ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಆರೋಗ್ಯವಾಗಿರಲು ಪೌಷ್ಟಿಕ ಆಹಾರಗಳು ಅಗತ್ಯವಾಗಿದ್ದು, ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ಸರಿಯಲ್ಲ. ಸಣ್ಣ ಅರೋಗ್ಯ ಸಮಸ್ಯೆಗೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ ಹೇಳಿದರುಅವರು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ.ದ.ಕ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ನಗರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಣ ಅಭಿಯಾನ ಯೋಜನೆಯಡಿ ನಗರದ ರಾಜ್ಯ ಸರ್ಕಾರಿ ನೌಕರರ ಸಂಘ ಸಭಾವನದಲ್ಲಿ ನಡೆದ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಆಹಾರವನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವ ಮೂಲಕ ಆರೋಗ್ಯದಲ್ಲಿ ಸಮತೋಲನ ಆಯ್ದುಕೊಳ್ಳಬಹುದು. ಸರ್ಕಾರದ ವತಿಯಿಂದ ಅಂಗನವಾಡಿಗಳಿಗೆ ನೀಡಲಾಗುವ ಪುಷ್ಠಿ ಆಹಾರವನ್ನು ಹೆಚ್ಚಾಗಿ ಬಳಕೆ ಮಾಡದೇ ಇರುವುದು ವಿಷಾದಕರ. ಪುಷ್ಟಿ ಆಹಾರ ಪೌಡರ್ ಬಹಳಷ್ಟು ಪೌಷ್ಟಿಕಾಂಶವನ್ನು ಹೊಂದಿದ್ದು ಅದರಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಉಪಯೋಗಿಸಬೇಕು ಎಂದರು.
ಅಂಗನವಾಡಿಗಳಿಂದ ಜಿಲ್ಲೆಯಲ್ಲಿ ಉತ್ತಮ ರೀತಿಯ ಕೆಲಸಗಳಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರನ್ನು ಅವರು ಅಭಿನಂದಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಮಾತನಾಡಿ, ತಾಯಿ-ಮಗು ಮರಣ ಪ್ರಮಾಣ ಕಡಿಮೆಯಾಗ ಬೇಕಾದರೆ ತಾಯಿ ಮತ್ತು ಮಗುವಿಗೆ ಪೌಷ್ಟಿಕ ಆಹಾರದ ಅಗತ್ಯ ಇದೆ. ತಾಯಿಯು ಪೌಷ್ಟಿಕ ಆಹಾರವನ್ನು ಸೇವಿಸಿದಲ್ಲಿ ಅರೋಗ್ಯವಂತ ಮಗು ಜನನವಾಗಲಿದೆ ಎಂದರು.ಮಗುವಿಗೆ ಎದೆ ಹಾಲನ್ನು ನೀಡಿದ ನಂತರ ಮಗುವಿನ ತೇಗು ತೆಗೆಯಬೇಕು. ಇಲ್ಲದಿದ್ದರೆ ಹಾಲಿನೊಂದಿಗೆ ಗಾಳಿಯು ಮಗುವಿನ ಒಳಗೆ ಸೇರಿ ಮಗು ಮರಣ ಹೊಂದುವ ಸಾಧ್ಯತೆ ಇರುವುದರಿಂದ ಹಾಲುಣಿಸಿದ ಕೂಡಲೇ ತೇಗು ತೆಗೆಯಬೇಕು. ಮಗುವಿಗೆ ಹಾಲುಣಿಸುವ ಪ್ರಕ್ರಿಯೆಯಲ್ಲಿ ತಾಯಿ ಜಾಗರೂಕತೆಯಿಂದ ಸೂಕ್ಷ್ಮವಾಗಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಪುಷ್ಟಿ ಆಹಾರ ಪೌಡರ್‌ನಿಂದ ತಯಾರಿಸಲಾದ ಕೇಕ್‌ನ್ನು ಕತ್ತರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಅನ್ನಪ್ರಾಶನ ನಡೆಸಲಾಯಿತು.9 ಮಂದಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಗರ್ಭಿಣಿಯರಿಗೆ, ಮಕ್ಕಳಿಗೆ ಆಯುಷ್ ಇಲಾಖೆಯ ವತಿಯಿಂದ ನ್ಯೂಟ್ರಿ ಕಿಟ್ ವಿತರಿಸಲಾಯಿತು. ಪುಷ್ಟಿ ಆಹಾರ ಪೌಡರ್ ಹಾಗೂ ವಿವಿಧ ಪದಾರ್ಥಗಳಿಂದ ತಯಾರಿಸಿದ ಖಾದ್ಯಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಹೊಳ್ಳ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಇಕ್ಬಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ, ಗ್ರಾಮಾಂತರ ಶಿಶು ಅಭಿವೃದ್ಧಿ ಅಧಿಕಾರಿ ಶೈಲಾ, ಪ್ರೇಮಾ ಮತ್ತಿತರರು ಇದ್ದರು.
----------ಮೊಬೈಲ್ ನೀಡಿ ಆಹಾರ ಕೊಡುವುದು ಸರಿಯಲ್ಲಮೊಬೈಲ್ ನೀಡುತ್ತಾ ಮಗುವಿಗೆ ಆಹಾರ ನೀಡುವುದು ಸರಿಯಲ್ಲ. ಮಕ್ಕಳಿಗೆ ಪ್ರತಿನಿತ್ಯ ಜಂಕ್‍ಫುಡ್‌ಗಳನ್ನು ನೀಡಬಾರದು. ಇದು ಮಗುವಿನ ಜೀರ್ಣಕ್ರಿಯೆ ಹಾಗೂ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಸಮತೋಲನ ಆಹಾರ ಕ್ರಮದಿಂದ ಬೇಗ ಮುಟ್ಟಾಗುವ ಪ್ರಕ್ರಿಯೆಯನ್ನು ಕಾಣುತ್ತೇವೆ. ಅವರಿಗೂ ಕೂಡ ಹೆಚ್ಚಿನ ಪೌಷ್ಟಿಕ ಆಹಾರದ ಅವಶ್ಯಕತೆ ಇದೆ ಎಂದರು. ಮಾರುಕಟ್ಟೆಯಿಂದ ತರುವ ಕೀಟನಾಶಕ ಸಿಂಪಡಣೆ ಇರುವ ತರಕಾರಿಗಳನ್ನು ಉಪಯೋಗಿಸುವ ಮೊದಲು 20 ನಿಮಿಷ ಉಪ್ಪು ನೀರಿನಲ್ಲಿ ನೆನೆಸಿಟ್ಟು ನಂತರ ಉಪಯೋಗಿಸುವಂತೆ ಡಾ.ಸುಜಯ್ ತಿಳಿಸಿದರು.