ಹೆಣ್ಣು ಮಕ್ಕಳಿಂದ ಸಾಹಿತಿ ವಿಷ್ಣು ನಾಯ್ಕ ಅಂತ್ಯಕ್ರಿಯೆ

| Published : Feb 19 2024, 01:33 AM IST

ಹೆಣ್ಣು ಮಕ್ಕಳಿಂದ ಸಾಹಿತಿ ವಿಷ್ಣು ನಾಯ್ಕ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಷ್ಣು ನಾಯ್ಕ ಅವರ ಇಬ್ಬರು ಹೆಣ್ಣು ಮಕ್ಕಳಾದ ಭಾರತಿ ಮತ್ತು ಅಮಿತಾ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಸಮಾನತೆಯ ಸಂದೇಶ ಸಾರಿದರು

ಅಂಕೋಲಾ: ಹಿರಿಯ ಸಾಹಿತಿ ವಿಷ್ಣು ನಾಯ್ಕ ಪಾರ್ಥಿವ ಶರೀರವನ್ನು ಅಂಬಾರಕೊಡ್ಲದ ಅವರ ಪರಿಮಳದ ಮನೆಯಂಗಳದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಜನರು ಅಂತಿಮ ದರ್ಶನ ಪಡೆದರು.

ಅವರ ಅಭಿಮಾನಿಗಳು ಕುಟುಂಬಸ್ಥರು ಆಗಮಿಸಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ನಿವೃತ್ತ ಪ್ರಾಚಾರ್ಯ ಎಂ.ಎಸ್. ಹಬ್ಬು ವಿಷ್ಣು ನಾಯ್ಕ್ ಬರೆದ ಆಶಯಗೀತೆ ಪ್ರಸ್ತುತ ಪಡಿಸಿದರು.

ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅಂತಿಮ ದರ್ಶನ ಪಡೆದು ಮಾತನಾಡಿ, ವಿಷ್ಣು ನಾಯ್ಕ್ ಅಂಕೋಲೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಅವರನ್ನು ಕಳೆದುಕೊಂಡು ಸಾಹಿತ್ಯ ಸಾರಸ್ಕೃತ ಲೋಕ ಬಡವಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಡಾ. ಆರ್.ಜಿ. ಗುಂದಿ, ಎಸ್.ಪಿ. ಕಾಮತ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಮಾಜಿ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ರೋಹಿದಾಸ್ ನಾಯ್ಕ್, ಡಾ. ಗಜಾನನ ನಾಯಕ, ವಕೀಲ ನಾಗರಾಜ ನಾಯಕ, ಡಾ. ಶಿವಾನಂದ ನಾಯಕ, ಜನಶಕ್ತಿ ವೇದಿಕೆಯ ಮಾಧವ ನಾಯ್ಕ್, ಸತೀಶ್ ಬೆಳೂರಕರ, ಪ್ರಭಾಕರ ಮಾಳ್ಸೆಕರ, ಯಮುನಾ ಗಾಂವಕರ, ಗೋಪಾಲ ಕೃಷ್ಣ ನಾಯಕ, ಜಗದೀಶ ನಾಯಕ ಹೊಸಗೇರಿ, ವಿನಯಾ ವಕ್ಕುಂದ, ತಮ್ಮಣ್ಣ ಬೀಗಾರ ಸೇರಿದಂತೆ ಇತರ ಸಾಹಿತಿಗಳು, ಅಭಿಮಾನಿಗಳು ಕುಟುಂಬಸ್ಥರು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು.

ವಿಷ್ಣು ನಾಯ್ಕ ಅವರ ಇಬ್ಬರು ಹೆಣ್ಣು ಮಕ್ಕಳಾದ ಭಾರತಿ ಮತ್ತು ಅಮಿತಾ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಸಮಾನತೆಯ ಸಂದೇಶ ಸಾರಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಎಂಬ ಪುಟ್ಟ ತಾಲೂಕಿನಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಜಗತ್ತಿನ ಚಟುವಟಿಕೆಯನ್ನು ದಿನಕರ ದೇಸಾಯಿ ಅವರ ತಲೆಮಾರಿನಿಂದ ಇಂದಿನ ತಲೆಮಾರಿನ ವರೆಗೂ ವಿಸ್ತರಿಸಿ, ಜೀವಂತವಾಗಿರಿಸಿದ್ದ ಕೀರ್ತಿ ವಿಷ್ಣು ನಾಯ್ಕ ಅವರಿಗೆ ಸಲ್ಲಬೇಕು. ಅಂಕೋಲಾದ ವೈಭವವನ್ನು ವಿಶ್ವ ಪಟಲದಲ್ಲಿ ಬಣ್ಣ ಬಣ್ಣದ ಕುಂಚಗಳಿಂದ ಶೃಂಗರಿಸಿದ ಹಲವು ಈ ಮಣ್ಣಿನ ಸಾಧಕರಲ್ಲಿ ಅಗಲಿದ ವಿಷ್ಣು ನಾಯ್ಕ ಅವರದ್ದು ಎಂದೂ ತುಂಬಲಾಗದ ಸ್ಥಾನ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಸ್. ವಿ. ನಾಯಕ ಹೇಳಿದರು.