ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜೀವನದಲ್ಲಿ ಸಾಧನೆ ಮಾಡಲು ಮನಸೇ ಮುಖ್ಯ, ಮನಸಿದ್ದಲ್ಲಿ ಮಾರ್ಗ ಎಂಬಂತೆ ವಿಶೇಷಚೇತನರು ಒಂದು ವಿಶೇಷ ಸದೃಢ ಮನಸು ಹೊಂದಿರುತ್ತಾರೆ. ಸಾಧನೆಗೆ ಯಾವುದೂ ಅಡ್ಡಿಯಾಗಲಾರದು. ಆತ್ಮವಿಶ್ವಾಸದಿಂದ ಎಂತಹ ಸನ್ನಿವೇಶ, ಸಂದರ್ಭವನ್ನು ಛಲದಿಂದ ಎದುರಿಸಿ ಸಾಧನೆಗೆ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ ನೀಡಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಶೇಷಚೇತನರ ದಿನ-೨೦೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಧನೆ ಸಾಧಕನ ಸ್ವತ್ತು. ದೃಢ ಮನಸು ಇರಬೇಕು. ಸಾಧಕರಾಗಿ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರ ಜೀವನವನ್ನು ಸ್ಫೂರ್ತಿಯಾಗಿಟ್ಟುಕೊಂಡು ಸಾಧನೆಗೆ ಮುಂದಾಗಬೇಕು. ವಿಶೇಷಚೇತನರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾಡಳಿತವೂ ಸದಾ ವಿಶೇಷ ಚೇತನರ ಕುಂದುಕೊರತೆಗಳಿಗೆ ಸ್ಪಂದಿಸುತ್ತದೆ. ಶಿಸ್ತು ಬದ್ಧ ಜೀವನ ನಡೆಸುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಮಾತನಾಡಿ, ವಿಶೇಷ ಚೇತನರಿಗಾಗಿಯೇ ಇರುವ ಸರ್ಕಾರದ ಸೌಲಭ್ಯಗಳನ್ನು, ಮತ್ತು ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸವಿತಾ ಕಾಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲೆಯಲ್ಲಿ ೪೫,೩೫೩ ಜನ ವಿಶೇಷಚೇತನರಿದ್ದಾರೆ. ಈ ಪೈಕಿ ೩೩,೨೫೧ ಜನರಿಗೆ ಯುಡಿಐಡಿ ಕಾರ್ಡಗಳನ್ನು ವಿತರಿಸಲಾಗಿದೆ. ಯುಡಿಐಡಿ ಕಾರ್ಡ್ ಪಡೆದ ಎಲ್ಲ ವಿಶೇಷಚೇತನರಿಗೆ ವಿವಿಧ ಸಾಧನ-ಸಲಕರಣೆಗಳು, ವಿದ್ಯಾರ್ಥಿ ವೇತನ, ಇಂಧನ ಚಾಲಿತ ತ್ರಿಚಕ್ರ ವಾಹನ, ಲ್ಯಾಪ್‌ಟಾಪ್, ಬ್ರೈಲ್‌ಕಿಟ್ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆಯಂತ್ರ ಸೇರಿದಂತೆ ಇನ್ನಿತರ ಸಾಧನ ಸಲಕರಣೆಗಳನ್ನು ಒದಗಿಸಲಾಗುತ್ತಿದೆ. ಜಿಲ್ಲಾಡಳಿತದಿಂದ ವಿಶೇಷಚೇತನರಿಗೆ ಸರ್ಕಾರದ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಾಧನೆ ಮಾಡಿದ ರಾಜೇಶ ಪವಾರ, ಬಂದೇನವಾಜ ಕಲ್ಲೂರ, ಮೋದಿನ ಪಾಶ, ಅಶೋಕ ವಾಲಿಕಾರ, ಶಶಿಕಲಾ ಸೋನಾರ, ಸುಮೀತ ಪಾಂಡಿಚೇರಿ, ಸಂಜೀವ ಭವನಸಿಂಗ್ ಹಜೇರಿ, ಅಂಬಣ್ಣಾ ಗುನ್ನಾಪುರ, ರಶ್ಮಿ ಚಿತ್ತವಾಡಗಿ, ಮೌಲಾಲಿಕ ಮಂಟೂರ ಅವರನ್ನು ಸನ್ಮಾನಿಸಲಾಯಿತು.
ಈ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಇಂಧನ ಚಾಲಿತ ತ್ರಿ-ಚಕ್ರ ವಾಹನ ಜಾಥಾ ಜರುಗಿತು.ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ಡಿಎಆರ್ ಡಿವೈಎಸ್‌ಪಿ ಡಿ.ವೈ.ಧನಗರ, ವಾರ್ತಾಧಿಕಾರಿ ಅಮರೇಶ ದೊಡಮನಿ, ನಿಮಿಷ ಆಚಾರ್ಯ, ವಿನೋದ ಖೇಡ, ರಶ್ಮಿ ಚಿತ್ತವಾಡಗಿ, ಉಪಾಧ್ಯಾಯ, ಫಾದರ್ ಟಿಯೋಲ್ ಮಚಾದೋ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕೋಟ್ಜೀವನದಲ್ಲಿ ಆಶಾಭಾವನೆ ಹೊಂದಿರಬೇಕು. ಸದಾ ಪ್ರಯತ್ನವಾದಿಯಾಗಿರಬೇಕು. ಸತತ ಪ್ರಯತ್ನ ಮುಂದಿನ ಯಶಸ್ಸಿಗೆ ಸಹಕಾರಿಯಾಗಲಿದೆ. ಜೀವನದಲ್ಲಿ ಸಾಧನೆ ಮಾಡಲು ಮಾನಸಿಕ ದೃಢತೆ ಹೊಂದಬೇಕೆ ಹೊರತು ದೈಹಿಕವಾಗಿ ಅಲ್ಲ. ಮಾನಸಿಕವಾಗಿ ಸದೃಢತೆ ಹೊಂದಿದ್ದರೆ ಸಾಧನೆಯ ಶಿಖರವನ್ನೇ ಏರಬಹುದಾಗಿದೆ.
ಸೋಮಲಿಂಗ ಗೆಣ್ಣೂರು, ಅಪರ ಜಿಲ್ಲಾಧಿಕಾರಿ