ಬಾಂಗ್ಲಾದೇಶ, ಭಾರತದಲ್ಲಿ ಹೆಚ್ಚುತ್ತಿರುವ ಕೋಮುವಾದ ವಿರೋಧಿಸಿ ಎಸ್ ಯುಸಿಐಸಿ ಪ್ರತಿಭಟನೆ

| Published : Dec 07 2024, 12:31 AM IST

ಬಾಂಗ್ಲಾದೇಶ, ಭಾರತದಲ್ಲಿ ಹೆಚ್ಚುತ್ತಿರುವ ಕೋಮುವಾದ ವಿರೋಧಿಸಿ ಎಸ್ ಯುಸಿಐಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಕೂಡ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ದಾಳಿ, ಹಲ್ಲೆಗಳು ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಾಂಗ್ಲಾದೇಶ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಕೋಮುವಾದವನ್ನು ವಿರೋಧಿಸಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದವರು ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಪ್ರತಿಭಟಿಸಿದರು.1971ರ ಬಾಂಗ್ಲಾದೇಶ ವಿಮೋಚನಾ ಚಳವಳಿಯಲ್ಲಿ ಮತ್ತು ಶೇಖ್ ಹಸೀನಾರನ್ನು ಪದಚ್ಯುತಗೊಳಿಸಿದ ಇತ್ತೀಚಿನ ವಿದ್ಯಾರ್ಥಿ ಬಂಡಾಯದಲ್ಲಿ ಮುಸಲ್ಮಾನರು ಮತ್ತು ಹಿಂದೂಗಳು ಪರಸ್ಪರ ಜೊತೆಗೆ ಜೀವಕೊಟ್ಟು ಹೋರಾಡಿದ್ದರು. ಆದರೆ, ಈಗ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಂತಹ ಘಟನೆಗಳು ವರದಿಯಾಗುತ್ತಿರುವುದು ನೋವಿನ ಸಂಗತಿ. ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಕೋಮುವಾದಿ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಭಾರತದಲ್ಲಿ ಕೂಡ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ದಾಳಿ, ಹಲ್ಲೆಗಳು ನಡೆಯುತ್ತಿವೆ. 1992ಕ ಡಿಸೆಂಬರ್ 6 ರಂದು ಸುಪ್ರೀಂಕೋರ್ಟ್ ನಲ್ಲಿ ಮೊಕದ್ದಮೆ ನಡೆಯುತ್ತಿದ್ದ ವಿವಾದಿತ ಮಸೀದಿಯ ಕಟ್ಟಡವನ್ನು ಕೆಡವಿ, ಇಡೀ ದೇಶದಲ್ಲಿ ಕೋಮುವಾದ ಹರಡುವ ಪಿತೂರಿಯನ್ನು ಬಿಜೆಪಿ, ಸಂಘ ಪರಿವಾರ ಮಾಡಿತು. ಈಗ ಮತ್ತೆ ಇತರ ಮಸೀದಿಗಳಲ್ಲಿ ಇಂತಹ ವಿವಾದ ಹುಟ್ಟು ಹಾಕುತ್ತಿದೆ ಎಂದು ಅವರು ಆರೋಪಿಸಿದರು.ಬಿಜೆಪಿ ಮತ್ತು ಮಿತ್ರ ಪಕ್ಷ ಅಧಿಕಾರದಲ್ಲಿರುವ ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಜನಾಂಗೀಯ ಕಲಹದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಬಾಂಗ್ಲಾದೇಶ ಮತ್ತು ಭಾರತ ಎರಡೂ ದೇಶಗಳ ಬಂಡವಾಳಶಾಹಿಗಳಿಗೆ ಜನರನ್ನು ಒಡೆದು ಆಳಲು ಕೋಮುವಾದ, ಜನಾಂಗೀಯ ದ್ವೇಷ, ಜಾತಿ ಕಲಹಗಳು ಬೇಕಾಗಿವೆ ಎಂದು ಅವರು ದೂರಿದರು.ಎರಡೂ ದೇಶಗಳಲ್ಲಿ ಸಾಮಾನ್ಯ ಜನತೆ ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಮುಂತಾದ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಶೋಷಣೆ ಆಧಾರಿತ ಬಂಡವಾಳಶಾಹಿ ವ್ಯವಸ್ಥೆಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆಗಳ ವಿರುದ್ಧ ಜನರ ಆಕ್ರೋಶ ದಿಕ್ಕು ತಪ್ಪಿಸಲು ಆಳುವ ಬಂಡವಾಳಶಾಹಿ ಪಕ್ಷಗಳು ಕೋಮು ವಿಷಬೀಜವನ್ನು ಎಲ್ಲಾ ಧರ್ಮಗಳ ಜನರ ಮನಸ್ಸಿನಲ್ಲಿ ಬಿತ್ತುತ್ತಿವೆ. ದುಡಿಯುವ ಜನತೆ ಈ ಪಿತೂರಿ ಅರ್ಥ ಮಾಡಿಕೊಂಡು, ತಮ್ಮ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಜೀವನದ ನೈಜ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದರು.ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ರವಿ, ಮುಖಂಡರಾದ ಎಂ. ಉಮಾದೇವಿ, ಚಂದ್ರಶೇಖರ್ ಮೇಟಿ, ಪಿ.ಎಸ್. ಸಂಧ್ಯಾ, ಯಶೋಧರ್, ಜಿ.ಎಸ್. ಸೀಮಾ, ಹರೀಶ್, ಟಿ.ಎಸ್. ಸುನಿಲ್, ಬಸವರಾಜು, ಸುಮಾ, ಚಂದ್ರಕಲಾ, ಆಸಿಯಾ ಬೇಗಂ ಮೊದಲಾದವರು ಇದ್ದರು.