ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್ ಬಂದ್ ಮಾಡಿ ಎಂದು ಹೋಟೆಲ್ ಮಾಲೀಕರಿಗೆ ನಾನು ಕರೆ ನೀಡಿಲ್ಲ. ಬಂದ್‌ಗೆ ಪ್ರಚೋದನೆ ನೀಡಿದ್ದೇನೆ ಎಂಬುದು ಸುಳ್ಳು ಆರೋಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ವಿಧಾನಸಭೆಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್ ಬಂದ್ ಮಾಡಿ ಎಂದು ಹೋಟೆಲ್ ಮಾಲೀಕರಿಗೆ ನಾನು ಕರೆ ನೀಡಿಲ್ಲ. ಬಂದ್‌ಗೆ ಪ್ರಚೋದನೆ ನೀಡಿದ್ದೇನೆ ಎಂಬುದು ಸುಳ್ಳು ಆರೋಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶೂನ್ಯ ವೇಳೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಕುರಿತ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದ್‌ಗೆ ಕರೆ ನೀಡಿದ್ದಾರೆ ಎಂದು ಹೇಳಿದರು.ಈ ವೇಳೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಆ ರೀತಿ ಹೇಳಿಲ್ಲ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಆಗದಿದ್ದರೆ ಪ್ರತಿಭಟನೆ ನಡೆಸಿ ಹೋಟೆಲ್ ಬಂದ್ ಮಾಡಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದರು. ಆಗ ಅವರ ನಿರ್ಧಾರ ಸರಿ ಇದೆ ಎಂದು ಹೇಳಿದ್ದೇನೆ. ನಾನೇ ಬಂದ್ ಮಾಡಿ, ಪ್ರತಿಭಟನೆ ಮಾಡಿ ಎಂದು ಹೇಳಿಲ್ಲ ಎಂದು ಹೇಳಿದರು.
ಹೋಟೆಲ್ ಮಾಲೀಕರ ಸಂಘದ ಬೇಡಿಕೆ ಹಾಗೂ ನಿರ್ಧಾರ ಸರಿಯಿದೆ. ಅದನ್ನು ಈಗಲೂ ಹೇಳುತ್ತೇನೆ ಮುಂದೆಯೂ ಹೇಳುತ್ತೇನೆ ಎಂದರು.ಆರ್.ಅಶೋಕ್, ‘ಮಾಧ್ಯಮಗಳಲ್ಲಿ ನೀವು ಬಂದ್ ಮಾಡಿ ಎಂದಿದ್ದೀರಿ ಎಂದು ಸುದ್ದಿ ಬಂದಿದೆ. ಹೀಗಾಗಿ ನೀವು ಹೇಳಿದ್ದೀರಿ’ ಎಂದು ವಾದಿಸಿದರು.
ಆಗ ಸಿದ್ದರಾಮಯ್ಯ, ‘ನೀವು ಅಲ್ಲಿ ಇದ್ರಾ? ಹೇಳಿರುವುದು ನಾನು. ನಾನು ಬಂದ್ ಮಾಡಲು ಹೇಳಿಲ್ಲ. ಮಾಧ್ಯಮದಲ್ಲಿ ಬಂದಿದ್ದರೆ ನಾನೇನು ಮಾಡಲಿ? ನಾನು ಹೇಳಿಲ್ಲ’ ಎಂದರು.ಅದಕ್ಕೆ ಆರ್.ಅಶೋಕ್, ನೀವು ಹೇಳಿರುತ್ತೀರಿ ಬಳಿಕ ಮರೆತು ಬಿಡುತ್ತೀರಿ. ಮಾಧ್ಯಮದವರು ನಿಮ್ಮ ಹೇಳಿಕೆಯನ್ನು ಹತ್ತಾರು ಬಾರಿ ಕೇಳಿಸಿಕೊಂಡು ಬರೆದಿರುತ್ತಾರೆ ಎಂದು ಹೇಳಿದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನಿರಾಕರಿಸಿದರು.