ಸಾರಾಂಶ
ತಾಲೂಕಿನ ಸಿ. ಎಸ್ ಪುರ ಹೋಬಳಿ ನಾರನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸುಮಾರು 3 ವರ್ಷದ ಚಿರತೆ ಬುಧವಾರ ಮುಂಜಾನೆ ಸೆರೆಯಾಗಿದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಸಿ. ಎಸ್ ಪುರ ಹೋಬಳಿ ನಾರನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸುಮಾರು 3 ವರ್ಷದ ಚಿರತೆ ಬುಧವಾರ ಮುಂಜಾನೆ ಸೆರೆಯಾಗಿದೆ. ಸುಮಾರು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಕಾಟ ಹೆಚ್ಚಾಗಿ ಜನ, ಜಾನುವಾರುಗಳು ಹೊರಗಡೆ ತಿರುಗಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಗ್ರಾಮಸ್ಥರು ಚಿರತೆಯ ಸೆರೆಗೆ ಆಗ್ರಹಿಸಿದ್ದರು.ಬೋನಿಗೆ ಬಿದ್ದಿರುವ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಮೀಪದಲ್ಲಿ ಬಿಟ್ಟರೆ ಮತ್ತೆ ಇಲ್ಲಿಗೆ ಬರುವ ಸಾಧ್ಯತೆ ಇರುವುದರಿಂದ ದೂರದ ಕಾಡಿಗೆ ಬಿಡಬೇಕು. ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸೂಕ್ತ ಕ್ರಮವಹಿಸಿ ಜನರ ಆತಂಕವನ್ನು ನಿವಾರಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿಯಮಾನುಸಾರ ಕ್ರಮ ಕೈಗೊಂಡು ಸೆರೆ ಸಿಕ್ಕಿರುವ ಚಿರತೆಯನ್ನು ದೂರದ ಕಾಡಿಗೆ ಬಿಡುತ್ತೇವೆ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಲಯ ಅರಣ್ಯ ಅಧಿಕಾರಿ ಸತೀಶ್ ಚಂದ್ರ, ಉಪ ವಲಯ ಅರಣ್ಯ ಅಧಿಕಾರಿ ಸಿದ್ದಲಿಂಗ ಮೂರ್ತಿ, ವನಪಾಲಕ ಮುನೋಜಿ ರಾವ್, ಶಂಕರಮೂರ್ತಿ ಹಾಗೂ ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.