ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಸರಣಿ ದೌರ್ಜನ್ಯ, ದಾಳಿ, ದೇಗುಲಗಳ ನಾಶ ಹಾಗೂ ಹತ್ಯಾಕಾಂಡದ ವಿರುದ್ಧ ತುಮಕೂರಿನಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಜನಾಂದೋಲನ ಜಾಥಾ ಹಮ್ಮಿಕೊಳ್ಳಲಾಗಿತ್ತು.ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು, ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಶ್ರೀಗಳು, ಇಸ್ಕಾನ್ ನ ಸ್ವಯಂ ಪ್ರಕಾಶ್ ಶ್ರೀ, ರಾಮೇನಹಳ್ಳಿ, ಗೊಲ್ಲಹಳ್ಳಿ ಮಠದ ಶ್ರೀಗಳು, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಜಿ.ಕೆ. ಶ್ರೀನಿವಾಸ್, ಭಜರಂಗದಳದ ಮಂಜು ಭಾರ್ಗವ್, ಭಗತ್ ಕ್ರಾಂತಿ ಸೇನೆ ಚೇತನ್, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ನಗರಾಧ್ಯಕ್ಷ ಹನುಮಂತರಾಜು, ಮುಖಂಡರಾದ ದಿಲೀಪ್ ಕುಮಾರ್, ವೈ.ಹೆಚ್. ಹುಚ್ಚಯ್ಯ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಸಿದ್ಧಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಜನಾಂದೋಲನಾ ಜಾಥಾಕ್ಕೆ ಚಾಲನೆ ನೀಡಿದರು. ಡಿಸಿ ಕಚೇರಿ ಬಳಿ ಶಿವಮೊಗ್ಗ ಸಾಮಾಜಿಕ ಕಾರ್ಯಕರ್ತ ಯಾದವ ಕೃಷ್ಣ ಮಾತನಾಡಿ ಬಾಂಗ್ಲಾದಲ್ಲಿ ನಡೆಯುತ್ತಿರುವ ಘಟನೆ ಹಾಗೂ ಹಿನ್ನೆಲೆಯನ್ನು ತಿಳಿಸಿದರು. ಪ್ರತಿಭಟನಾ ಸಭೆ ಬಳಿಕ ಮನವಿಯನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ನೀಡಲಾಯಿತು. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಬೇಕು. ಹಾಗೆಯೇ ಇಸ್ಕಾನ್ ನ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಅವರನ್ನು ಕೂಡಲೇ ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ ಬಾಂಗ್ಲಾದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ದಾಳಿ, ಹತ್ಯೆ, ಲೂಟಿ, ಬೆಂಕಿಯ ದಾಳಿ, ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯಗಳನ್ನು ಅತ್ಯಂತ ಚಿಂತಾಜನಕ ಸಂಗತಿ ಎಂದರು.ಈಗಿನ ಬಾಂಗ್ಲಾದೇಶ ಸರ್ಕಾರ ಮತ್ತು ಅಲ್ಲಿನ ಇತರೆ ಸಂಸ್ಥೆಗಳು ಅದನ್ನು ತಡೆಯುವ ಬದಲು ಕೇವಲ ಮೂಕಪ್ರೇಕ್ಷಕರಾಗಿದ್ದಾರೆ. ಬಾಂಗ್ಲಾದೇಶದ ಹಿಂದೂಗಳು ತಮ್ಮ ರಕ್ಷಣೆಗಾಗಿ ಅನಿವಾರ್ಯವಾಗಿ ರಾಜತಾಂತ್ರಿಕ ಮಾರ್ಗದಲ್ಲಿ ಧ್ವನಿಯೆತ್ತಲು ಮುಂದಾದರೆ ಅವರ ವಿರುದ್ಧವೇ ಅನ್ಯಾಯ ಹಾಗೂ ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ನಡೆಸುವಂತಹ ಕೆಲಸ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ವಿಗ್ರಹ ಭಂಜನೆ ನಿಲ್ಲಬೇಕು. ಹಾಗೂ ಹಿಂದೂಗಳ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಮನವಿ ತಿಳಿಸಲಾಗಿದೆ.ಭಾರತ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಮುದಾಯ ಅಲ್ಲಿನ ಸರ್ಕಾರದ ಮೇಲೆ ರಾಜತಾಂತ್ರಿಕ ಒತ್ತಡ ತಂದು ಅಲ್ಲಿ ಅಲ್ಪಸಂಖ್ಯಾತರ ಹಿಂದೂಗಳ ಜೀವನ, ಆಸ್ತಿ, ದೇವಸ್ಥಾನ, ಶ್ರದ್ಧಾ ಕೇಂದ್ರ, ಉದ್ಯೋಗ, ವ್ಯಾಪಾರ ಎಲ್ಲದರ ರಕ್ಷಣೆಗೆ ಅಲ್ಲಿನ ಸರ್ಕಾರವನ್ನು ಆಗ್ರಹಿಸಲಾಯಿತು. ಸುರೇಶಗೌಡ, ತುಮಕೂರು ಗ್ರಾಮಾಂತರ ಶಾಸಕಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಕೂಡಲೇ ನಿಲ್ಲಬೇಕು. ಇಸ್ಕಾನ್ ನ ಹಿಂದೂ ಸಂತ ಚಿನ್ಮಯ ಕೃಷ್ಣದಾಸ್ ಅವರನ್ನು ಬಂಧಿಸಿರುವುದು ಅತ್ಯಂತ ಹೇಯವಾದದ್ದು. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು.