ಕುಮಟಾ: ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ೨೯ ವರ್ಷಗಳಿಂದ ನಿರಂತರವಾಗಿ ಪ್ರಸ್ತುತಪಡಿಸುತ್ತಾ ಬಂದಿರುವ ಸೌರಭ ಸಂಸ್ಥೆಯು ಏ. ೨೬ರಂದು ಬೆಳಗ್ಗೆ ೯.೩೦ರಿಂದ ಪಟ್ಟಣದ ಹವ್ಯಕ ಸಭಾಭವನದಲ್ಲಿ ಸಾಧನಾ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮವು ಸಾಂಸ್ಕೃತಿಕ ಅನುಸಂಧಾನ ಹಾಗೂ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಒಳಗೊಂಡಿದೆ ಎಂದು ಸೌರಭ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರುಣ ಹೆಗಡೆ ತಿಳಿಸಿದರು.

ಪಟ್ಟಣದ ಖಾಸಗಿ ಹೊಟೇಲ್ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನರನ್ನು ದೇಸೀ ಸಾಂಸ್ಕೃತಿಕ ಸುಗಂಧದೆಡೆಗೆ ಆಕರ್ಷಿಸುವ ಉದ್ದೇಶದಿಂದ ೩ ದಶಕಗಳಿಂದ ಕಾರ್ಯಕ್ರಮ ನೀಡುತ್ತಿರುವ ಸೌರಭ ಸಂಸ್ಥೆಯ ೩೦ನೇ ವಾರ್ಷಿಕೋತ್ಸವವನ್ನು ಸಾಧನಾ ಸೌರಭ ಎಂಬ ಹೆಸರಿನಿಂದ ಆಚರಿಸುತ್ತಿದೆ. ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ನೀಡಲಿದ್ದೇವೆ ಎಂದರು. ಸೌರಭದ ಅಧ್ಯಕ್ಷ ಶ್ರೀಕಾಂತ ಭಟ್ಟ ಮಾತನಾಡಿ, ಕಾರ್ಯಕ್ರಮವನ್ನು ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸಲಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಕುರಿತು ಸಂವಾದವನ್ನು ಪತ್ರಕರ್ತರಾದ ಕೃಷ್ಣಮೂರ್ತಿ ಹೆಬ್ಬಾರ್, ವಸಂತ ಗಿಳಿಯಾರ್ ಉಡುಪಿ, ರಾಜು ಅಡಕಳ್ಳಿ, ಕಿರಣ ಉಪಾಧ್ಯಾಯ, ಮಾಜಿ ಸಂಸದ ಪ್ರತಾಪ ಸಿಂಹ ನಡೆಸಿಕೊಡುವರು. ವಿಶ್ವೇಶ್ವರ ಭಟ್ ವಿರಚಿತ ಪುಸ್ತಕ ಪ್ರದರ್ಶನ ಇರಲಿದೆ. ಮುಖ್ಯ ಅತಿಥಿಯಾಗಿ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ೧೨.೧೫ರಿಂದ ಭಕ್ತಿ-ಭಾವ-ಗಾನ ಕಾರ್ಯಕ್ರಮ ನಡೆಯಲಿದ್ದು, ಗಾಯಕ ಪಂ. ರಘುನಂದನ್ ಭಟ್ ಗಾಯನ ಪ್ರಸ್ತುತಪಡಿಸುತ್ತಾರೆ. ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ, ಹಾರ್ಮೋನಿಯಂನಲ್ಲಿ ಸತೀಶ ಭಟ್ ಹೆಗ್ಗಾರ ಸಾಥ್ ನೀಡಲಿದ್ದಾರೆ. ಸಂಜೆ ಮೂಡಬಿದ್ರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದಿಂದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಸಿಂಧೂರ ಸಂಗ್ರಾಮ ಆಖ್ಯಾನ ಪ್ರದರ್ಶನ ನಡೆಯಲಿದೆ ಎಂದರು.

ಸೌರಭದ ನಿರ್ದೇಶಕ ಆನಂದ ಹೆಗಡೆ, ಡಿ.ಜಿ. ಹೆಗಡೆ, ಗಣೇಶ ಜೋಶಿ ಇದ್ದರು.