ಸಂಕ್ರಾಂತಿ ಅವಧಿ ಸೂರ್ಯ ಪಥ ಬದಲಿಸಿದಂತೆ ಸಿಎಂ ಬದಲಾವಣೆ ಆಗ್ತಾರಾ ಎಂಬ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ರಾಜಕೀಯದಲ್ಲಿ ಪಥ ಬದಲಾವಣೆಯಾಗಲು ನಮ್ಮಲ್ಲಿ ಹೈಕಮಾಂಡ್ ಇದೆ, ಶಾಸಕಾಂಗ ಪಕ್ಷ ಇದೆ, ಅವರು ಏನು ತೀರ್ಮಾನ ತೆಗೆದುಕೊಳ್ತಾರೆಯೋ ಅದು ಆಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂಕ್ರಾಂತಿ ಅವಧಿ ಸೂರ್ಯ ಪಥ ಬದಲಿಸಿದಂತೆ ಸಿಎಂ ಬದಲಾವಣೆ ಆಗ್ತಾರಾ ಎಂಬ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ರಾಜಕೀಯದಲ್ಲಿ ಪಥ ಬದಲಾವಣೆಯಾಗಲು ನಮ್ಮಲ್ಲಿ ಹೈಕಮಾಂಡ್ ಇದೆ, ಶಾಸಕಾಂಗ ಪಕ್ಷ ಇದೆ, ಅವರು ಏನು ತೀರ್ಮಾನ ತೆಗೆದುಕೊಳ್ತಾರೆಯೋ ಅದು ಆಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಆಗ್ತಾರೋ ಇಲ್ಲವೋ ಎಂದು ಮಾಧ್ಯಮದಲ್ಲಿ ಭಿತ್ತರಿಸುತ್ತಿದ್ದೀರಿ. ಹೈಕಮಾಂಡ್ ಯಾವಾಗ ಹೇಳುತ್ತೊ ಆಗ ನಿಮಗೆ ಹೇಳುತ್ತೇವೆ. ನನಗೆ ಅಲ್ಲಿಯದ್ದೊಂದು ಮಾತು ಇಲ್ಲಿಯದ್ದೊಂದು ಮಾತು ಕೇಳಿ ಹೇಳುವ ಚಾಳಿ ಇಲ್ಲ. ಹೈಕಮಾಂಡ್‌ನಿಂದ ಬಂದರೆ ಮಾತ್ರ ತಕ್ಕ ಉತ್ತರ ಹೇಳಬಲ್ಲೆ. ಸದ್ಯ ಅಂತಹದ್ದೇನು ಕಾಣುತ್ತಿಲ್ಲ. ಎಲ್ಲವನ್ನೂ ನೀವೇ ಹೇಳುತ್ತಿದ್ದೀರಿ. ಮುಂದಾಗುವುದನ್ನು ಹಿಂದಾಗುವುದನ್ನು ಹೇಳುತ್ತಿರಿ. ಪ್ರಶ್ನೆಯನ್ನೂ ನೀವೇ ಕೇಳುತ್ತೀರಿ. ಉತ್ತರ ನೀವೇ ಕೊಡುತ್ತೀರಿ ಎಂದು ನಗುತ್ತಲೇ ತಿಮ್ಮಾಪೂರ ಉತ್ತರಿಸಿದರು.

ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಹಾಗೂ ಡಿಕೆ ಜತೆಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಪಕ್ಷ ನಾಯಕರು. ಇಬ್ಬರನ್ನು ಕರೆಯುತ್ತಾರೆ. ನಾಲ್ಕು ಮಂದಿಯನ್ನೂ ಕರೆದು ಮಾತಾಡಿದರೆ ತಪ್ಪೇನು? ಕರೆದು ಮಾತಾಡಿದರೆ ಇದನ್ನೇ ಕೇಳಿದ್ದಾರೆ. ಅದನ್ನೇ ಹೇಳಿದ್ದಾರೆಂದು ನಿಮಗೆ ಗೊತ್ತಾ? ಬಯ್ಯಾ ನನ್ನ ಕಡೆ ಆ ಬಗ್ಗೆ ಉತ್ತರ ಇಲ್ಲ. ನಾನೇನಾದರೂ ಸಿಎಂ ಬದಲಾವಣೆ ಮಾಡೋದಾ? ಯಾವ ಮುಖ್ಯಮಂತ್ರಿ ತಂದು ಇಡುವ ಶಕ್ತಿ ನನಗೆ ಇದ್ದಿದ್ದರೆ ಇಲ್ಲೇ ಬಾಗಲಕೋಟೆಯಲ್ಲೇ ಹೇಳಿ ಬಿಡುತ್ತಿದೆ. ಇಂತವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದೆ. ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿದ್ದಾರೆ. ರಾಜ್ಯದ ಪ್ರತಿಯೊಂದು ಇಂಚು ಅವರಿಗೆ ಗೊತ್ತಿದೆ. ತೀರ್ಮಾನ ಸರಿಯಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ದೇವರು ನನ್ನ ಕೈ ಬಿಡೋದಿಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವರು ಯಾರನ್ನು ಕೈ ಬಿಡ್ತಾನೆ? ನಿಮ್ಮನ್ನು ಬಿಡ್ತಾನಾ ದೇವರು, ದೇವರು ಎಲ್ಲರ ಕೈ ಹಿಡಿತಾನೆ. ನಮ್ಮ ನಮ್ಮ ಅನುಭವ ನಮ್ಮ ನಮ್ಮ ಮಾತುಗಳು, ನಾವು ಬಂದಿರುವ ರೀತಿ ಕರ್ಮಸಿದ್ಧಾಂತವನ್ನು ಒಬ್ಬರು ನಂಬುತ್ತಾರೆ. ಧರ್ಮ ಸಿದ್ಧಾಂತವನ್ನು ಒಬ್ಬರು ನಂಬುತ್ತಾರೆ. ಕಾಯವೇ ಕೈಲಾಸ ಎಂದು ಒಬ್ಬರು ಹೇಳುತ್ತಾರೆ. ಅವರ ನಂಬಿಕೆ ಇರಬಹುದು ಎಂದು ಹೇಳಿದರು.