ಹೊಸಪೇಟೆ: ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ವಿಳಂಬವಿಲ್ಲದೇ ಪ್ರತಿ ಅರ್ಹ ಫಲಾನುಭವಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಕಲಚೇತನರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಪರಿಶೀಲಿಸಿದ ಜಿಲ್ಲಾಧಿಕಾರಿ, ವಿದ್ಯಾರ್ಥಿ ವೇತನ ಹಾಗೂ ಇತರ ಆರ್ಥಿಕ ಸೌಲಭ್ಯಗಳನ್ನು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದರು.

ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರವು ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಯೋಜನೆ ಸೌಲಭ್ಯಗಳ ಬಗ್ಗೆ ತಿಳಿಸುವುದರ ಜತೆಗೆ ಸಮರ್ಪಕ ಅನುಷ್ಠಾಗೊಳಿಸಬೇಕು ಎಂದು ಅವರು ಹೇಳಿದರು.

ದೃಷ್ಟಿಹೀನ ಮಹಿಳೆಯರಿಗೆ ನೀಡುವ ಶಿಶುಪಾಲನಾ ಭತ್ಯೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗಾಗಿ ಇರುವ ನಿರಾಮಯ ವಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಬೇಕು. ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಆರ್ಥಿಕ ಸಹಾಯ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗ. ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಕೇವಲ ಅಂಕಿ​ಅಂಶಗಳಿಗೆ ಸೀಮಿತವಾಗಬಾರದು. ವಿವಾಹ ಪ್ರೋತ್ಸಾಹಧನ, ಮರಣ ಪರಿಹಾರ ನಿಧಿ ಹಾಗೂ ವೈದ್ಯಕೀಯ ನೆರವಿನಂತಹ ಯೋಜನೆಗಳು ಸಂಕಷ್ಟದಲ್ಲಿರುವವರಿಗೆ ಆಸರೆಯಾಗಬೇಕು. ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಭೇಟಿ ನೀಡಿ ಅರ್ಹ ಫಲಾನುಭವಿಗಳ ಗುರುತಿಸಿ ಸೌಲಭ್ಯಗಳ ಸರಿಯಾದ ಸಮಯಕ್ಕೆ ನೀಡಬೇಕು ಎಂದರು.


ಈ ವೇಳೆ ಮಾತನಾಡಿದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮಾತನಾಡಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ 2025-​26ನೇ ಸಾಲಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪುರುಷ ವಿಶೇಷ ಚೇತನರು 12117, ಮಹಿಳಾ ವಿಕಲಚೇತನರು 7587 ಸೇರಿ ಒಟ್ಟು 19704 ವಿಕಲಚೇತನರು ಮಾಸಾಶನ ಪಡೆಯುತ್ತಿದ್ದಾರೆ. ಜಿಲ್ಲೆಯ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಮಾಸಾಶನ ನೀಡಲಾಗುತ್ತಿದೆ. ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ 27400, ಕೊಟ್ಟೂರಿನಲ್ಲಿ 5330, ಹೊಸಪೇಟೆ 15851, ಕೂಡ್ಲಿಗಿಯಲ್ಲಿ 15857, ಹೂವಿನಹಡಗಲಿ 10296 ಹಾಗೂ ಹೆಚ್.ಬಿ.ಹಳ್ಳಿಯಲ್ಲಿ 7445 ಸೇರಿ 6 ತಾಲ್ಲೂಕುಗಳಲ್ಲಿ ಒಟ್ಟು 82179 ಹಿರಿಯ ನಾಗರಿಕರು ಮಾಸಾಶನ ಪಡೆಯುತ್ತಿದ್ದಾರೆ. ಇದರಲ್ಲಿ 45035 ಪುರುಷರು ಹಾಗೂ 37144 ಮಹಿಳೆಯರು ಸೇರಿದ್ದಾರೆ.

ಜಿಲ್ಲೆಯಾದ್ಯಂತ 532 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 150 ಫಲಾನುಭವಿಗಳಿಗೆ ಗ್ರಾಮೀಣ ಪುನರ್ವಸತಿ ಯೋಜನೆ, 106 ಅಹ ಫಲಾನುಭವಿಳಿಗೆ ಆರೈಕೆದಾರರ ಪ್ರೋತ್ಸಾಹ ನಿಧಿ, 31 ವಿಕಲಾಂಗ ವಿದ್ಯಾರ್ಥಿಗಳಿಎ ಶುಲ್ಕ ಮರುಪಾವತಿ ಮಾಡಲಾಗಿದೆ. ಅದಷ್ಟೇ ಅಲ್ಲದೇ ಆಧಾರ ಯೋಜನೆಯಡಿ 32 ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ತಲಾ ₹50,000 ಆರ್ಥಿಕ ನೆರವು ನೀಡಲಾಗಿದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ₹2,000 ಹಾಗೂ 6 ರಿಂದ 10ನೇ ತರಗತಿಯವರಿಗೆ ₹4,000 ವಿತರಿಸಲಾಗುವುದು. 7 ವಿಶೇಷಚೇತನ ದಂಪತಿಗಳಿಗೆ ₹3.50 ಲಕ್ಷ ವಿವಾಹ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಗಂಗಪ್ಪ ಇದ್ದರು.