ಸಂಸ್ಕಾರ, ಸಾರ್ಥಕತೆ ಇಲ್ಲದ ಜೀವನ ವ್ಯರ್ಥ: ಕೋಡಿಮಠದ ಶಿವಾನಂದ ಶಿವಯೋಗಿ

| Published : Mar 13 2024, 02:05 AM IST

ಸಂಸ್ಕಾರ, ಸಾರ್ಥಕತೆ ಇಲ್ಲದ ಜೀವನ ವ್ಯರ್ಥ: ಕೋಡಿಮಠದ ಶಿವಾನಂದ ಶಿವಯೋಗಿ
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಲಿಂಗೈಕ್ಯ ಎಂ.ಎಸ್.ಪರಮಶಿವಪ್ಪ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಕೋಡಿಮಠ ಮಹಾಸಂಸ್ಥಾನದ ಮಠಾಧೀಶ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭಾಗವಹಿಸಿದರು.

ಎಂ. ಎಸ್. ಪರಮಶಿವಪ್ಪ ಸ್ಮರಣಾಂಜಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಆಲೂರು

ಮಾನವ ಜನ್ಮ ಸಂಸ್ಕಾರ ಮತ್ತು ಸಾರ್ಥಕತೆಯಿಂದ ಕೂಡಿರದಿದ್ದರೆ ಜೀವನ ವ್ಯರ್ಥವಾಗುತ್ತದೆ ಎಂದು ಕೋಡಿಮಠ ಮಹಾಸಂಸ್ಥಾನದ ಮಠಾಧೀಶ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ತಿಳಿಸಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಲಿಂಗೈಕ್ಯ ಎಂ.ಎಸ್.ಪರಮಶಿವಪ್ಪ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ೮೫ ಲಕ್ಷ ಜೀವಿಗಳಲ್ಲಿ ನೀರು, ಗಾಳಿ, ಭೂಮಿ ಮತ್ತು ಮಾನವ ಜೀವಿಗಳು ತಲಾ ೨೧ ಲಕ್ಷ ಇವೆ. ಇದರಲ್ಲಿ ಮಾನವ ಅತ್ಯಂತ ಕಡೆ ಜೀವಿಯಾಗಿದ್ದಾನೆ. ಮಾನವ ಹುಟ್ಟಿ ಬಂದ ಪ್ರಪಂಚಕ್ಕೆ ಪುನ: ತೆರಳಲೇಬೇಕು. ಹುಟ್ಟು ಮತ್ತು ಸಾವಿನ ಮಧ್ಯೆ ಅವನು ನಡೆಯುವ, ನುಡಿಯುವ ಆಚಾರ, ವಿಚಾರಗಳು ಅಹಂಕಾರ, ಮದ, ಮತ್ಸರ, ಮೋಸದಿಂದ ದೂರವಿದ್ದು ಸಂಸ್ಕಾರದಿಂದ ಕೂಡಿರಬೇಕು. ಮನುಷ್ಯನ ಆತ್ಮಕ್ಕೆ ಎಂದಿಗೂ ಸಾವಿಲ್ಲ ಎಂದು ಅಭಿಪ್ರಾಯಪಟ್ಟರು.

ಮುಸ್ಲಿಂ ಸಮುದಾಯದಲ್ಲಿ ಮೃತ ಶರೀರವನ್ನು ಮಸೀದಿಯಲ್ಲಿ ಇಟ್ಟು, ಮಾಡಿರುವ ತಪ್ಪನ್ನು ಕ್ಷಮಿಸಿ ನಿನ್ನ ಬಳಿ ಕರೆದುಕೊ ಎಂದು ಅಲ್ಲಾಹುಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರೈಸ್ತ ಧರ್ಮದಲ್ಲಿಯೂ ಅಂತೆಯೇ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂ ಧರ್ಮದಲ್ಲಿ ಮೃತ ಶರೀರವನ್ನು ಮೃತ್ಯುಂಜಯ ಎಂದು ಕರೆಯಲಾಗುತ್ತದೆ. ಲಿಂಗ ಸದಾ ಶುಚಿಯಾಗಿರುವುದರಿಂದ ಅದಕ್ಕೆ ಮೈಲಿಗೆ ಎಂಬುದಿಲ್ಲ. ಕೈಲಾಸದ್ವಾರದ ಮೂಲಕ ಪ್ರವೇಶ ಮಾಡಿ ಗುರುಗಳ ಪಾದಪೂಜೆಯೊಂದಿಗೆ ಸಂಸ್ಕಾರಯುತ ಅಂತ್ಯಕ್ರಿಯೆ ಮಾಡುತ್ತಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಅವಿಭಕ್ತ ಕುಟುಂಬಗಳಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಲು ಧೈರ್ಯ ಇರುತ್ತದೆ. ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಳ್ಳುವುದರಿಂದ ಕುಟುಂಬದಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದು ದುರ್ದೈವ. ಯುವಜನರು ಸಾಧ್ಯವಾದಷ್ಟು ದುಶ್ಚಟಗಳಿಗೆ ಬಲಿಯಾಗದೆ ಅವಿಭಕ್ತ ಕುಟುಂಬಗಳಲ್ಲಿ ಬದುಕಲು ಮುಂದಾಗಬೇಕು. ಸಿದ್ದೇಶ್ ನಾಗೇಂದ್ರರವರು ಸಮಾಜ ಸೇವೆಯಲ್ಲಿ ತೊಡಗಿರುವುದಕ್ಕೆ ಅವರ ಅವಿಭಕ್ತ ಕುಟುಂಬ ಸಾಕ್ಷಿಯಾಗಿದೆ ಎಂದರು.

ಕಿರೆಕೊಡ್ಲಿ, ಮಾದಾಳು, ಕೇದಿಗೆ, ಕಾರ್ಜುವಳ್ಳಿ, ಬಿಕ್ಕೋಡು ಕೋಡಿಮಠ, ಹಾರನಹಳ್ಳಿ ಮಠಾಧೀಶರು ಮತ್ತು ನಾಲ್ವರು ಮಾತೆಯರು ಭಾಗವಹಿಸಿ ಆಶೀರ್ವಚನ ನೀಡಿದರು.

ಎಂ.ಎಸ್.ನಟರಾಜ್, ಎ.ಜಿ. ಹೇಮಂತಕುಮಾರ್, ಬಿ. ರೇಣುಕಪ್ರಸಾದ್ ಉಪಸ್ಥಿತರಿದ್ದರು.

ಆಲೂರು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು.