ಕರ್ನಾಟಕ ಸರ್ಕಾರವು ರೈತರಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಕೃಷಿ ಮತ್ತು ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸುತ್ತಿದ್ದು, ಪ್ರತಿ ಯೋಜನೆಯ ಸೌಲಭ್ಯ ಪಡೆಯಲು ಅನುಕೂಲಕರವಾಗಲಿದೆ.
ಡಂಬಳ: ಸರ್ಕಾರದ ಸೌಕರ್ಯಗಳನ್ನು ಪಡೆಯಲು ರೈತರು ಎಫ್ಐಡಿ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಗದಗ ಜಂಟಿ ಕೃಷಿ ನಿರ್ದೇಶಕರಾದ ಚೇತನಾ ಪಾಟೀಲ ತಿಳಿಸಿದರು.
ಸಮೀಪದ ಪೇಠಾಆಲೂರ ಗ್ರಾಮದಲ್ಲಿ ಗದಗ ಮತ್ತು ಮುಂಡರಗಿ ಕೃಷಿ ಇಲಾಖೆಯ ಆಶ್ರಯದಲ್ಲಿ ಫ್ರುಟ್ಸ್ ತಂತ್ರಾಂಶದಲ್ಲಿ ನೋಂದಣಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ಸರ್ಕಾರವು ರೈತರಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಕೃಷಿ ಮತ್ತು ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸುತ್ತಿದ್ದು, ಪ್ರತಿ ಯೋಜನೆಯ ಸೌಲಭ್ಯ ಪಡೆಯಲು ಅನುಕೂಲಕರವಾಗಲಿದೆ ಎಂದರು.ಪ್ರತಿ ಯೋಜನೆಯ ಸೌಲಭ್ಯ ಪಡೆಯಲು ವೈಯಕ್ತಿಕ ಭೂ ದಾಖಲಾತಿ ವಿವರಗಳನ್ನು ಒದಗಿಸಲಾಗುತ್ತಿರುತ್ತದೆ. ಈ ರೀತಿ ಸೌಲಭ್ಯ ಪಡೆಯಲು ಎಲ್ಲ ಇಲಾಖೆಗಳಿಗೂ ದಾಖಲಾತಿ ಒದಗಿಸುವುದನ್ನು ತಡೆಯಲು ಡಿಪಿಎಆರ್‌ಇ ಆಡಳಿತ ವತಿಯಿಂದ ಫ್ರುಟ್ಸ್ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಆಹಾರ ಧಾನ್ಯಗಳ ಖರೀದಿಯಲ್ಲಿ, ಅತಿವೃಷ್ಠಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿ ಪರಿಹಾರ ಪಡೆದುಕೊಳ್ಳಲು, ಬೆಳೆ ಸಮೀಕ್ಷೆ, ಬೆಳೆವಿಮೆ ನೋಂದಣಿ, ಬೆಳೆಸಾಲ ಹಾಗೂ ಇನ್ನಿತರ ಸೌಲಭ್ಯಗಳಿಗೆ ರೈತರಿಗೆ ಎಫ್ಐಡಿ ಫ್ರುಟ್ಸ್ ಐಡಿ ಬೇಕಾಗುತ್ತದೆ. ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಲು ರೈತರು ಮುಂದಾಗಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ನೋಂದಾಯಿಸಲು ನೀಡಬೇಕಾದ ದಾಖಲಾತಿಗಳು ಆಧಾರ ಕಾರ್ಡ್, ರೇಷನ್ ಕಾರ್ಡ್, ತಾವು ಹೊಂದಿರುವ ಎಲ್ಲ ಸರ್ವೇ ನಂಬರ್‌ಗಳ ಪಹಣಿ ಪತ್ರಿಕೆ(ಖಾತೆ ಉತಾರ), ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ರೈತರ ಆರ್‌ಡಿ ಸಂಖ್ಯೆ ಇರುವ ಜಾತಿ ದೃಢೀಕರಣ ಪತ್ರ, ರೈತರ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರೈತರ ಛಾಯಾಚಿತ್ರ ಮತ್ತು ರೈತರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ಫ್ರುಟ್ಸ್ ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಡಂಬಳ ಕೃಷಿ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ಆತ್ಮ ಯೋಜನೆಯ ಅಧಿಕಾರಿ ಗೌರಿಶಂಕರ ಸಜ್ಜನರ, ನಾಗರಾಜ ಬೋವಿ, ಮಾರುತಿ ರಾತೋಡ, ಕೃಷಿ ಸಖಿ, ಪೇಠಾಲೂರ ಗ್ರಾಮದ ರೈತರು ಇದ್ದರು.