ಗ್ರಾಮೀಣ ಬಡ ಕುಟುಂಬಗಳನ್ನು ಸ್ವಸಹಾಯ ಗುಂಪುಗಳಾಗಿ ಸಂಘಟಿಸಿ, ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವುದು
ಹರಪನಹಳ್ಳಿ: ಬಡ ಗ್ರಾಮೀಣ ಮಹಿಳೆಯರನ್ನು ಒಗ್ಗೂಡಿಸಿ, ಅವರಿಗೆ ಉದ್ಯೋಗ ಮತ್ತು ಆದಾಯದ ಮಾರ್ಗಗಳನ್ನು ಒದಗಿಸುವ ಮೂಲಕ ಬಡತನದಿಂದ ಹೊರಬರಲು ಸಹಾಯ ಮಾಡುವುದೇ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹರಪನಹಳ್ಳಿ ತಾಪಂನ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್ ವೈ.ಎಚ್. ತಿಳಿಸಿದ್ದಾರೆ.ತಾಲೂಕಿನ ತೌಡೂರು ಗ್ರಾಪಂ ವ್ಯಾಪ್ತಿಯ ವಿಶ್ವದೀಪ ಸಂಜೀವಿನಿ ಜಿಪಿಎಲ್‌ಎಫ್ ವ್ಯಾಪ್ತಿಯ ಯರಬಳ್ಳಿಯ ಹುಲಿಗೆಮ್ಮದೇವಿ ಸ್ವ ಸಹಾಯ ಸಂಘದ ಕರಕುಶಲ ವಸ್ತುಗಳ ತಯಾರಿಕೆ ಚಟುವಟಿಕೆಯ ಸ್ಥಳಕ್ಕೆ ಮೇಘಾಲಯ ರಾಜ್ಯದ ಸೌಹಾರ್ದ ಸಹಕಾರ ಸಂಘದ ಎಆರ್‌ಸಿಎಸ್ ಪದಾಧಿಕಾರಿಗಳು ಕ್ಷೇತ್ರ ಭೇಟಿಯಡಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಬಡ ಕುಟುಂಬಗಳನ್ನು ಸ್ವಸಹಾಯ ಗುಂಪುಗಳಾಗಿ ಸಂಘಟಿಸಿ, ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವುದು ಮತ್ತು ಅವರ ಜೀವನೋಪಾಯವನ್ನು ಸುಧಾರಿಸುವುದಾಗಿದೆ. ಕರ್ನಾಟಕದಲ್ಲಿ ಇದನ್ನು “ಸಂಜೀವಿನಿ” ಯೋಜನೆ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿಯ ಸಹಾಯಕ ಯೋಜನಾ ಅಧಿಕಾರಿ ಉಮೇಶ್ ಮಾತನಾಡಿ, ಮೇಘಾಲಯದ ಸೌಹಾರ್ದ ಸಹಕಾರ ಸಂಘದ ಪದಾಧಿಕಾರಿಗಳು, ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಅಧ್ಯಯನ ತಂಡವು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಜಿಪಿಎಲ್‌ಎಫ್ ಹಾಗೂ ಎಸ್‌ಎಚ್‌ಜಿಗಳಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡಿದೆ ಎಂದು ಹೇಳಿದರು.
ಮನರೇಗಾದ ತಾಪಂನ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್. ಮಾತನಾಡಿ ಈ ಸಂಸ್ಥೆಯು ಗ್ರಾಮೀಣ ಬಡ ಮತ್ತು ದುರ್ಬಲ ವರ್ಗದ ಮಹಿಳೆಯರಿಗೆ ಸ್ವಸಹಾಯ ಗುಂಪುಗಳು, ವಾರ್ಡ್, ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿ ಮಟ್ಟದ ಒಕ್ಕೂಟಗಳು, ವಿವಿಧ ಉತ್ಪಾದಕರ ಗುಂಪುಗಳಂತಹ ಸಮುದಾಯ ಆಧಾರಿತ ಸಂಸ್ಥೆಗಳನ್ನು ರಚಿಸಿಸುವ ಮೂಲಕ ಗಮನಾರ್ಹ ಸಾಧನೆಗಳನ್ನು ಮಾಡಿದೆ ಎಂದರು.ಕೂಲಹಳ್ಳಿಯ ಮಹಾಲಕ್ಷ್ಮಿ ಸಂಜೀವಿನಿ ಜಿಪಿಎಲ್‌ಎಫ್‌ಗೆ ಭೇಟಿ ನೀಡಿ ದಾಖಲಾತಿಗಳ ನಿರ್ವಹಣೆ ಬಗ್ಗೆ ವೀಕ್ಷಣೆ ಮಾಡಿದ ಬಳಿಕ ಕಡಬಗೇರಿಯ ವಿನಾಯಕ ಸಂಜೀವಿನಿ ಜಿಪಿಎಲ್‌ಎಫ್ ವ್ಯಾಪ್ತಿಯ ಹಿಕ್ಕಿಮಗೇರಿ ಗ್ರಾಮದ ಶಿವಶಕ್ತಿ ಸ್ವ ಸಹಾಯ ಗುಂಪಿನ ರೊಟ್ಟಿ ತಯಾರಿಕೆ, ತೌಡೂರು ಜಿಪಿಯ ವಿಶ್ವದೀಪ ಸಂಜೀವಿನಿ ಜಿಪಿಎಲ್‌ಎಫ್ ವ್ಯಾಪ್ತಿಯ ಯರಬಳ್ಳಿಯ ಹುಲಿಗೆಮ್ಮದೇವಿ ಸ್ವ ಸಹಾಯ ಸಂಘದ ಕರಕುಶಲ ವಸ್ತುಗಳ ತಯಾರಿಕೆ ಚಟುವಟಿಕೆಯ ಸ್ಥಳಕ್ಕೆ ಕ್ಷೇತ್ರ ಭೇಟಿ ಮಾಡಿ ಅಧ್ಯಯನ ಮಾಡಿದರು.
ಈ ಸಂದರ್ಭದಲ್ಲಿ ಕಡಬಗೆರೆ ಪಿಡಿಒ ಕೃಷ್ಣಪ್ಪ, ತೌಡೂರು ಪಿಡಿಒ ಶಿವಕುಮಾರ್ ನಾಯ್ಕ, ತಾಪಂನ ವ್ಯವಸ್ಥಾಪಕ ದಾದಾ ಖಲೀಲಸಾಬ್, ಟಿಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಟಿಎಇ ಷಣ್ಮುಖಪ್ಪ, ಎನ್‌ಆರ್‌ಎಲ್‌ಎಂನ ವಲಯ ಮೇಲ್ವಿಚಾರಕ ಮಂಜುನಾಥ್ ಹೆಬ್ಬಾಳ್, ಸದಸ್ಯರಾದ ಸೌಭಾಗ್ಯ ಚಂದ್ರಶೇಖರ್, ಜ್ಯೋತಿ ಸೇರಿದಂತೆ ಜಿಪಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ವಿವಿಧ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿ ಇದ್ದರು.ಕರಕುಶಲ ವಸ್ತುಗಳ ತಯಾರಿಕೆ ಚಟುವಟಿಕೆಯಡಿ ಹಮ್ಮಿಕೊಂಡಿದ್ದ ಕ್ಷೇತ್ರ ಭೇಟಿಯಲ್ಲಿ ಮೇಘಾಲಯದ ಸಹಕಾರ ಸಂಘದ ಪದಾಧಿಕಾರಿಗಳು ಜೊತೆ ಇಒ ಚಂದ್ರಶೇಖರ ಇತರರು