ಸಾರಾಂಶ
ಪಟ್ಟಣದ ಹೊಸಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದ ಅಕ್ಕ ಪಕ್ಕದ ಸಂದಿಗಳಲ್ಲಿ ಪಾದಚಾರಿಗಳು, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಕೂಡಲೇ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಂದಿಗಳಲ್ಲಿ ರಸ್ತೆ ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪಟ್ಟಣದ ಹೊಸಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದ ಅಕ್ಕ ಪಕ್ಕದ ಸಂದಿಗಳಲ್ಲಿ ಪಾದಚಾರಿಗಳು, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಕೂಡಲೇ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಂದಿಗಳಲ್ಲಿ ರಸ್ತೆ ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಹಂತದಲ್ಲಿನ ಕಮತಗಿ ಮುಖ್ಯ ರಸ್ತೆಯಿಂದ ಸಂದಿಗಳಲ್ಲಿ ಬೈಕ್ ಸಂಚಾರಕ್ಕೆ ಹಾಗೂ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ತೊಂದರೆಯಾಗಿದೆ. ರಸ್ತೆ ಎತ್ತರವಾಗಿದ್ದು ಎಲ್ಲ ಸಂದಿಗಳ ರಸ್ತೆಗಳು ಬಹಳಷ್ಟು ತೆಗ್ಗುಗಳಿಂದ ಕೂಡಿವೆ. ಇದರಿಂದ ಸಂದಿಯಿಂದ ಮುಖ್ಯ ರಸ್ತೆಗೆ ಹೋಗಲು ಬೈಕ್ ಸವಾರರು ಹರಸಾಹಸ ಪಡುವಂತಾಗಿದೆ. ಪಾದಾಚಾರಿಗಳು ಕೂಡ ಸಂದಿಯಿಂದ ರಸ್ತೆಯತ್ತ ಹೋಗಲು ಸಮಸ್ಯೆ ಎದುರಿಸುತ್ತಿದ್ದಾರೆ. ನಿರ್ಮಾಣಗೊಳ್ಳುತ್ತಿರುವ ರಸ್ತೆ ಅಕ್ಕ ಪಕ್ಕದ ಅಂಗಡಿಗಳ ಮುಂದೆಯೂ ಸಾಕಷ್ಟು ತೆಗ್ಗು ಪ್ರದೇಶವಾಗಿದೆ. ಅಂಗಡಿಗಳ ಎದುರು ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಂಗಡಿಗಳ ಮುಂದಿನ ಕಟ್ಟಿಗಳನ್ನು ತೆಗೆದು ತೆಗ್ಗು ದಿನ್ನೆಮಾಡಿದ್ದು ಜನರ ಓಡಾಟಕ್ಕೆ ಅಡಚಣೆ ಉಂಟಾಗಿದೆ. ಇದರಿಂದ ರಸ್ತೆಯ ಅಕ್ಕಪಕ್ಕದ ಕಿರಾಣಿ, ಔಷಧಿ, ಸರಾಫ, ಪಾನ್‌ಶಾಪ್ ಹೀಗೆ ಎಲ್ಲ ರೀತಿಯ ವ್ಯಾಪಾರಕ್ಕೆ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ರಸ್ತೆ ಪಕ್ಕದ ಸಂದಿಗಳಿಗೆ ಸಂಪರ್ಕ ರಸ್ತೆ ಮಾಡಿ ಬೈಕ್, ವಾಹನ ಸವಾರರು ತಿರುಗಾಡಲು ಅನುಕೂಲ ಮಾಡಿಕೊಡಬೇಕು. ಅಂಗಡಿಗಳ ಮುಂದೆ ಅಗೆದಿರುವ ತೆಗ್ಗುಗಳಿಗೆ ಗರಸು ಹಾಕಿ ಜನರ ಓಡಾಟ ಹಾಗೂ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಅಶೋಕ ಹೆಗಡೆ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ರಾಚಪ್ಪ ಸಾರಂಗಿ, ಮಂಜುನಾಥ ರಾಜನಾಳ, ಪ್ರಕಾಶ ವಾಳದುಂಕಿ, ಬಸವರಾಜ ತೊಗರಿ, ಮೋಹನ ಮಲಜಿ ಸೇರಿದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ರಸ್ತೆ ಕಾಮಗಾರಿ ತೀವ್ರಗತಿಯಲ್ಲಿ ಮಾಡುತ್ತಿದ್ದೇವೆ. ರಸ್ತೆ ಅಕ್ಕಪಕ್ಕದ ಸಂದಿಗಳಿಗೆ ಗರಸು ಹಾಕಿ ಸಂಪರ್ಕ ರಸ್ತೆ ನಿರ್ಮಿಸುತ್ತೇವೆ. ಅಂಗಡಿಗಳ ಮುಂದೆಯೂ ಗರಸು ಹುಗುತಿ ಹಾಕಿ ವ್ಯಾಪಾರಕ್ಕೆ ಅಡ್ಡಾಡಲು ಅನುಕೂಲ ಮಾಡುತ್ತೇವೆ. ಸಾರ್ವಜನಿಕರು ಕೂಡ ಸಹಕಾರ ನೀಡಬೇಕು.
-ಎಂ.ಕೆ.ಮಕಾನದಾರ, ಕಿರಿಯ ಅಭಿಯಂತರ, ಲೋಕೋಪಯೋಗಿ ಇಲಾಖೆ.