ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅಗತ್ಯವಾಗಿದೆ. ಪೋಷಕರು ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅಗತ್ಯವಾಗಿದೆ. ಪೋಷಕರು ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ನಗರದ ಸನ್‌ಸಿಟಿ -2ರ ಆವರಣದಲ್ಲಿ ಬಾಗಲಕೋಟೆ ಜಿಲ್ಲಾ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಕೇಟಿಂಗ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಮೊದಲ ಅಂತರ ಜಿಲ್ಲಾ ಸ್ಕೇಟಿಂಗ್‌ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ. ಇಂತಹ ಕ್ರೀಡಾಕೂಟಗಳು ಗ್ರಾಮೀಣ ಹಾಗೂ ನಗರ ಭಾಗದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತವೆ. ಸೈಕ್ಲಿಂಗ್ ಕ್ರೀಡೆಗೆ ಈಗಾಗಲೇ ಉತ್ತಮ ಪ್ರೋತ್ಸಾಹ ದೊರೆತಿದ್ದು, ಮುಂದಿನ ದಿನಗಳಲ್ಲಿ ಸ್ಕೇಟಿಂಗ್ ಕೂಡ ಜನಪ್ರಿಯ ಕ್ರೀಡೆಯಾಗಿ ಬೆಳೆಯುವ ಸಾಧ್ಯತೆ ಇದೆ. ಸ್ಕೇಟಿಂಗ್‌ಗಾಗಿ ಉತ್ತಮ ಮೂಲಸೌಕರ್ಯ ಮತ್ತು ತರಬೇತಿ ಸೌಲಭ್ಯಗಳು ಲಭ್ಯವಾದರೆ ಈ ಭಾಗದ ಮಕ್ಕಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

ತಹಸಿಲ್ದಾರ ಅನಿಲ ಬಡಿಗೇರ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಕ್ರೀಡಾ ಪ್ರತಿಭೆ ಅಪಾರವಾಗಿದ್ದು, ಅವರಿಗೆ ಸೂಕ್ತ ವೇದಿಕೆ ಮತ್ತು ತರಬೇತಿ ನೀಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ. ಪಂದ್ಯಾವಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿರುವ ಬಾಗಲಕೋಟೆ ಜಿಲ್ಲಾ ರೋಲರ್ ಸ್ಕೇಟಿಂಗ್‌ ಅಸೋಸಿಯೇಷನ್ ಹಾಗೂ ಸಂಘಟಕರ ಕಾರ್ಯ ಶ್ಲಾಘನೀಯವಾಗಿದೆ. ತರಬೇತುದಾರ ಸಂಜಯ ಮನ್ನಿಕೇರಿ ಅವರ ಪರಿಶ್ರಮ ಗಮನಾರ್ಹವಾಗಿದೆ. ಇಂತಹ ಕ್ರೀಡಾಕೂಟಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತವೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿ 150ಕ್ಕೂ ಹೆಚ್ಚು ಸ್ಕೇಟರ್‌ಗಳು ಭಾಗವಹಿಸಿದ್ದರು. ಸಾಂಗ್ಲಿ, ಬಾಗಲಕೋಟೆ ಜಿಲ್ಲೆ (ಮುಧೋಳ ಹಾಗೂ ಜಮಖಂಡಿ), ವಿಜಯಪುರ ಜಿಲ್ಲೆ (ಸೈನಿಕ ಶಾಲೆ, ವಿಜಯಪುರ ಕ್ಲಬ್‌ ಮತ್ತು ಮುದೇಬಿಹಾಳ) ಹಾಗೂ ಬೆಳಗಾವಿ ಜಿಲ್ಲೆ (ಅಥಣಿ) ತಂಡಗಳು ಮತ್ತು ಕ್ಲಬ್‌ಗಳನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ತಮ್ಮ ಪ್ರತಿಭೆ.ಅನಾವರಣ ಗೊಳಿಸಿದರು.

ಪಂದ್ಯಾವಳಿಯ ವಿಜೇತರು ಹಾಗೂ ಭಾಗವಹಿಸಿದ ಸ್ಪರ್ಧಿಗಳಿಗೆ ಪದಕಗಳು ಮತ್ತು ಸ್ಮರಣಿಕೆಗಳನ್ನು ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಹುಲ ಕಲೂತಿ, ಸಿಪಿಐ ಮಲ್ಲಪ್ಪಮಡ್ಡಿ, ಉದ್ಯಮಿ ಮಾಮೂನ್‌ ಪಾರ್ಥನಳ್ಳಿ ವಿತರಿಸಿದರು.