆ ಸಾಗಬೇಕಾಗಿದೆ. ಇಲ್ಲಿ ರಸ್ತೆ ಎಂಬುದೇ ಗೋಚರಿಸುವುದಿಲ್ಲ. ಮಳೆಗಾಲಕ್ಕೂ ಮುನ್ನ ರಸ್ತೆ ಹೊಂಡಗಳನ್ನು ಮುಚ್ಚಿ ಒಂದಷ್ಟು ದುರಸ್ತಿ ಕಾರ್ಯ ಮಾಡಿದ್ದರೆ ಜನಸಾಮಾನ್ಯರಿಗೆ ಅನುಕೂಲವಾಗುತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಮುಖ್ಯ ರಸ್ತೆ ಬಿಟ್ಟು ಬೇತು ಗ್ರಾಮದಿಂದ ಸಸ್ಯ ಕ್ಷೇತ್ರಕ್ಕೆ ತೆರಳುವ ಕವಲು ದಾರಿಯಲ್ಲಿ ಹಲವು ವಾಹನಗಳು ಇದೀಗ ಸಂಚರಿಸುತ್ತಿವೆ. ಈ ರಸ್ತೆ ಪೂರ್ಣ ಹದಗೆಟ್ಟಿದೆ. ಕೆಲವು ಭಾಗಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಮಡಿಕೇರಿ ರಸ್ತೆಯಿಂದ ಬೇತು ಗ್ರಾಮಕ್ಕೆ ತೆರಳುವ ಈ ಕವಲು ರಸ್ತೆಯ ಅಲ್ಪ ಭಾಗವನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಇನ್ನುಳಿದ ಭಾಗ ಕಿತ್ತು ಹೋಗಿ ರಸ್ತೆ ಎಲ್ಲಿ ಎಂಬುದೇ ಕಾಣಿಸದಂತಾಗಿದೆ. ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಇನ್ನಷ್ಟು ಮಳೆಗಾಲದ ಕಳೆಯಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ನಾಪೋಕ್ಲು ಭಾಗಮಂಡಲ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಂದೋದಗಿದೆ. ಕನಿಷ್ಠ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿಲ್ಲ. ಯುದ್ಧದ ಕಾರಣದಿಂದ ಡಾಮರ್‌ ರುತ್ತಿಲ್ಲ ಎಂದು ಶಾಸಕರು ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಜನರನ್ನು ಮೂರ್ಖರನ್ನಾಗಿಸುವುದು ಬೇಡ. ನಾಗರಿಕರು ಎಚ್ಚೆತ್ತು ರಸ್ತೆ ಅವ್ಯವಸ್ಥೆ ವಿರುದ್ಧ ಹೋರಾಟ ನಡೆಸಲಿದ್ದೇವೆ.

-ಸಿ.ಎಂ.ರಫೀಕ್ , ಎಮ್ಮೆ ಮಾಡು ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಪಟ್ಟಣದಿಂದ ಮಕ್ಕಿ ಶಾಸ್ತಾವು ದೇವಾಲಯದ ರಸ್ತೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದೆ. ರಸ್ತೆ ದುರಸ್ತಿಪಡಿಸಿ ಎರಡು ಮೂರು ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಹಾಳಾಗಿದೆ. ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲಾರದ ಆಡಳಿತ ವ್ಯವಸ್ಥೆಯನ್ನು ಖಂಡಿಸುತ್ತೇವೆ.

-ಮುಂಡಂಡ ಶಾಂತ, ಕಾಫಿ ಬೆಳೆಗಾರ ಹಳೆ ತಾಲೂಕು

ಪಟ್ಟಣ ವ್ಯಾಪ್ತಿಯ ಗುಂಡಿ ಬಿದ್ದ ರಸ್ತೆಗಳಲ್ಲಿ ಆಟೋ ಚಾಲನೆ ಮಾಡುವುದು ದುಸ್ತರವಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವುದು ಕಷ್ಟಕರವಾಗಿದೆ. ರಸ್ತೆ ದುರಸ್ತಿಗೆ ಯಾರೂ ಮುಂದಾಗುತ್ತಿಲ್ಲ.

-ಮಂಜುನಾಥ್ ,ಆಟೋ ಚಾಲಕ ನಾಪೋಕ್ಲು.

ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸುವುದು ದ್ವಿಚಕ್ರ ವಾಹನ ಚಾಲಕರಿಗೆ ಬಹಳ ಸಮಸ್ಯೆ ತಂದೊಡ್ಡಿದೆ. ನಾಗರಿಕರ ಗೋಳನ್ನು ಕೇಳುವವರಿಲ್ಲ.

-ಟಿ.ಪಿ ಮುತ್ತಣ್ಣ, ಪೇರೂರು ಗ್ರಾಮ.

ನಾಪೋಕ್ಲು ಹಳೆ ತಾಲೂಕು ರಸ್ತೆಯ ಶ್ರೀ ಮುತ್ತಪ್ಪ ದೇವಾಲಯ ಬಳಿ, ಕೆಪಿಎಸ್ ಶಾಲೆ ಬಳಿ ರಸ್ತೆ ಸಂಪೂರ್ಣ ಗುಂಡಿ ಮಯವಾಗಿದೆ. ನಾಪೋಕ್ಲು ಭಾಗಮಂಡಲ ಮುಖ್ಯ ರಸ್ತೆಯ ಅಯ್ಯಂಗೇರಿವರೆಗೆ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ದ್ವಿಚಕ್ರ ವಾಹನ ಚಾಲಕರು ಗುಂಡಿಗಳಲ್ಲಿ ಬಿದ್ದು ತೊಂದರೆಗೊಳಗಾಗಿದ್ದಾರೆ.

-ವಿಜಯನ್, ನಾಪೋಕ್ಲು

ಇದೀಗ ಮಳೆಗಾಲ ಪ್ರಾರಂಭವಾಗಿದೆ. ಈಗಾಗಲೇ ಬಹಳಷ್ಟು ರಸ್ತೆಗಳು ಶೋಚನಿಯ ಸ್ಥಿತಿಯಲ್ಲಿವೆ. ಮುಂದಿನ ದಿನಗಳನ್ನು ಊಹಿಸಲು ಅಸಾಧ್ಯ. ಕಾಟಾಚಾರಕ್ಕೆ ಗುಂಡಿಗಳನ್ನು ಮುಚ್ಚಿದ್ದು, ಯಾವುದೇ ಪ್ರಯೋಜನ ಇಲ್ಲದಾಗಿ ನಡೆದಾಡಲು ಅಸಾಧ್ಯವಾಗಿದೆ.

-ಚಂಬರಂಡ ಸಾಧಲಿ ಎಮ್ಮೆಮಾಡು