ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು, ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುನಗ ಎಲ್.ಟಿ.2ದಲ್ಲಿ ಇದಕ್ಕಾಗಿ ಸ್ಥಳ ಗುರುತಿಸಲಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು, ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುನಗ ಎಲ್.ಟಿ.2ದಲ್ಲಿ ಇದಕ್ಕಾಗಿ ಸ್ಥಳ ಗುರುತಿಸಲಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ತಾಲೂಕಿನ ಸುನಗ ಎಲ್.ಟಿ. 2 ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರಮಿಕ ವಸತಿ ಶಾಲೆಯ ಭೂಮಿಪೂಜಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಾದರಿಯಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇದಕ್ಕೆ ಅಂದಾಜು ₹35 ಕೋಟಿ ಅನುದಾನವನ್ನು ಮಂಡಳಿ ಮೀಸಲಿಟ್ಟಿದೆ. 6ನೇ ತರಗತಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ದೊರೆಯಲಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ಹೇಳಿದರು.

ಆರ್ಥಿಕವಾಗಿ ದುರ್ಬಲರಾಗಿರುವ ಕಟ್ಟಡ ಕಾರ್ಮಿಕರು ಸಾಮಾನ್ಯವಾಗಿ ವಲಸೆ ಪ್ರವೃತ್ತಿ ಹೊಂದಿರುತ್ತಾರೆ. ರಾಜ್ಯದ ಇತರೆ ನಗರ ಹಾಗೂ ಹೊರ ರಾಜ್ಯಗಳಿಗೂ ವಲಸೆ ಹೋಗುತ್ತಾರೆ. ಬದುಕು ಸಾಗಿಸುವ ಅನಿವಾರ್ಯತೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಕಡಿಮೆ. ಇಂತಹ ಕಾರ್ಮಿಕರು ವಲಸೆ ಹೋದರೂ ಅವರ ಮಕ್ಕಳು ವಸತಿ ಶಾಲೆಯಲ್ಲಿ ಓದಲು ಅನುಕೂಲವಾಗಲಿದೆ. ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪಲಿದೆ ಎಂದು ತಿಳಿಸಿದರು.

ಪ್ರತಿ ತರಗತಿಗೆ 50 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗುತ್ತದೆ. ಪ್ರತಿ ವಸತಿ ಶಾಲೆಯಲ್ಲಿ ಅಂದಾಜು 300ರಿಂದ 350 ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲಾ ಕಟ್ಟಡ, ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತದೆ. ತರಗತಿ ಕೊಠಡಿ, ಪ್ರಯೋಗಾಲಯ, ಕ್ರೀಡಾಂಗಣ, ಗ್ರಂಥಾಲಯ, ಕಚೇರಿ, ಶಿಕ್ಷಕರಿಗೆ ಪ್ರತ್ಯೇಕ ವಸತಿ ಸಮುಚ್ಛಯ ಇರಲಿದೆ ಎಂದರು.

15 ರಿಂದ 20 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ: ಆನವಾಲ ಲಿಫ್ಟ್ ಇರಿಗೇಶನ್ ಯೋಜನೆಗೆ ₹767 ಕೋಟಿ ವೆಚ್ಚವಾಗಲಿದ್ದು, ಇದರಿಂದ 15 ರಿಂದ 20 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ. ಬೀಳಗಿ ಲಿಫ್ಟ್ ಇರಿಗೇಶನ್ ಯೋಜನೆಯಡಿ 7 ಸಾವಿರ ಎಕರೆ ಪ್ರದೇಶಕ್ಕೆ ನೀರು ತಲುಪಿಸಲು ಮತ್ತು ಕಾಡರಕೊಪ್ಪ ಲಿಫ್ಟ್ ಇರಿಗೇಶನ್ ಯೋಜನೆಗೆ ₹167 ಕೋಟಿ ಈಗಾಗಲೇ ಮಂಜೂರಾಗಿದೆ. ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ ಎಂದು ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯುಕೆಪಿ ಸಂತ್ರಸ್ತರಿಗೆ ಕೇವಲ ಭಾಷಣದಲ್ಲಿ ಭರವಸೆ ನೀಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಷ್ಟೇ ಸಾಲವಾದರೂ ಪರವಾಗಿಲ್ಲ. ಯೋಜನೆಯನ್ನು ಪೂರ್ಣಗೊಳಿಸಲು ದಾಪುಗಾಲು ಇಟ್ಟಿದೆ. ಕೇಂದ್ರ ಸರ್ಕಾರ ಅನುಮತಿ ನೀಡದಿದ್ದರೂ, 75,000 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಯೋಜನೆಯನ್ನು ಪೂರ್ಣಗೊಳಿಸುವುದು ನಮ್ಮ ಸಂಕಲ್ಪ.

- ಜೆ.ಟಿ. ಪಾಟೀಲ ಶಾಸಕರು ಬಾದಾಮಿ