ಸಾಹಿತ್ಯ, ಸಂಗೀತ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಕ್ಷೇತ್ರಕ್ಕೆ ಪೂರಕ

| Published : Sep 01 2024, 01:52 AM IST

ಸಾರಾಂಶ

ಆಧುನಿಕ ಜೀವನಶೈಲಿಯಿಂದ ನಾವಿಂದು ನಮ್ಮ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಮರೆಯುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತ್ಯ, ಸಂಗೀತ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಕ್ಷೇತ್ರಕ್ಕೆ ಪೂರಕವಾಗಿರುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ದೇವಾನಂದ ವರಪ್ರಸಾದ್ ತಿಳಿಸಿದರು.

ನಗರದ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತ- ಜ್ಞಾನಸುಧಾ 2024 ನಗರ ಮಟ್ಟದ ಅಂತರ ಕಾಲೇಜು ಸಾಮಾನ್ಯ ರಸಪ್ರಶ್ನೆ ಮತ್ತು ಭಾವಗೀತೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ, ಸಾಹಿತ್ಯ, ಚಿತ್ರಕಲೆ ಮತ್ತು ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳು ದೈಹಿಕ ಮತ್ತು ಮಾನಸಿಕ ಜಡತ್ವವನ್ನು ಹೋಗಲಾಡಿಸಿ ಸದಾ ಚಟುವಟಿಕೆಯಿಂದ ಕ್ರಿಯಾಶೀಲರಾಗಿರುವಂತೆ ನಮ್ಮನ್ನು ಪ್ರೇರೆಪಿಸುತ್ತದೆ ಎಂದರು.

ಆಧುನಿಕ ಜೀವನಶೈಲಿಯಿಂದ ನಾವಿಂದು ನಮ್ಮ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಮರೆಯುತ್ತಿದ್ದೇವೆ. ಹೀಗಾಗಿ, ವಿದ್ಯಾರ್ಥಿಗಳಾದ ನೀವು ನಮ್ಮ ಸಂಸ್ಕೃತಿ ಮತ್ತು ಜ್ಞಾನವನ್ನು ಮೈಗೂಡಿಸಿಕೊಳ್ಳಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ತನ್ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಿ ಕಲೆಯನ್ನು ಪೋಷಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸಂಗೀತ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅಡಗಿರುವಂತಹ ಪ್ರತಿಭೆ ಇನ್ನಷ್ಟು ಜಾಗೃತಗೊಂಡು ಏಕಾಗ್ರತೆ ಹೆಚ್ಚುತ್ತದೆ. ಕೇವಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವ ಉದ್ದೇಶದಿಂದಲೇ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳದೆ ಆತ್ಮತೃಪ್ತಿಗಾಗಿ ಭಾಗವಹಿಸಿರಿ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿರಂದ ಬದುಕಿನಲ್ಲಿ ಸದಾ ಸಂತೋಷವಾಗಿರಲು ಸಾಧ್ಯ.

ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರುವುದರಿಂದ ಸಾಧನೆಯ ಶಿಖರವನ್ನು ಏರಬಹುದು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ, ಜೀವನದ ಯಶಸ್ಸಿಗೆ ಅಂಕವೊಂದೇ ಮಾಪನವಲ್ಲ. ಸಂಗೀತ, ರಸಪ್ರಶ್ನೆ ಮುಂತಾದ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಲವಾರು ವಿಷಯಗಳ ಮೂಲ ಜ್ಞಾನವನ್ನು ಅರಿಯಲು ಸಾಧ್ಯ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನವಲ್ಲ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್‌, ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲೆ ಎಸ್.ಎ. ವೀಣಾ ಇದ್ದರು. ಭಾವಗೀತೆ ಸ್ಪರ್ಧೆಯ ನಿರ್ಣಾಯಕರಾಗಿ ಅಶ್ವಿನ್ ಎಂ. ಪ್ರಭು, ಹಂಸಿನಿ ಎಸ್. ಕುಮಾರ್, ಸುಶ್ರಾವ್ಯ ಸಚಿನ್ ಕಾರ್ಯ ನಿರ್ವಹಿಸಿದರು. ಸುರಭಿ ತಂಡ ಪ್ರಾರ್ಥಿಸಿದರು. ಶ್ರೀವರ ಸ್ವಾಗತಿಸಿದರು. ಅನಿರುದ್ಧ ನಿರೂಪಿಸಿದರು. ಸುದರ್ಶನ್ ವಂದಿಸಿದರು.

----

ಬಾಕ್ಸ್...

ಸ್ಪರ್ಧೆಗಳಲ್ಲಿ ವಿಜೇತರು

ಫೋಟೋ- 31ಎಂವೈಎಸ್10

----

ಭಾವಗೀತೆ ಸ್ಪರ್ಧೆ- ಪ್ರಮತಿ ಪಿಯು ಕಾಲೇಜು ಯೋಗಶ್ರೀ (ಪ್ರಥಮ), ಸದ್ವಿದ್ವಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು- ಶ್ರೇಯಾ ಶ್ರೀಧರ್ (ದ್ವಿತೀಯ), ವಿಜಯ ವಿಠಲ ಪಿಯು ಕಾಲೇಜು ಎಸ್. ಭುವನಾ(ತೃತೀಯ), ಸದ್ವಿದ್ವಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು ರಿಷಭ್ ಜಕ್ಕಳ್ಳಿ (ಸಮಾಧಾನಕರ ಬಹುಮಾನ). ಪರ್ಯಾಯ ಪಾರಿತೋಷಕ- ಸದ್ವಿದ್ವಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು.

ರಸಪ್ರಶ್ನೆ ಸ್ಪರ್ಧೆ- ಜ್ಞಾನೋದಯ ಪಿಯು ಕಾಲೇಜು ಎಸ್. ಕಿರಣ್ ಕುಮಾರ್ ಮತ್ತು ಎಸ್.ಆರ್. ಮಂಜುನಾಥ (ಪ್ರಥಮ), ಮರಿಮಲ್ಲಪ್ಪ ಪಿಯು ಕಾಲೇಜು ನಾಗಶ್ರೇಯಾ ಸೌರಭ ಮತ್ತು ಎಸ್. ಪರೀಕ್ಷಾನಂದ್ (ದ್ವಿತೀಯ), ಸದ್ವಿದ್ಯಾ ಪಿಯು ಕಾಲೇಜಿನ ಎಂ.ಎಸ್. ರಘುನಂದನ್ ಮತ್ತು ಡಿ.ವೈ. ಸುಪ್ರೀತ್ (ತೃತೀಯ), ವಿಜಯ ವಿಠ್ಠಲ ಪಿಯು ಕಾಲೇಜಿನ ವಿಶ್ರುತ್ ಎಸ್. ಪ್ರಸಾದ್ ಮತ್ತು ಕೆ.ವಿ. ಅದ್ವೈತ್ (ಸಮಾಧಾನಕರ ಬಹುಮಾನ). ಪರ್ಯಾಯ ಪಾರಿತೋಷಕ- ಜ್ಞಾನೋದಯ ಪಿಯು ಕಾಲೇಜು.