ಕಾಂಗ್ರೆಸ್ ಸರ್ಕಾರದ್ದು ಅಭಿವೃದ್ಧಿ ಶೂನ್ಯ ಆಡಳಿತ: ಬೋಪಯ್ಯ ಟೀಕೆ

| Published : Sep 01 2024, 01:52 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್‌ ಸರ್ಕಾರದ್ದು ಅಭಿವೃದ್ಧಿ ಶೂನ್ಯ ಆಡಳಿತ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕಿಡಿ ಕಾರಿದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಜನಪರ ನಿಲುವುಗಳಿಂದ ಹಿಂದುಳಿದು ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಆಡಳಿತವನ್ನು ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದ್ದು ಅಭಿವೃದ್ಧಿ ಶೂನ್ಯ ಆಡಳಿತದ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕಿಡಿ ಕಾರಿದರು.

ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜಪೇಟೆ ಮಂಡಲ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುದೀರ್ಘವಾಗಿ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು.

ಭ್ರಷ್ಟಾಚಾರವನ್ನು ಹೆಗಲಿನಲ್ಲಿ ಹೊತ್ತುಕೊಂಡು ಸರ್ಕಾರ ತೆವಳುತ್ತಾ ಸಾಗುತ್ತಿದೆ. ಈ ಭಾರವನ್ನು ಹೂತುಕೊಳ್ಳಲಾಗದೆ ಕೆಲವೇ ದಿನಗಳಲ್ಲಿ ಉರುಳಿ ಬೀಳುವ ಸಂಭವವೇ ಹೆಚ್ಚಿದೆ ಎಂದು ಸರ್ಕಾರದ ಅಪಾಯಕಾರಿ ನಡೆಯಾಗಿದೆ.

ಉಚಿತ ಯೋಜನೆಗಳ ಮೂಲಕ ಶೂನ್ಯ ಪ್ರಗತಿಯನ್ನು ಸರ್ಕಾರ ಕಾಣುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಸರ್ಕಾರ ಕಳೆದುಕೊಂಡಿದೆ. ನಾವು ಬಿಜೆಪಿಯವರು ದೇಶ ಕಟ್ಟಲು ಹೊರಟಿದ್ದೇವೆ. ಈ ಮೂಲಕ ಚಿಂತಿಸಿ ದೇಶವನ್ನು ಆರ್ಥಿಕ ಸ್ಥಿತಿಯ ಜೊತೆಗೆ ಪ್ರಗತಿಯತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ. ರಾಜ್ಯ ಸರ್ಕಾರ ಇಂತಹ ಜನಪರ ಚಟುವಟಿಕೆಗಳಿಗೆ ಸ್ಪಂದಿಸದೆ, ಈ ಹಿಂದೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟ ಅನುದಾನಗಳನ್ನೇ ಬಳಸಿಕೊಂಡು ಇದು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯ ಎಂದು ಬೊಗಳೆ ಬಿಡುತ್ತಿರುವುದು ನಾಚಿಕೆಗೇಡಿನ ಪ್ರಸಂಗವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಜಮ್ಮ ಸಮಸ್ಯೆಯ ಬಗ್ಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಆದರೂ, ಅದನ್ನು ಸುಳ್ಳು ಎಂದು ಬಿಂಬಿಸುತ್ತಿದ್ದಾರೆ. ಹಿರಿಯರು ಪಾರಂಪರಿಕವಾಗಿ ಮನೆಗಳಲ್ಲಿ ವನ್ಯ ಪ್ರಾಣಿಗಳ ಕೊಂಬು ಮತ್ತು ಚರ್ಮಗಳ ಬಳಕೆ ಮಾಡಲಾಗುತ್ತಿತ್ತು. ಈ ಬಗ್ಗೆ 1972 ರಲ್ಲಿ ಸರ್ಕಾರ ಸ್ಪಷ್ಟತೆಯನ್ನ ಕೇಳಿ ಪರಿಹಾರ ನೀಡಿದೆ. ಅದನ್ನು ಮುನ್ನಲಗೆ ತರುವ ರಾಜಕೀಯ ಪ್ರಯತ್ನ ನಡೆಸಿ ಜನ ವಿರೋಧಿಸುತ್ತಿದ್ದಂತೆ ಅದನ್ನು ತಡೆಹಿಡಿಯುವ ತಂತ್ರಗಾರಿಕೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗಿದೆ.

ಮರ ಕಡಿಯುವ ಹಕ್ಕಿನ ಬಗ್ಗೆಯೂ ಇದೇ ರೀತಿಯ ಅಪಪ್ರಚಾರ ಮಾಡುತ್ತಾ ಜಿಲ್ಲೆಯ ರಾಜಕೀಯ ಸುಸ್ಥಿತಿಯನ್ನು ಕದಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳ್ಳದಂತೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಲಾಗಿದೆ. ಅದನ್ನು ಮತ್ತೆ ಮುನ್ನಡೆಗೆ ತರುವ ಪ್ರಯತ್ನಕ್ಕೆ ಕಾಂಗ್ರೆಸ್ ತಂತ್ರ ಹೆಣೆದು ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಜೆಪಿ ಸರ್ಕಾರ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಬಜೆಟ್‌ನಲ್ಲಿ 187 ಕೋಟಿಯನ್ನ ಮೀಸಲಿರಿಸಿ, ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ಆದರೆ, ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ರೈಲ್ವೆ ಬ್ಯಾರಿಕೇಡ್‌ ಗಳನ್ನು ಅಳವಡಿಸಲು 120 ಕೋಟಿಯನ್ನು ಬಜೆಟ್ಟಿನಲ್ಲಿ ಮೀಸಲಿಟ್ಟರು ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಈ ಬಗ್ಗೆ ಮತ್ತೆ ಅನುಮಾನ ಶುರುವಾಗಿದೆ.

ವಾಲ್ಮೀಕಿ ನಿಗಮದ ಬಹು ಕೋಟಿ ಹಗರಣದಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಮೀಸಲಿಟ್ಟ ಕೋಟಿ ರು.ಕಳ್ಳತನ ವಾಗುವ ಸಮಯ ದೂರ ಉಳಿದಿಲ್ಲ. ಈ ಬಗ್ಗೆ ಶೀಘ್ರವಾಗಿ ಎಚ್ಚೆತುಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾಕುಶಲಪ್ಪ ಮಾತನಾಡಿ, 14 ತಿಂಗಳು ಪೂರೈಸಿದ ರಾಜ್ಯ ಸರ್ಕಾರದ ಆಡಳಿತದಲ್ಲಿ ಜನಪರತೆ ಕಾಣುತ್ತಿಲ್ಲ. ಪ್ರತಿಯೊಂದು ವಸ್ತುಗಳ ತೆರಿಗೆ ಹೆಚ್ಚಿಸಿ ಜನ ವಿರೋಧಿ ಆಡಳಿತವನ್ನು ನಡೆಸುತ್ತಿದೆ. ಅಭಿವೃದ್ಧಿ ಎಂಬುವುದು ಕಾಣದ ಮರೀಚಿಕೆಯಾಗಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬಳಲುತ್ತಿದೆ.

ಭಾರತೀಯ ಜನತಾ ಪಾರ್ಟಿ ವಿರಾಜಪೇಟೆ ಮಂಡಲ ಅಧ್ಯಕ್ಷ ಸವಿನ್ ಗಣಪತಿ ಮಾತನಾಡಿ, ಸದಸ್ಯತ್ವ ಅಭಿಯಾನದ ಗುರಿಯನ್ನು ಶೀಘ್ರವಾಗಿ ತಲುಪಬೇಕಾಗಿದೆ. ದೇಶದಲ್ಲಿ 23 ಕೋಟಿ ಸದಸ್ಯತ್ವ ಅಭಿಯಾನದ ಗುರಿಯನ್ನು ಹೊಂದಿದ್ದು, ಕಳೆದ ಬಾರಿ ಜಿಲ್ಲೆಯಲ್ಲಿ 58000 ಸದಸ್ಯತ್ವ ಮುನ್ನಡೆಸಲಾಗಿದೆ. ಈ ಬಾರಿ ಅದನ್ನು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೋಂದಾಯಿಸುವ ಮೂಲಕ ಗುರಿಯನ್ನು ತಲುಪಬೇಕಾಗಿದೆ ಎಂದು ಕರೆ ನೀಡಿದರು.

ಭಾರತೀಯ ಜನತಾ ಪಾರ್ಟಿ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮತ್ತು ಎಂ. ರವೀಂದ್ರ ಮಾತನಾಡಿದರು.

ತಾಲೂಕು ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್‌ಗಣಪತಿ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ಉಪಾಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಮಂಡಲ ಕಾರ್ಯದರ್ಶಿ ಮುದ್ದಿಯಡ ಮಂಜುಗಣಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ತಾಲೂಕು ಮಂಡಲ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಬಯ್ಯ ಸೇರಿದಂತೆ ಜಿಲ್ಲಾ, ತಾಲೂಕು ಸಮಿತಿ ಪದಾಧಿಕಾರಿ, ಬೂತ್ ಸಮಿತಿ ಅಧ್ಯಕ್ಷರು, ಕಾರ್ಯಕರ್ತರು ಹಾಜರಿದ್ದರು.

ರಾಜ್ಯ ಸರ್ಕಾರದ ಜನವಿರೋಧಿ ಆಡಳಿತದ ಬಗ್ಗೆ ಮತ್ತು ಅಭಿವೃದ್ಧಿ ಶೂನ್ಯ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಲು ಮಾಚಿಮಾಡ ರವೀಂದ್ರ ಅವರ ನೇತೃತ್ವದಲ್ಲಿ ತೀವ್ರ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಹೋರಾಟ ಪ್ರತಿ ಗ್ರಾಮ, ಗ್ರಾಮಗಳಿಂದ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಮಂಡಲ ಅಧ್ಯಕ್ಷ ಸುವಿನ್ ಗಣಪತಿ ತಿಳಿಸಿದ್ದಾರೆ.

ಭಾರತ ಮಾತೆ ಮತ್ತು ದೀನ್‌ದಯಾಳ್ ಉಪಾಧ್ಯಾಯ ಶ್ಯಾಮ್ ಸುಂದರ್ ಮುಖರ್ಜಿ ಅವರ ವಿರಾಜಪೇಟೆ ಬಿಜೆಪಿ ಮಂಡಲ ವತಿಯಿಂದ ಅತಿಥಿಗಳು ಚಾಲನೆ ನೀಡಿದರು.