ಬಸವರಾಜ ಬೊಮ್ಮಾಯಿ ಪರ ರಾಣಿಬೆನ್ನೂರಿನಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

| Published : May 02 2024, 12:28 AM IST

ಬಸವರಾಜ ಬೊಮ್ಮಾಯಿ ಪರ ರಾಣಿಬೆನ್ನೂರಿನಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರಿನಲ್ಲಿ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪಾರ ಜನಸ್ತೋಮದ ನಡುವೆ ರೋಡ್ ಶೋ ನಡೆಸಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತ ಯಾಚನೆ ಮಾಡಿದರು.

ರಾಣಿಬೆನ್ನೂರು: ವಾಣಿಜ್ಯ ನಗರಿ ರಾಣಿಬೆನ್ನೂರಿನಲ್ಲಿ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪಾರ ಜನಸ್ತೋಮದ ನಡುವೆ ರೋಡ್ ಶೋ ನಡೆಸಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತ ಯಾಚನೆ ಮಾಡಿದರು.

ಸಂಜೆ 5ರ ಸುಮಾರಿಗೆ ರಾಣಿಬೆನ್ನೂರಿಗೆ ಆಗಮಿಸಿದ ಅಮಿತ್ ಶಾ ಸುಮಾರು ಒಂದು ಕಿ.ಮೀ. ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಮತ ಯಾಚಿಸಿದರು. ದಾರಿಯುದ್ದಕ್ಕೂ ಅಪಾರ ಜನಸಾಗರ ಸೇರಿತ್ತು.

ಎಲ್ಲೆಡೆ ಕೇಸರಿ, ಜೆಡಿಎಸ್ ಕಲರವ: ರೋಡ್ ಶೋ ಪ್ರಾರಂಭದಿಂದಲೇ ಜನರು ರಸ್ತೆಯ ಇಕ್ಕೆಲಗಳಲ್ಲಿ ಎತ್ತರದ ಕಟ್ಟಡಗಳ ಮೇಲೆ ನಿಂತು ಅಮಿತ್ ಶಾ ಅವರಿಗೆ ಕೈ ಬೀಸಿದರು. ಪ್ರಾರಂಭದಿಂದ ಕೊನೆಯವರೆಗೂ ಅಮಿತ್ ಶಾ ಜನರತ್ತ ಗುಲಾಬಿ ಹೂಗಳನ್ನು ಎಸೆದು ಹುರಿದುಂಬಿಸಿದರು.

ಕುರುಬಗೇರಿ ಕ್ರಾಸ್ ಬಳಿಯಿಂದ ಹೊರಟ ಮೆರವಣಿಗೆ ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಪೋಸ್ಟ್ ಸರ್ಕಲ್ ಮಾರ್ಗವಾಗಿ ಅಶೋಕ ಸರ್ಕಲ್‌ಗೆ ಬಂದು ತಲುಪಿತು.

ಜನರ ಕೈಯಲ್ಲಿ ಕೇಸರಿ, ಜೆಡಿಎಸ್ ಬಾವುಟಗಳು ಹಾರಾಡುತ್ತಿದ್ದವು. ದಾರಿಯುದ್ದಕ್ಕೂ ಜನರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಅಮಿತ್ ಶಾ ಫೋಟೋ ಕ್ಲಿಕ್ಕಿಸುತ್ತಾ ಅವರ ಬಗ್ಗೆ ತಮಗಿರುವ ಅಭಿಮಾನ ಪ್ರದರ್ಶಿಸಿದರು. ಇದಲ್ಲದೆ ಮೋದಿ ಮೋದಿ ಘೋಷಣೆ ನಿರಂತರವಾಗಿ ಕೇಳಿ ಬಂದಿತು.

ಯಾತ್ರೆಯ ಕೊನೆಯಲ್ಲಿ ಅಮಿತ್ ಶಾ ಮಾತನಾಡಿ, ಕಮಲದ ಬಟನ್ ಒತ್ತಿದರೆ ಮೋದಿಗೆ ವೋಟ್ ಹಾಕಿದಂತಾಗುತ್ತದೆ. ಆ ಮೂಲಕ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಿ ಅವರನ್ನು ದೆಹಲಿಗೆ ಕಳುಹಿಸಿಕೊಡಿ ಎಂದು ಹೇಳಿ ಕೇವಲ ಐದು ನಿಮಿಷದಲ್ಲಿ ಭಾಷಣ ಕೊನೆಗೊಳಿಸಿದರು.

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡ ಗವಿಸಿದ್ದ ದ್ಯಾಮಣ್ಣನವರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮತ್ತಿತರರು ವಾಹನದಲ್ಲಿದ್ದರು.

ಬಿಗಿ ಬಂದೋಬಸ್ತ್: ರೋಡ್ ಶೋ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಿದ್ದು, ಎಲ್ಲಿ ನೋಡಿದರಲ್ಲಿ ಪೊಲೀಸರೇ ಕಾಣುತ್ತಿದ್ದರು. ಕೆಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.