ಮುಂಬರುವ ದಿನಗಳಲ್ಲಿ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ತಪಾಸಣೆ ಹಾಗೂ ಉಚಿತ ನೇತ್ರ ಚಿಕಿತ್ಸೆ ನಡೆಸಲು ತಿರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನನ್ನ ಹೆತ್ತವರ ಪ್ರೇರಣೆಯಿಂದ ನಾವು ದುಡಿದ ಹಣದಲ್ಲಿ ಒಂದು ಭಾಗ ಸಮಾಜ ಸೇವೆಗಾಗಿ ಬಡವರ ಕಲ್ಯಾಣಕ್ಕಾಗಿ ನೀಡುವ ಮೂಲಕ ಸಣ್ಣ ಸೇವೆ ಮಾಡುತ್ತದ್ದೇನೆ. ಇದಕ್ಕೆ ಎಲ್ಲ ಹಿರಿಯರ ಆಶೀರ್ವಾದವೂ ಕೂಡ ಇದೇ. ಅದನ್ನು ನಾನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಸ್ಕಿ ಫೌಂಡೇಶನ್ ಮುಖ್ಯಸ್ಥ ಸಿ.ಬಿ.ಅಸ್ಕಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸಂಜೆ ಅಸ್ಕಿ ಫೌಂಡೇಶನ್ ವತಿಯಿಂದ ನಡೆದ ಹೊಸವರ್ಷದ ದಿನದರ್ಶಿಕೆ ಲೋಕಾರ್ಪಣೆ ಹಾಗೂ ಹಸಿರು ತೋರಣ ಬಳಗ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮರೇಶ ಗೂಳಿ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ ಮಹಾಮಂಡಳದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಆನಂದ ಬಿರಾದಾರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕೋಣ್ಣೂರ ಗ್ರಾಮದ ರೈತರು ಸಂಕಷ್ಟದಲ್ಲಿದ್ದಾಗ ಸುಮಾರು ₹10 ಲಕ್ಷ ವೆಚ್ಚದಲ್ಲಿ ನೂರಾರು ರೈತರಿಗೆ ಉಚಿತ ಪಂಪಸೆಟ್ ಕೊಡುಗೆಯಾಗಿ ನೀಡುವ ಮೂಲಕ ರೈತರ ಆಶ್ರಯಕ್ಕೆ ನಿಂತಿದ್ದೇನೆ. ಕೋವಿಡ್‌ ವೇಳೆ ತತ್ತು ಅನ್ನ ಸಿಗದೇ ಪರದಾಡುತ್ತಿರುವ ಸಂದರ್ಭದಲ್ಲಿ ತಾಳಿಕೋಟಿ ಖಾಸ್ಗತೇಶ್ವರ ಮಠದ ಶ್ರೀ ಬಾಲಶಿವಯೋಗಿ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಆಹಾರಧಾನ್ಯ ವಿತರಣೆ, ರಂಜಾನ್‌ ತಿಂಗಳಲ್ಲಿ ರೋಜಾ ವೃತದವರಿಗೆ ಇಪ್ತಿಯಾರಕೂಟವೂ ಸೇರಿದಂತೆ ಅನೇಕ ಆರೋಗ್ಯ ಶಿಬಿರಗಳನ್ನು ನಮ್ಮ ಫೌಂಡೇಶನ್‌ನಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.ಹಿರಿಯ ಸಾಹಿತಿ ಪ್ರೊ.ಬಿ.ಎಂ ಹಿರೇಮಠ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಕೆಯುಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಸತೀಶ ಓಸ್ವಾಲ್‌ ಮಾತನಾಡಿ, ಇಂದು ಸಾಕಷ್ಟುಜನ ಶ್ರೀಮಂತರಿದ್ದಾರೆ. ಆದರೇ ದಾನಧರ್ಮ ಮಾಡುವ ಇಚ್ಛೇ ಇರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಸಮಾಜ ಸೇವಕ ಸಿ.ಬಿ.ಅಸ್ಕಿ ತಮ್ಮ ದುಡಿಮೆಯ ಒಂದು ಭಾಗವನ್ನು ದಾನ, ಧರ್ಮ ಮತ್ತು ಪರೋಪಕಾರಕ್ಕೆ ವಿನಿಯೋಗಿಸುವ ಮೂಲಕ ಉತ್ತಮ ಸಾಮಾಜಿಕ ಸೇವೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.

ಹಸಿರು ತೋರಣ ಬಳಗದ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ಮಹಾಬಳೇಶ ಗಡೇದ ಮಾತನಾಡಿ, ಅಸ್ಕಿಯವರು ಕೇವಲ ಸಮಾಜ ಸೇವಕರಲ್ಲದೇ ಪರಿಸರ ಪ್ರೇಮಿಗಳು ಹೌದು. ಪರಿಸರ ರಕ್ಷಣೆಗೆ ನಿಂತು ಸಾವಿರಾರು ಗಿಡಮರಗಳನ್ನು ನೆಟ್ಟು ಉಳಿಸಿ ಬೆಳಸಲು ಅವರ ಸಹಾಯ ಸಹಕಾರವೂ ಅಗತ್ಯವಾಗಿದೆ. ಹಸಿರು ತೋರಣ ಬಳಗದ ನೂತನ ಅಧ್ಯಕ್ಷರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆ. ಅಸ್ಕಿಯವರ ಜಾತ್ಯಾತೀತ, ಪಕ್ಷಾತೀತವಾಗಿ ಮಾಡುತ್ತಿರುವ ಸಾಮಾಜಿಕ ಸೇವೆಗೆ ತಾಲೂಕಿನ ಹಸಿರು ತೋರಣ ಬಳಗವು ಸದಾ ಅವರ ಬೆನ್ನಿಗೆ ನಿಲ್ಲುತ್ತದೆ ಎಂದರು.

ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗಣ್ಯರಾದ ಬಸವರಾಜ ನಾಲತವಾಡ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಬಾಪುಗೌಡ ಪಾಟೀಲ, ಗಣೇಶ ಅನ್ನಗೋನಿ, ಸಂಗನಗೌಡ ಬಿರಾದಾರ (ಜಿಟಿಸಿ), ವಿಜಯಮಹಾಂತೇಶ ಪವಾಡಶೇಟ್ಟಿ, ಸಂಗಣ್ಣ ಹುನಗುಂದ, ಸೋಮು ಮೇಟಿ, ಶ್ರೀಶೈಲ ಪೂಜಾರಿ, ಪ್ರಕಾಶ ಸರಾಫ, ಎಂ.ಆರ್.ಹಿರೇಮಠ, ಆಶೀಪ್ ಅಹ್ಮದ ಅವಟಿ, ಮುತ್ತಣ್ಣ ಬಾವಲತ್ತಿ, ಚಂದ್ರ ದೊಡಮನಿ ಸೇರಿದಂತೆ ಹಲವರು ಇದ್ದರು.

ಮುಂಬರುವ ದಿನಗಳಲ್ಲಿ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ತಪಾಸಣೆ ಹಾಗೂ ಉಚಿತ ನೇತ್ರ ಚಿಕಿತ್ಸೆ ನಡೆಸಲು ತಿರ್ಮಾನಿಸಲಾಗಿದೆ. ಇಂತಹ ಅನೇಕ ಸಾಮಾಜಿಕ ಸೇವೆಗೆ ತಾಳಿಕೋಟಿ, ನಾಲತವಾಡ ಹಾಗೂ ಮುದ್ದೇಬಿಹಾಳ ಪಟ್ಟಣಗಳ ಎಲ್ಲ ಹಿರಿಯ ಮುಖಂಡರು, ಸಾಹಿತಿಗಳು, ಗಣ್ಯರು ಸದಾ ಬೆನ್ನು ತಟ್ಟಿ ಸ್ಫೂರ್ತಿಯಾಗಿ ನಿಂತಿದ್ದಾರೆ ಎಲ್ಲರಿಗೂ ಧನ್ಯವಾದ.

- ಸಿ.ಬಿ.ಅಸ್ಕಿ, ಅಸ್ಕಿ ಫೌಂಡೇಶನ್ ಅಧ್ಯಕ್ಷರು