ಧಾರವಾಡ:

ಕಾಂಗ್ರೆಸ್‌ನವರು ಆರ್‌ಎಸ್‌ಎಸ್‌ ವಿರೋಧಿಗಳಾಗಿದ್ದು ಅವರಿಂದ ಒಳ್ಳೆಯದನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಆರ್‌ಎಸ್‌ಎಸ್‌ ನಿನ್ನೆ, ಇಂದು, ನಾಳೆಯೂ ಇರುತ್ತದೆ. ಇಂಥ ವಿರೋಧಿಗಳನ್ನು ಎದುರಿಸಿದ ಸಂಸ್ಥೆ ಗಟ್ಟಿಯಾಗಿ ಬೆಳೆದಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿಯಿಂದಲೇ ಆರ್‌ಎಸ್ಎಸ್‌ ನಿಯಂತ್ರಿಸಲು ಆಗಲ್ಲ. ಅದನ್ನು ನಿಯಂತ್ರಿಸುವಂತೆ ಎಂದರೂ ಸಾಧ್ಯವಾಗುವುದಿಲ್ಲ ಎಂದರು.

ಆರ್‌ಎಸ್‌ಎಸ್‌ ಸಭೆ ನಡೆದ ಕಡೆ ಹತ್ಯೆಗಳಾಗುತ್ತವೆ ಎಂಬ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ, ಈ ಹಿಂದೇ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿ ಇತ್ತು. ಆಗ ಕೊಲೆಗಳಾದಾಗ ಮಾಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ಇವರಿಂದ ಏಕೆ ಸಾಧ್ಯವಾಗಲಿಲ್ಲ. ಕೊಲೆಗಾರರನ್ನು ಗುರುತಿಸಲಾಗದ ಇವರು ಇನ್ನು ಜಾತ್ಯತೀತ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ?. ಇವರ ಸೆಕ್ಯುಲರಿಸಂ ಎಂಬುದು ಕೇವಲ ಸುಳ್ಳು. ಜಾತ್ಯತೀತತೆ ಹೆಸರನ್ನು ಬಳಸಿಕೊಂಡು ಕೇವಲ ಮತ ಸೆಳೆಯುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಮುಂದೂಡುವ ದೊಡ್ಡ ಹುನ್ನಾರ ಅಡಗಿದೆ. ಸುಪ್ರೀಂಕೋರ್ಟ್ ಈಗಾಗಲೇ ಎರಡು ಬಾರಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದರೂ ಸಹ, ಸರ್ಕಾರ ಮತ್ತೆ ಮುಂದೂಡಿಕೆ ಕೋರಿ ಅರ್ಜಿ ಸಲ್ಲಿಸಿದೆ. ಎಸ್ಐಆರ್ ನೆಪವೊಡ್ಡಿ ಚುನಾವಣೆ ಮುಂದೂಡಲು ನೋಡುತ್ತಿದ್ದಾರೆ. ಆಂತರಿಕವಾಗಿ ತಮಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯ ಸರ್ಕಾರಕ್ಕೆ ಮನವರಿಕೆಯಾಗಿದೆ. ಹೀಗಾಗಿ ಬೆಂಗಳೂರಿನ ಜನ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬೊಮ್ಮಾಯಿ ಆಪಾದಿಸಿದರು.ಕಾಗದದ ಮೇಲೆ ಅಭಿವೃದ್ಧಿ:

ಕಾಗದದ ಮೇಲೆ ಮಾತ್ರ ಹಣ ಎತ್ತಿಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ವಾಸ್ತವದಲ್ಲಿ ಯಾವುದೇ ಹಣ ಬಿಡುಗಡೆಯಾಗುತ್ತಿಲ್ಲ. ಹಿಂದೆ ಮಾಡಿದ ಕೆಲಸಗಳಿಗೇ ಇನ್ನು ಬಿಲ್ ಪಾವತಿಯಾಗಿಲ್ಲ. ಹೀಗಾಗಿ ಯಾವೊಬ್ಬ ಕಂಟ್ರ್ಯಾಕ್ಟರ್‌ ಕೂಡ ಮುಂದೆ ಬರುತ್ತಿಲ್ಲ. ಇನ್ನು ವರ್ಷಗಳಿಂದ ವಾಸವಿರುವ ಮನೆಗಳಿಗೆ ಹಣ ವಸೂಲಿ ಮಾಡಿ ಎ ಖಾತಾ, ಬಿ ಖಾತಾ ಮಾಡಿಕೊಡಲಾಗುತ್ತಿದೆ ಎಂದು ಸರ್ಕಾರದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.ಬಿಜೆಪಿ ವತಿಯಿಂದ ಜಂಟಿ ಬರ ಅಧ್ಯಯನ


ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಮ್ಮ ಪಕ್ಷದ ಹಿರಿಯ ನಾಯಕರು ಈಗಾಗಲೇ ಜಿಲ್ಲಾವಾರು ಸಭೆ ನಡೆಸುತ್ತಿದ್ದಾರೆ. ನಾನು ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಂಟಿಯಾಗಿ ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷರು ಕೂಡ ಬರ ಅಧ್ಯಯನಕ್ಕೆ ತೆರಳುತ್ತಿದ್ದಾರೆ. ರಾಜ್ಯದಲ್ಲಿನ ಬರಗಾಲ ಮತ್ತು ಎಸ್ಐಆರ್ ಪರಿಸ್ಥಿತಿ ಕುರಿತು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು.