ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ

| Published : Sep 23 2024, 01:16 AM IST

ಸಾರಾಂಶ

ಲಿಂಗಾಯತ ತತ್ವದ ಇತಿಹಾಸದ ಬೇರನ್ನು ಅಲುಗಾಡಿಸುವ ಹಾಗೂ ಅದರ ಬುಡಕ್ಕೆ ಕೈ ಹಾಕುವ ಕೆಲಸ ಮಾಡಿದ್ದಾರೆ

ಗದಗ: ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಲಿಂಗಾಯತರಲ್ಲಿಯೇ ಒಡಕು ಮೂಡಿಸುವ ಹುನ್ನಾರ ನಿರಂತರವಾಗಿ ನಡೆಸುತ್ತಲೇ ಬಂದಿದ್ದಾರೆ. ವಚನ ದರ್ಶನ ಕೃತಿ ಒಂದು ನಿರ್ದಶನ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಎಂ. ಜಾಮದಾರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತರಿಂದ ಬರೆಯಿಸಿ, ಲಿಂಗಾಯತರಿಂದ ಸಂಪಾದಿಸಿದ ಪುಸ್ತಕವನ್ನು ಅರೆಸ್ಸೆಸ್ ಪ್ರಕಾಶನ ಮಾಡಿದ್ದು ಏಕೆ? ಅಷ್ಟೇ ಅಲ್ಲ, ಈ ಪುಸ್ತಕ ಬೆಂಗಳೂರು, ವಿಜಯಪುರ, ಹಾವೇರಿ, ರಾಣಿಬೆನ್ನೂರ, ಕಲಬುರ್ಗಿ, ಬೆಳಗಾವಿ ಸೇರಿ ಒಂಭತ್ತು ಸ್ಥಳಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜ್ಯದವರೇ ಆದ ಆರೆಸ್ಸೆಸ್‌ನ ಪ್ರಮುಖ ಹೊಸಬಾಳೆ ಸೇರಿ ನಾಗ್ಪುರದಿಂದ ಮೂವರು ಆರೆಸ್ಸೆಸ್‌ನವರು ಯಾಕೆ ಬಂದಿದ್ದರು ಎಂದು ಪ್ರಶ್ನಿಸಿದರು.

ಗದುಗಿನವರೇ ಆದ ಸದಾಶಿವಾನಂದ ಸ್ವಾಮೀಜಿ ವಚನ ದರ್ಶನ ಕೃತಿ ಸಂಪಾದಿಸಿದವರು. ಆದರೆ, ಈ ಕೃತಿ ಶರಣರ ಮೂಲ ಆಶಯಕ್ಕೆ ಧಕ್ಕೆ ತರುವಂತಹದಾಗಿದ್ದು. ಲಿಂಗಾಯತ ತತ್ವದ ಇತಿಹಾಸದ ಬೇರನ್ನು ಅಲುಗಾಡಿಸುವ ಹಾಗೂ ಅದರ ಬುಡಕ್ಕೆ ಕೈ ಹಾಕುವ ಕೆಲಸ ಮಾಡಿದ್ದಾರೆ. ಹಿಂದುತ್ವ ಎಂಬುದು ರಾಷ್ಟ್ರದ ಸಂಕೇತ ಹೊರತು, ಧರ್ಮದ ಸಂಕೇತವಲ್ಲ ಎಂದರು.

ವಚನ ದರ್ಶನ ಕೃತಿಯನ್ನು ಬರೆದವರು ಲಿಂಗಾಯತ ತತ್ವ ಒಪ್ಪದವರು. ವಚನ ದರ್ಶನದ ಲೋಪದೋಷ ಖಂಡಿಸಿದವವರ ಮೇಲೆ ಹಿಂಸೆಗೆ ಪ್ರಚೋದಿಸುತ್ತಿರುವುದು ಸರಿಯಲ್ಲ. ವಚನಗಳನ್ನೂ ತಿರುಚಿದ್ದಾರೆ. 237 ಶರಣರು ಬರೆದಿರುವ ವಚನಗಳು ಕಸುಬಿನ, ಕಾಯಕದ ಅನುಭಾವದಡಿ ಬಂದಂಥವು. 23000 ವಚನಗಳು ಅನುಭವ ಮಂಟಪದ 787 ಜನರ ಮುಂದೆ ಚರ್ಚೆಯಾಗಿ ಒಪ್ಪಿದಂಥವು. ವಚನಗಳು ಕನ್ನಡ ಉಪನಿಷತ್‌ಗಳು ಎಂದು ಹೋಲಿಕೆ ಮಾಡಿದ್ದಾರೆಯೇ ಹೊರತು ಇವಾವೂ ಉಪನಿಷತ್‌ಗಳ ತರ್ಜುಮೆಯಲ್ಲ ಎಂದು ಹೇಳಿದರು.

ವಚನ ದರ್ಶನ ಪುಸ್ತಕದಲ್ಲಿ 648 ವಚನಗಳಲ್ಲಿ ಸಂಸ್ಕೃತ ಶ್ಲೋಕ ಸೇರಿಸಿದ್ದಾರೆ. ಇವು ಬಂದಿದ್ದು ಎಲ್ಲಿಂದ? 250 ವಚನಗಳಲ್ಲಿ ವೀರಶೈವ ಶಬ್ದ ಬಳಸಿದ್ದಾರೆ. ಬಸವಣ್ಣ ವೈದಿಕ, ಅವನು ಲಿಂಗಾಯತ ಆಗಲಿಲ್ಲ ಎಂಬೆಲ್ಲ ಹಸಿಸುಳ್ಳು ಹೇಳುವ ಪ್ರಯತ್ನ ಈ ವಚನ ದರ್ಶನದ ಹಿಂದಿದೆ. ವಚನ ದರ್ಶನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಂಕರಾನಂದ ಭಾರತಿ ಸ್ವಾಮೀಜಿ ವಚನಗಳನ್ನು ಯಾರೂ ಬರೆದಿಲ್ಲ, 237 ಶರಣರ ಅಸ್ತಿತ್ವವೇ ಇಲ್ಲ. ವಚನ ಚಳವಳಿ ನಡೆದಿಲ್ಲ, ಕಲ್ಯಾಣ ಕ್ರಾಂತಿ ಆಗಿಲ್ಲ ಎಂಬ ಹೇಳಿಕೆಯಿಂದ ನೋವಾಗಿದ್ದು, ಇದನ್ನು ಮಹಾಸಭಾ ಉಗ್ರವಾಗಿ ಖಂಡಿಸಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆಂಪಗೌಡ್ರ ಮಾತನಾಡಿ, ವಚನ ದರ್ಶನ ಪುಸ್ತಕದ ಮುಖಪುಟದಲ್ಲಿ ಬಸವಣ್ಣನ ಮುಖವನ್ನೇ ವಿರೂಪಗೊಳಿಸಿದ್ದಾರೆ. ಭಾವಚಿತ್ರದಲ್ಲಿ ಲಿಂಗವನ್ನೂ ಕಟ್ಟಿಲ್ಲ. ಅಂತಹ ಚಿತ್ರ ಇತಿಹಾಸದಲ್ಲೇ ಇಲ್ಲ. ಇತಿಹಾಸದ ಸತ್ಯ ಪೌರಾಣಿಕಗೊಳಿಸುವ ಹುನ್ನಾರ ಅವರದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಜೆ.ಬಿ. ಪಾಟೀಲ, ಕೇಂದ್ರ ಸಮಿತಿ ಸದಸ್ಯ ಅಶೋಕ ಬರಗುಂಡಿ, ಬಸವರಾಜ ಬುಳ್ಳಾ, ರೊಟ್ಟಿ ಬಸವರಾಜ, ಧನ್ನೂರ ಬಸವರಾಜ, ಗೊಂಗಡಶೆಟ್ಟಿ, ಪ್ರಭುಲಿಂಗ, ಜಾಗತಿಕ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ, ಶೇಖಣ್ಣ ಕವಳಿಕಾಯಿ, ಡಾ.ಜಿ.ಬಿ. ಪಾಟೀಲ, ಪ್ರಕಾಶ ಅಸುಂಡಿ, ಬಸವರಾಜ ಹಡಗಲಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ರೀದೇವಿ ಶೆಟ್ಟರ ಸೇರಿ ಹಲವರಿದ್ದರು.