ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ವಿಶ್ವವಿದ್ಯಾಲಯದಿಂದ ಕಾಲೇಜು ಶಿಕ್ಷಣ ಇಲಾಖೆಗೆ ಸೇರಿದ 11 ಮಂದಿ ಬೋಧಕರು ವರ್ಗಾವಣೆಗೊಂಡಿದ್ದಾರೆ. ಇದರಿಂದ ವಿಶ್ವ ವಿದ್ಯಾಲಯದಲ್ಲಿ ಕೇವಲ 12 ಬೋಧಕರಷ್ಟೇ ಉಳಿದುಕೊಂಡಿದ್ದು, ಅತಿಥಿ ಉಪನ್ಯಾಸಕರ ನೇಮಕಾತಿ ಪೂರ್ಣಗೊಳ್ಳದಿರುವುದರಿಂದ ವಿದ್ಯಾರ್ಥಿಗಳಿಗೆ ತ್ರಿಶಂಕು ಸ್ಥಿತಿ ಎದುರಾಗಿದೆ.
ವಿಶ್ವ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 23 ಮಂದಿ ಕಾಯಂ ಬೋಧಕರ ಪೈಕಿ ಪ್ರಭಾರ ಮೌಲ್ಯಮಾಪನ ಕುಲಸಚಿವ ಯೋಗಾನರಸಿಂಹಚಾರಿ ಸೇರಿದಂತೆ 11 ಮಂದಿ ವರ್ಗಾವಣೆಯಾಗಿರುವುದರಿಂದ ಸದ್ಯ 12 ಮಂದಿ ಬೋಧಕರಷ್ಟೇ ಕಾಲೇಜಿನಲ್ಲಿ ಉಳಿದುಕೊಂಡಿದ್ದಾರೆ. 4 ಸಾವಿರ ವಿದ್ಯಾರ್ಥಿಗಳಿಗೆ 12 ಮಂದಿ ಬೋಧಕರಿದ್ದು ಪಠ್ಯವಿಷಯಗಳ ಬೋಧನೆಗೆ ತೀವ್ರ ಹಿನ್ನೆಡೆಯಾಗಿದೆ. ಬಹುತೇಕ ತರಗತಿಗಳೇ ನಡೆಯದಂತಹ ಪರಿಸ್ಥಿತಿ ಇದ್ದು, ಬೋಧಕರು, ಅತಿಥಿ ಉಪನ್ಯಾಸಕರಿಲ್ಲದ ಕಾರಣ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ದೂರವೇ ಉಳಿದಿದ್ದಾರೆ.ಇನ್ನೊಂದೆಡೆ ವರ್ಗಾವಣೆಗೊಂಡಿರುವ ಬೋಧಕ ಸಿಬ್ಬಂದಿ ಪೈಕಿ ಕೆಲವರು ಮಂಡ್ಯ ವಿಶ್ವವಿದ್ಯಾಲಯದಲ್ಲೇ ಉಳಿದುಕೊಳ್ಳುವ ಸಲುವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂಕಪಟ್ಟಿ ಸರಿಪಡಿಸಿಲ್ಲ:ಮಂಡ್ಯ ವಿಶ್ವವಿದ್ಯಾಲಯದಿಂದ ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳಿಗೆ ನೀಡಿರುವ ಅಂಕಪಟ್ಟಿ ದೋಷಪೂರಿತವಾಗಿದ್ದರೂ ಅದನ್ನು ಸರಿಪಡಿಸಿಕೊಡುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನೂ ವಿಶ್ವ ವಿದ್ಯಾಲಯದ ಅಧಿಕಾರಿಗಳು ಕೈಗೊಂಡಿಲ್ಲ. ದೋಷಪೂರಿತ ಅಂಕ ಪಟ್ಟಿಯನ್ನು ಮರುಮುದ್ರಣಗೊಳಿಸಿ ನೀಡುವುದಾಗಿ ಹೇಳಿದ ಮಾತು ಬರೀ ಮಾತಾಗಿಯೇ ಉಳಿದುಕೊಂಡಿದೆ.
ಅಂಕ ಪಟ್ಟಿಯಲ್ಲಿ ಸರಿಪಡಿಸಬಹುದಾದ ಸಾಧ್ಯತೆಗಳಿದ್ದರೂ, ಪುನರ್ ಮುದ್ರಣಗೊಂಡ ಅಂಕ ಪಟ್ಟಿಗಳನ್ನು ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ನೀಡಿ ಅವರ ಶೈಕ್ಷಣಿಕ ಭವಿಷ್ಯ ಕಟ್ಟಿಕೊಡಬಹುದಿದ್ದರೂ ವಿಶ್ವ ವಿದ್ಯಾಲಯದ ಅಧಿಕಾರಿಗಳು ಆ ನಿಟ್ಟಿನಲ್ಲಿ ಬದ್ಧತೆ, ಎದೆಗಾರಿಕೆ ಪ್ರದರ್ಶಿಸದಿರುವುದು ಅಂಕ ಪಟ್ಟಿ ಗೊಂದಲಕ್ಕೆ ತೆರೆಬೀಳದಂತಾಗಿದೆ.ವಿದ್ಯಾರ್ಥಿಗಳಿಗೆ ಶುಲ್ಕ ಹೊರೆ:
ಮಂಡ್ಯ ವಿಶ್ವವಿದ್ಯಾಲಯದಲ್ಲಿ ಪಠ್ಯ ವಿಷಯದ ಬೋಧನೆಗೆ ಹಿನ್ನಡೆಯಾಗಿ ತ್ರಿಶಂಕು ಸ್ಥಿತಿ ಎದುರಿಸುತ್ತಿರುವುದರ ನಡುವೆ ವಿದ್ಯಾರ್ಥಿಗಳ ಮೇಲೆ ಪ್ರತಿ ವರ್ಷ ಶೇ.10ರಷ್ಟು ಶುಲ್ಕ ಹೊರೆ ಬೀಳುತ್ತಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಇದುವರೆಗೂ ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಇನ್ನೂ ಒಂದು ತಿಂಗಳು ಕಾಲಾವಕಾಶ ಬೇಕಿದೆ. ಒಟ್ಟು ಮೂರು ತಿಂಗಳ ಕಾಲ ವಿದ್ಯಾರ್ಥಿಗಳು ತರಗತಿಗಳಲ್ಲಿ ಬೋಧನೆ ಇಲ್ಲದೆ ಖಾಲಿ ಕೂರುವಂತಹ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆ ಶುಲ್ಕ ಏರಿಕೆ ವಿದ್ಯಾರ್ಥಿಗಳಿಗೆ ತಲೆಬಿಸಿ ಉಂಟುಮಾಡಿದೆ.
ಅತಿಥಿ ಉಪನ್ಯಾಸಕರ ಬಗ್ಗೆ ವಿಶ್ವಾಸವಿಲ್ಲ:ಮಂಡ್ಯ ವಿಶ್ವವಿದ್ಯಾಲಯಕ್ಕೆ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ. ಮಂಡ್ಯ ವಿಶ್ವ ವಿದ್ಯಾಲಯದ ಬೋಧಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತಗೊಳ್ಳುತ್ತಿದೆ. ಸರ್ಕಾರದಿಂದ ಕಾಯಂ ಶಿಕ್ಷಕರ ನೇಮಕಾತಿ ದೂರದ ಮಾತೇ ಆಗಿದೆ. ವಿಶ್ವ ವಿದ್ಯಾಲಯದ ಆಧಾರಸ್ತಂಭದಂತಿರುವ ಅತಿಥಿ ಉಪನ್ಯಾಸಕರನ್ನು ದೂರವಿಟ್ಟು ಘಟಕೋತ್ಸವ ನಡೆಸಲಾಯಿತು. ಇದೀಗ ಶೈಕ್ಷಣಿಕ ಸಾಲು ಮತ್ತೆ ಆರಂಭಗೊಂಡಿರುವುದರಿಂದ ಅತಿಥಿ ಉಪನ್ಯಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ವಿವಿಗೆ ಸವಾಲಾಗಿ ಪರಿಣಮಿಸಿದೆ.
ಅತಿಥಿ ಉಪನ್ಯಾಸಕರು ಕೇವಲ ಬೋಧನೆಗೆ ಮಾತ್ರ ಸೀಮಿತರಾಗಿರದೆ ಎನ್‌ಎಸ್‌ಎಸ್, ಎನ್‌ಸಿಸಿ, ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸುವುದಕ್ಕೂ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದೆ. ವಿಶ್ವ ವಿದ್ಯಾಲಯದವರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೌರವದಿಂದ ನಡೆಸಿಕೊಳ್ಳದಿರುವುದರಿಂದ ಮುಂಬರುವ ಅತಿಥಿ ಉಪನ್ಯಾಸಕರ ಕಾರ್ಯವೈಖರಿ ಹೇಗಿರುತ್ತದೆ ಎನ್ನುವುದೂ ಗಮನಾರ್ಹವಾಗಿದೆ.ವಿವಿಗೆ ಆರ್ಥಿಕ ಶಕ್ತಿ ಇಲ್ಲ:
ಮಂಡ್ಯ ವಿಶ್ವ ವಿದ್ಯಾಲಯ ಸ್ವತಂತ್ರವಾಗಿ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅವರಿಗೆ ಸಂಭಾವನೆ ಕೊಡುವ ಮೂಲಕ ವಿಶ್ವ ವಿದ್ಯಾಲಯವನ್ನು ಮುನ್ನಡೆಸುವಷ್ಟು ಆರ್ಥಿಕ ಶಕ್ತಿ ಹೊಂದಿಲ್ಲ. ಪ್ರಸಕ್ತ ವರ್ಷ ರಾಜ್ಯ ಸರ್ಕಾರ ಮಂಡ್ಯ ವಿಶ್ವ ವಿದ್ಯಾಲಯಕ್ಕೆ ಕೇವಲ 15 ಲಕ್ಷ ರು. ಮಾತ್ರ ನೀಡಿದೆ. ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನವೂ ಬಾರದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲ ಕಲ್ಪಿಸಿಕೊಡುವುದಕ್ಕೆ ಪೂರಕವಾದ ಸೌಲಭ್ಯ ಒದಗಿಸಿಕೊಡಲಾಗುತ್ತಿಲ್ಲ. ಇದರ ನಡುವೆ ಹೊಸದಾಗಿ ಸ್ಥಾಪಿತಗೊಂಡಿರುವ ವಿಶ್ವ ವಿದ್ಯಾಲಯಗಳಿಗೆ ಆರ್ಥಿಕ ಚೈತನ್ಯವನ್ನು ನೀಡುವುದಕ್ಕೆ ಸರ್ಕಾರಗಳೂ ಮುಂದಾಗದಿರುವುದು ವಿವಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ.ಇದೇ ಕಾರಣದಿಂದ ಪ್ರತಿ ವರ್ಷವೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಡುವಂತೆ ಮಂಡ್ಯ ವಿಶ್ವ ವಿದ್ಯಾಲಯದವರು ಸರ್ಕಾರದ ಮೊರೆ ಹೋಗುತ್ತಿದ್ದಾರೆ. ಇದೇ ಪ್ರಕ್ರಿಯೆ ಮುಂದಿನ ಹಲವು ವರ್ಷಗಳವರೆಗೆ ಮುಂದುವರೆಯಲಿದೆ. ಅತಿಥಿ ಉಪನ್ಯಾಸಕರೇ ಕಾಯಂ ಆಗಿ ಉಳಿದರೂ ಅಚ್ಚರಿಪಡಬೇಕಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಜನಪ್ರತಿನಿಧಿಗಳಿಗೂ ಆಸಕ್ತಿ ಇಲ್ಲ
ಮಂಡ್ಯ ವಿಶ್ವ ವಿದ್ಯಾಲಯದಲ್ಲಿರುವ ಅವ್ಯವಸ್ಥೆ, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು, ಬೋಧಕ ಸಿಬ್ಬಂದಿ ಇಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಮಂಡ್ಯ ವಿಶ್ವ ವಿದ್ಯಾಲಯಕ್ಕೆ ಸುಭದ್ರ ನೆಲಗಟ್ಟು ಒದಗಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಯಾರೊಬ್ಬರೂ ಆಸಕ್ತಿಯನ್ನೇ ತೋರದಿರುವುದು ದುರದೃಷ್ಟಕರ ಸಂಗತಿಯಾಗಿದೆ.ಶೈಕ್ಷಣಿಕ ಮಂಡಳಿ ಸದಸ್ಯರಾಗಿರುವ ಮಧು ಜಿ.ಮಾದೇಗೌಡ ಅವರು ವಿಶ್ವ ವಿದ್ಯಾಲಯದವರ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಕುರಿತಂತೆ ಚರ್ಚಿಸಿದ್ದಾರೆ. ಅವುಗಳನ್ನು ಪರಿಹರಿಸುವುದಕ್ಕೆ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ನಿಂತು ಜಿಲ್ಲೆಗೆ ಹೆಮ್ಮೆಯಂತಿರುವ ವಿಶ್ವ ವಿದ್ಯಾಲಯಕ್ಕೆ ಹೊಸ ರೂಪ ನೀಡಿ ಸ್ವತಂತ್ರ ವಿಶ್ವ ವಿದ್ಯಾಲಯವಾಗಿ ಬೆಳವಣಿಗೆ ಕಾಣುವಂತೆ ಮಾಡುವಲ್ಲಿಯೂ ನಿರಾಸಕ್ತಿ ತೋರಿರುವುದರಿಂದ ಮಂಡ್ಯ ವಿಶ್ವವಿದ್ಯಾಲಯದ ಬೆಳವಣಿಗೆ ನಿಂತ ನೀರಾಗಿದೆ. 75 ಕೋಟಿ ರು. ಅನುದಾನ ಅವಶ್ಯ
2021ರಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಕೇಂದ್ರೀಯ ಪ್ರಾಯೋಜಿತ ಯೋಜನೆಯಾದ ರೂಸಾ ಅಭಿವೃದ್ಧಿ ಸಂಸ್ಥೆ ಮೂಲಕ 44 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಕಲಾಭವನ, ಆಡಳಿತ ಭವನ, ಗ್ರಂಥಾಲಯ, ವಾಣಿಜ್ಯ ಭವನ ಮೊದಲನೇ ಮತ್ತು ಎರಡನೇ ಬ್ಲಾಕ್‌ಗಳನ್ನು ನಿರ್ಮಿಸಲಾಗಿತ್ತು. ಈಗ ಈ ಕಟ್ಟಡಗಳಲ್ಲೇ ವಿಶ್ವವಿದ್ಯಾಲಯದ ತರಗತಿಗಳು ನಡೆಯುತ್ತಿವೆ.ರೂಸಾ ಅನುದಾನದಲ್ಲಿ ಕಟ್ಟಡಗಳನ್ನು ಮಾತ್ರ ನಿರ್ಮಿಸಿದ್ದು, 5 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರವೇಶದ್ವಾರ, ಭದ್ರತಾ ಸಿಬ್ಬಂದಿ ಕೊಠಡಿಯನ್ನೊಳಗೊಂಡ ಕಮಾನು, ಕಾಂಪೌಂಡ್ ಗೋಡೆ, ಒಳಚರಂಡಿ ನಿರ್ಮಾಣ. 6 ಕೋಟಿ ರುಪಾಯಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಕ್ರೀಡಾ ಚಟುವಟಿಕೆಗೆ ಹೊರಾಂಗಣ ಕ್ರೀಡಾಂಗಣ, 1 ಕೋಟಿ ರುಪಾಯಿ ವೆಚ್ಚದಲ್ಲಿ ವಾಹನಗಳ ಪಾರ್ಕಿಂಗ್ ಸ್ಥಳ, 10 ಕೋಟಿ ರುಪಾಯಿ ವೆಚ್ಚದಲ್ಲಿ ಕುಲಪತಿ ನಿವಾಸ, ಸಿಬ್ಬಂದಿ ವಸತಿ ಗೃಹ, ವಿವಿದೋದ್ದೇಶದ ಒಳಾಂಗಣ ಆಡಿಟೋರಿಯಂಗೆ 40 ಕೋಟಿ ರುಪಾಯಿ ಸೇರಿದಂತೆ ವಿಶ್ವವಿದ್ಯಾಲಯದ ಆವರಣದೊಳಗೆ ರಸ್ತೆ ನಿರ್ಮಾಣ, ಹಳೆಯ ಕಟ್ಟಡಗಳಿಗೆ ಬಣ್ಣ ಮಾಡಿಸುವುದು ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ 75 ಕೋಟಿ ರುಪಾಯಿ ಅನುದಾನ ಅಗತ್ಯವಿದೆ.