ಸಂಸದ ಬಿ.ವೈ.ರಾಘವೇಂದ್ರ ಅವರ ವಿನೋಬನಗರದ ಮನೆಯಲ್ಲಿ ಗುರುವಾರ ವಿವಿಧ ಸಂಘ ಸಂಸ್ಥೆಗಳು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಅದ್ಧೂರಿಯಾಗಿ ಎಳ್ಳು ಬೆಲ್ಲ ವಿತರಿಸಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರ ವಿನೋಬನಗರದ ಮನೆಯಲ್ಲಿ ಗುರುವಾರ ವಿವಿಧ ಸಂಘ ಸಂಸ್ಥೆಗಳು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಅದ್ಧೂರಿಯಾಗಿ ಎಳ್ಳು ಬೆಲ್ಲ ವಿತರಿಸಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸೂರ್ಯನ ಪಥ ಬದಲಾಯಿಸುವ ಜಗತ್ತಿಗೆ ಬೆಳಕು ನೀಡುವ ಹಬ್ಬವೇ ಸಂಕ್ರಾಂತಿ ಹಬ್ಬವಾಗಿದ್ದು, ಈ ಪವಿತ್ರ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.ಬಿ.ಎಸ್.ಯಡಿಯೂರಪ್ಪನವರ ಕುಟುಂಬದ ಮೇಲೆ ನೀವೆಲ್ಲರೂ ಅಭಿಮಾನದಿಂದ ಶುಭ ಹಾರೈಸಲು ಬಂದಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ನಮ್ಮ ಕುಟುಂಬ ಚಿರಋಣಿಯಾಗಿರುತ್ತದೆ. ಕೊನೆಯ ಉಸಿರು ಇರುವವರೆಗು ನಿಮ್ಮೆಲರ ಸೇವೆಗೆ ನಮ್ಮ ಕುಟುಂಬ ಸದಾ ಸಿದ್ಧವಿದೆ. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು ಎಂದರು.ನಾನು ಸಂಸದನಾದ ಮೇಲೆ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಕೈಲಾದಷ್ಟು ಕಾರ್ಯ ಮಾಡಿದ್ದೇನೆ. ಜಿಲ್ಲೆಯ ಪ್ರತಿ ತಾಲೂಕಿಗೂ ರೈಲ್ವೆ ಸಂಪರ್ಕ ಮಾಡಬೇಕು ಎನ್ನುವುದು ನನ್ನ ಅಭಿಲಾಷೆ. ಈ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ಮುಗಿದಿದ್ದು, ಯೋಜನೆ ಸಿದ್ಧಪಡಿಸಲಾಗಿದೆ. ರಾಷ್ಟ್ರ ಮುನ್ನಡೆಸಲು ಎಲ್ಲರೂ ಒಟ್ಟಾಗಿ ಪ್ರಯತ್ನ ಮಾಡೋಣ ಎಂದರು.ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಸಂಸದರ ಕೊಡುಗೆ ಅಪಾರವಾಗಿದೆ. ಅಭಿವೃದ್ಧಿಯ ಹರಿಕಾರ ನಮ್ಮ ರಾಘಣ್ಣ, ಇಂತಹ ಸಂಸದರು ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ. ಶಿವಮೊಗ್ಗದಿಂದ ರಾಣೇಬೆನ್ನೂರು, ತೀರ್ಥಹಳ್ಳಿ-ಚಿಕ್ಕಮಗಳೂರು ಸೇರಿದಂತೆ ಹಲವು ರೈಲ್ವೆ ಸಂಪರ್ಕ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. ಇಎಸ್‍ಐ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ಮಾಣವಾದ ಬಳಿಕ ಹೊರ ಜಿಲ್ಲೆಗಳಿಗೆ ನಮ್ಮ ಶಿವಮೊಗ್ಗದ ಬಡರೋಗಿಗಳು ಓಡಾಡುವುದು ತಪ್ಪಿದೆ. ಇದೆಲ್ಲದಕ್ಕೂ ಬಿಎಸ್‌ವೈ ಮತ್ತು ಬಿವೈಆರ್ ಕೊಡುಗೆ ಇದೆ. ಅವರು ಶೀಘ್ರವೇ ಕೇಂದ್ರ ಮಂತ್ರಿಗಳಾಗಲಿ ಎಂದು ಹಾರೈಸುತ್ತೇನೆ ಎಂದರು.ಬಿಳಕಿ ಗ್ರಾಮದ ಮಜ್ಜೀಗೇನಹಳ್ಳಿಯಲ್ಲಿ ಮಕ್ಕಳ ವೈದ್ಯರ ಸಂಘದಿಂದ ಮಕ್ಕಳ ಶಿಶುಪಾಲನಾ ಕೇಂದ್ರದ ನಿರ್ಮಾಣಕ್ಕೆ ಯೋಜನೆ ರೂಪುಗೊಂಡಿದ್ದು, ಸಂಸದರೂ ಇದಕ್ಕೆ ಶುಭಕೋರಿದ್ದಾರೆ ಎಂದರು.ಈ ಸಂದರ್ಭದಲ್ಲಿ ಸಂಸದರ ಪತ್ನಿ ತೇಜಸ್ವಿನಿ ರಾಘವೇಂದ್ರ ಕೂಡ ಎಲ್ಲರಿಗೂ ಸಂಕ್ರಾಂತಿ ಶುಭಾಶಯ ಕೋರಿದರು.ಕಾರ್ಯಕ್ರಮದಲ್ಲಿ ಸಂತೋಷ್ ಬಳ್ಳಕೆರೆ, ಮಂಗೋಟೆ ರುದ್ರೇಶ್, ಹರೀಶ್ ನಾಯಕ್, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ಕುಮಾರ್, ನವೀನ್ ವಾರದ್, ರಾಹುಲ್ ಬಿದರೆ, ಮಂಗಳಾ ನಾಗೇಂದ್ರ, ಮಲ್ಲೇಶ್, ಡಾ.ಗಣೇಶ್ ಬಿದರ್‍ಕೊಪ್ಪ, ವೀರಶೈವ ಲಿಂಗಾಯತ ಸಮಾಜದ ಪ್ರಮುಖರಾದ ಕೆ.ಆರ್.ಸೋಮನಾಥ್, ರಾಜಶೇಖರ್, ಉಮೇಶ್, ಚಂದ್ರಶೇಖರ್, ಚಂದ್ರಕುಮಾರ್, ಉಮೇಶ್ ಕತ್ತಿಗೆ, ನಂಜೇಶ್, ಕೋಕಿಲ, ಭೂಪಾಲ್ ಸೇರಿದಂತೆ ವಿವಿಧ ಸಮಾಜದ ಪ್ರಮುಖರು, ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.