ದಾಬಸ್‍ಪೇಟೆ: ಪೋಷಕರು ಮಕ್ಕಳು ಕಲಿಯುವ ಶಾಲಾ, ಕಾಲೇಜಿನೊಂದಿಗೆ ಸಂಪರ್ಕದಲ್ಲಿದ್ದು ಮಕ್ಕಳ ಶ್ರೇಯೋಭಿವೃದ್ದಿಯತ್ತ ಗಮನಹರಿಸಬೇಕು. ಮಕ್ಕಳ ಚಲನವಲನ ಗಮನಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಎಸ್‌ಡಿಎಂಸಿ ಉಪಾಧ್ಯಕ್ಷೆ ಪಂಕಜ ಹೇಳಿದರು

ದಾಬಸ್‍ಪೇಟೆ: ಪೋಷಕರು ಮಕ್ಕಳು ಕಲಿಯುವ ಶಾಲಾ, ಕಾಲೇಜಿನೊಂದಿಗೆ ಸಂಪರ್ಕದಲ್ಲಿದ್ದು ಮಕ್ಕಳ ಶ್ರೇಯೋಭಿವೃದ್ದಿಯತ್ತ ಗಮನಹರಿಸಬೇಕು. ಮಕ್ಕಳ ಚಲನವಲನ ಗಮನಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಎಸ್‌ಡಿಎಂಸಿ ಉಪಾಧ್ಯಕ್ಷೆ ಪಂಕಜ ಹೇಳಿದರು.

ವೀರರಾಘವನಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕ-ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ಕಲಿತ ವಿಚಾರಗಳು ಜೀವನ ಪೂರ್ತಿ ಉಳಿಯುತ್ತವೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಮುಖ್ಯಶಿಕ್ಷಕ ಹೊನ್ನಹನುಮಯ್ಯ ಮಾತನಾಡಿ, ಪ್ರಸಕ್ತ ವರ್ಷದಿಂದ ಶಾಲಾ ದಾಖಲಾತಿ ಹೆಚ್ಚಿಸಲು ಪೋಷಕರು ಸಹಕಾರ ನೀಡಬೇಕು. ಮುಂದಿನ ವರ್ಷದಿಂದ ಶಾಲೆಯಲ್ಲಿ ಪ್ರೌಢಶಾಲೆ ಪ್ರಾರಂಭಿಸುವ ಚಿಂತನೆ ಇದೆ. ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದೆ. ದೊಡ್ಡ ಶಾಲೆಗಳ ಜೊತೆ ಹತ್ತಿರದ ಚಿಕ್ಕ ಶಾಲೆಗಳನ್ನು ವಿಲೀನ ಮಾಡಿ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಇದೇ ಸಂದರ್ಭದಲ್ಲಿ ಪೋಷಕರಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಸದಸ್ಯರಾದ ಪೂರ್ಣಿಮಾ, ಚೈತ್ರರಮೇಶ್, ಪುಷ್ಪಲತಾ, ಹಸೀನಾ, ತಾರಾದೇವಿ ಲಕ್ಷ್ಮಣಕುಮಾರ್, ಭೈರೇಗೌಡ, ಸಿದ್ದಗಂಗಯ್ಯ, ಶಿಕ್ಷಕರುಗಳಾದ ಲೀಲಾವತಿ, ಸರೋಜಮ್ಮ, ರಾಜೇಶ್ವರಿ, ಶೀಲಾಕುಮಾರಿ, ಲಕ್ಷ್ಮಿಕಾಂತ್, ಚಂದ್ರಿಕಾ ಶ್ವೇತಾ, ಐಶ್ವರ್ಯ, ಜಯಂತ್ ಸೇರಿದಂತೆ 150ಕ್ಕೂ ಹೆಚ್ಚು ಪೋಷಕ ಬಂಧುಗಳು ಗ್ರಾಮಸ್ಥರು ಭಾಗವಹಿಸಿದ್ದರು.

ಪೋಟೋ 1 : ವೀರರಾಘವನಪಾಳ್ಯದ ಪಿಎಂಶ್ರೀ ಉನ್ನತಿಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕ-ಶಿಕ್ಷಕರ ಮಹಾಸಭೆಯನ್ನು ಎಸ್ ಡಿಎಂಸಿ ಉಪಾಧ್ಯಕ್ಷೆ ಪಂಕಜ ಉದ್ಘಾಟಿಸಿದರು.