ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮತ್ತೆ ಹಿಜಾಬ್ ಧರಿಸಲು ಕಾಂಗ್ರೆಸ್ ಸರ್ಕಾರ ಅವಕಾಶ ನೀಡಿದರೆ, ಹಿಂದೂ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಧರಿಸುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಎಚ್ಚರಿಕೆ ನೀಡಿದ್ದಾರೆ.ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಬೇಕು ಎಂಬ ದೃಷ್ಟಿಯಲ್ಲಿ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ಬರುವುದು ಶಿಕ್ಷಣಕ್ಕೆ. ಇಲ್ಲಿ ಜಾತಿ ಮತ ಧರ್ಮಗಳು ಮುಖ್ಯವಲ್ಲ, ಶಾಲೆಯೊಳಗೆ ಹಿಜಾಬ್ ಹಾಕಿಕೊಂಡು ಬಂದು ಜಾತಿ ತರಬೇಡಿ ಎಂದು ಆಗ್ರಹಿಸಿದರು.
ಹಿಜಾಬ್ ಹಾಕಲು ಅವಕಾಶ ಕೊಟ್ಟರೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು, ಕೇಸರಿ ಲುಂಗಿ ತೊಟ್ಟು ಬರುತ್ತಾರೆ. ಕೇಸರಿ ಬಟ್ಟೆಗೂ ತರಗತಿಯೊಳಗೆ ಅವಕಾಶ ಕೊಡಬೇಕಾಗುತ್ತದೆ ಎಂದರು.ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿಪಕ್ಷ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಿದ್ದರಾಮಯ್ಯ ಸರ್ಕಾರ ಗೊಂದಲದ ಗೂಡಾಗಿದೆ ಎಂಬುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ. ಹಿಂದಿನ ಸರ್ಕಾರದ ಹಿಜಾಬ್ ನಿಷೇಧ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ, ಇಂತಹ ಸಂದರ್ಭದಲ್ಲಿ ಮತ್ತೆ ಹಿಜಾಬ್ ಮತ್ತೇ ತರುತ್ತೇವೆ ಎನ್ನುತ್ತಿದ್ದಾರೆ. ಈಗ ಹೇಳಿಕೆ ಬದಲಿಸುತ್ತಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಚುನಾವಣೆಯ ದೃಷ್ಟಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಕಾನೂನು, ಕೋರ್ಟ್ ಮೀರಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸಿ ಬಹುಸಂಖ್ಯಾತರಿಗೆ ಸಡ್ಡು ಹೊಡೆಯುತ್ತಿದ್ದಾರೆ. ಈ ನಡವಳಿಕೆ ರಾಜಕಾರಣಕ್ಕೆ ಭೂಷಣವಲ್ಲ ಎಂದು ಕೋಟ ಎಚ್ಚರಿಕೆ ನೀಡಿದರು.