ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನದಿಗಳಲ್ಲಿ ಪುಣ್ಯಸ್ನಾನ ಮಾಡಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸದಸ್ಯರಿಗೆ ಎಳ್ಳುಬೆಲ್ಲ ನೀಡಿ ಸಂಕ್ರಾಂತಿಯ ಶುಭಾಶಯ ಕೋರಿದರು.

ಹಾವೇರಿ: ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನದಿಗಳಲ್ಲಿ ಪುಣ್ಯಸ್ನಾನ ಮಾಡಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸದಸ್ಯರಿಗೆ ಎಳ್ಳುಬೆಲ್ಲ ನೀಡಿ ಸಂಕ್ರಾಂತಿಯ ಶುಭಾಶಯ ಕೋರಿದರು.ತಾಲೂಕಿನ ಗುತ್ತಲ ಬಳಿ ಚೌಡದಾನಪುರದ ತುಂಗಾ ತೀರದಲ್ಲಿ, ತುಂಗಭದ್ರಾ-ವರದಾ ನದಿ ಸಂಗಮ ಸ್ಥಳವಾದ ಗಳಗನಾಥ, ಕರ್ಜಗಿ ಬಳಿಯ ವರದಾ ನದಿ, ವರದಾ ಹಾಗೂ ಧರ್ಮಾ ನದಿ ಸಂಗಮದ ಕೂಡಲ, ಶಿಗ್ಗಾಂವಿ ತಾಲೂಕಿನ ದಕ್ಷಿಣಕಾಶಿ ಗಂಗಿಬಾವಿಯಲ್ಲಿ, ಕುಮಾರಪಟ್ಟಣ ಸಮೀಪದ ಕೋಡಿಯಾಲ ಗ್ರಾಮದ ತುಂಗಭದ್ರಾ ನದಿಯಲ್ಲಿ, ಹಿರೇಕೆರೂರು ತಾಲೂಕಿನ ಮದಗಮಾಸೂರು ಕೆರೆಯಲ್ಲಿ, ಹಿರೇಕೆರೂರಿನ ದುರ್ಗಾದೇವಿ ಕೆರೆಯಲ್ಲಿ ಸಾವಿರಾರು ಜನರು ಮಕರ ಸಂಕ್ರಮಣದ ಅಂಗವಾಗಿ ಪುಣ್ಯ ಸ್ನಾನ ಮಾಡಿದರು.ಶಾಲಾ-ಕಾಲೇಜುಗಳಿಗೆ ರಜೆಯೂ ಇದ್ದುದರಿಂದ ಮಕ್ಕಳು, ಮಹಿಳಯರು ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಪುಣ್ಯ ಸ್ಥಳಗಳ ನದಿಗಳಲ್ಲಿ ಎಳ್ಳು, ಬೆಲ್ಲ ಹಚ್ಚಿಕೊಂಡು ಸ್ಥಾನ ಮಾಡಿ ಉತ್ತರಾಯಣವನ್ನು ಸಂಭ್ರಮದಿಂದ ಸ್ವಾಗತಿಸಿದರು. ಬ್ಯಾಡಗಿ ತಾಲೂಕು ಕದರಮಂಡಲಗಿ, ಕಾಗಿನೆಲೆ, ದೇವರಗುಡ್ಡ, ಶಿಶುನಾಳ ಶರೀಫಗಿರಿ, ಹಾವನೂರ ಗ್ರಾಮದೇವತೆ, ಕಾರಡಗಿ ವೀರಭದ್ರೇಶ್ವರ ದೇವಸ್ಥಾನ, ಗಳಗನಾಥ, ಹಾವೇರಿಯ ಪುರಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣ, ನದಿ ತೀರ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಕುಟುಂಬ ಸಮೇತ ಸಹಭೋಜನ ಮಾಡಿ ಸಂಭ್ರಮಿಸಿದರು. ಕೂಡಲ, ಗಳಗನಾಥ, ಚೌಡದಾನಪುರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸೇರಿದ್ದ ನೂರಾರು ಜನರು ಪರಸ್ಪರ ಎಳ್ಳು-ಬೆಲ್ಲ ಹಂಚಿ, ಮಕರ ಸಂಕ್ರಮಣ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಾಮರಸ್ಯದಿಂದ ಬೆರೆತು ಬಾಳೋಣ ಎಂದು ಶುಭ ಕೋರಿದರು. ಮನೆಯಿಂದ ತಂದಿದ್ದ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಎಣ್ಣೆ ಬದನೆಕಾಯಿ, ಹೆಸರುಕಾಳು ಪಲ್ಯ, ಮಡಕೆಕಾಳು ಪಲ್ಯ, ಬೆಳೆಕಾಳು ಪಲ್ಯ, ಗುರೆಳ್ಳು ಚಟ್ನಿ, ಶೇಂಗಾ ಚಟ್ನಿ, ಶೇಂಗಾ ಹೋಳಿಗೆ, ಎಳ್ಳ ಹೋಳಿಗೆ, ಮಾದಲಿ, ಕಡುಬು, ಚಿತ್ರಾನ್ನಾ, ಮೊಸರನ್ನ ಸೇರಿದಂತೆ ವಿವಿಧ ಖಾದ್ಯಗಳೊಂದಿಗೆ ಕುಟುಂಬ ಸದಸ್ಯರು, ಸ್ನೇಹಿತರು ವಿಶೇಷ ಭೋಜನ ಸವಿದರು.ಮಣ್ಣೂರ ವರದಾ ನದಿ ತೀರದಲ್ಲಿ ಇಷ್ಠಲಿಂಗ ಪೂಜೆ..ಹಾವೇರಿ ತಾಲೂಕಿನ ಮಣ್ಣೂರು ಗ್ರಾಮದ ವರದಾ ನದಿ ತೀರದಲ್ಲಿರುವ ಶ್ರೀ ಗದಿಗೇಶ್ವರ ಹಾಗೂ ಶ್ರೀ ವಿರುಪಾಕ್ಷೇಶ್ವರ ತಪೋವನ ಮಠದಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಉತ್ತರಾಯಣ ಪುಣ್ಯಕಾಲದ ಪರ್ವದಲ್ಲಿ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ವರದಾ ನದಿಯಲ್ಲಿ ಪುಣ್ಯಸ್ಥಾನ ಮಾಡಿ ಇಷ್ಠಲಿಂಗ ಪೂಜೆ ನೆರವೇರಿಸಿದರು. ಮಣ್ಣೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನದಿಯಲ್ಲಿ ಪುಣ್ಯಸ್ನಾನ ಮಾಡಿ ತಾವು ಕಟ್ಟಿಕೊಂಡು ಬಂದಿದ್ದ ವಿವಿಧ ಖಾದ್ಯಗಳ ಜೊತೆಗೆ ಶ್ರೀಮಠದ ಪ್ರಸಾದವನ್ನು ಸವಿದು ಸಂಭ್ರಮದಿಂದ ಹಬ್ಬ ಆಚರಿಸಿದರು.