ಸಾರಾಂಶ
ಶಿಕ್ಷಕರು ಪಾಠ ಮಾಡದೇ ನಮ್ಮ ಉತ್ತರ ಪತ್ರಿಕೆ ಮನೆಗೆ ಕಳುಹಿಸಿದ್ದಾರೆಂದು ಪೋಷಕರ ಆರೋಪ ಕನ್ನಡಪ್ರಭ ವಾರ್ತೆ ತುರುವೇಕೆರೆ
ಸಕಾಲಕ್ಕೆ ಶಾಲೆಗೆ ಬಾರದ ಶಿಕ್ಷಕರು ಶಾಲಾ ಮಕ್ಕಳಿಗೆ ಪಾಠ ಮಾಡದ ಪರಿಣಾಮ ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ತಾವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಸಿದ್ದಾರೆ. ಅಲ್ಲದೇ ಪರೀಕ್ಷಾ ಉತ್ತರ ಹಾಳೆಯನ್ನು ಮನೆಗೇ ಕಳಿಸಿ ಉತ್ತರ ಬರೆದುಕೊಂಡು ಬರಲು ಹೇಳಿದ ಶಿಕ್ಷಕರ ಬಗ್ಗೆ ಪೋಷಕರು ಶಾಲೆಯ ಬಳಿ ತರಾಟೆಗೆ ತೆಗೆದುಕೊಂಡ ಘಟನೆ ಸಮೀಪದ ತಂಡಗ ಗ್ರಾಮದಲ್ಲಿ ನಡೆದಿದೆ.ಸರ್ಕಾರಿ ಶಾಲೆಗಳೆಂದರೆ ಜನರು ಮೂಗು ಮುರಿಯುವ ಈ ಕಾಲದಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡದೆ ಮಕ್ಕಳನ್ನು ಕೂಪಕ್ಕೆ ದೂಡುತ್ತಿರುವ ಘಟನೆ ತಂಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದಿದೆ. ಇಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಕೇವಲ ೪೨ ಮಕ್ಕಳು ಇವೆ. ನಾಲ್ಕು ಮಂದಿ ಶಿಕ್ಷಕರು ಇದ್ದಾರೆ. ಆದರೂ ಸಹ ಇಲ್ಲಿಯ ಮಕ್ಕಳಿಗೆ ಸರಿಯಾಗಿ ವ್ಯಾಕರಣ ಬರುವುದಿಲ್ಲ. ಮಗ್ಗಿ ಬರುವುದಿಲ್ಲ. ಇಂಗ್ಲಿಷ್ ದೇವರೇ ಬಲ್ಲ. ಗಣಿತ ಬಗ್ಗೆ ಕೇಳುವ ಹಾಗೇ ಇಲ್ಲ. ಪಠ್ಯದಲ್ಲಿರುವ ಪಾಠಗಳನ್ನು ಸಂಪೂರ್ಣವಾಗಿ ಮಾಡೇ ಇಲ್ಲ. ಹಾಗಾಗಿ ಈ ಶಾಲೆಯ ಶಿಕ್ಷಕರು ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತರವನ್ನು ಅವರೇ ಬರೆಸಿ ಮುಂದಿನ ತರಗತಿಗೆ ಕಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಉತ್ತರ ಪತ್ರಿಕೆ ಮನೆಗೆ:ಸೋಮವಾರ ಶಾಲೆಯಲ್ಲಿ ನಾಲ್ಕನೇ ತರಗತಿಯ ಪರೀಕ್ಷೆ ಇತ್ತು. ಹಲವಾರು ಪಾಠಗಳು ಮಾಡದ ಹಿನ್ನೆಲೆಯಲ್ಲಿ ಮನೆಗೇ ಉತ್ತರ ಪತ್ರಿಕೆಯನ್ನು ಕಳಿಸಿ ಮನೆಯಲ್ಲಿ ಉತ್ತರ ಬರೆದುಕೊಂಡು ಬರಲು ಶಿಕ್ಷಕರು ಹೇಳಿದ್ದಾರೆ. ಮಕ್ಕಳು ಪ್ರಶ್ನಾವಳಿ ಹಾಳೆಯ ಜೊತೆ ಉತ್ತರ ಪತ್ರಿಕೆಯನ್ನೂ ಮನೆಗೆ ತಂದಾಗ ಪೋಷಕರು ಹೌಹಾರಿದ್ದಾರೆ. ಪೋಷಕರು ಮಕ್ಕಳನ್ನು ವಿಚಾರಣೆ ಮಾಡಿದಾಗಲೇ ಶಿಕ್ಷಕರ ಬಂಡವಾಳ ಬಯಲಾಗಿದೆ.
ಸೋಮವಾರ ಮಧ್ಯಾಹ್ನ ೭ನೇ ತರಗತಿಯ ಪರೀಕ್ಷೆ ಆರಂಭವಾಗಿತ್ತು. ಅಲ್ಲೂ ಸಹ ಯಥಾ ಸ್ಥಿತಿ. ಪಾಠ ಮಾಡದ ಕಾರಣ ಬೇರೆ ಶಾಲೆಯಿಂದ ಕೊಠಡಿಯ ಮೇಲ್ವಿಚಾರಕರಾಗಿ ಬಂದಿದ್ದ ಶಿಕ್ಷಕಿಯೋರ್ವರು ಮಕ್ಕಳಿಗೆ ತಾವೇ ಉತ್ತರ ಹೇಳಿಕೊಟ್ಟರು. ಇದನ್ನೂ ಸಹ ಮಕ್ಕಳೇ ತಮ್ಮ ಪೋಷಕರಿಗೆ ಹೇಳಿದ್ದಾರೆ.ಪೋಷಕರ ಪ್ರತಿಭಟನೆ -ಸುಮಾರು ೧೫೦ ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ನಮ್ಮೂರಲ್ಲಿ ಸರ್ಕಾರಿ ಶಾಲೆಯನ್ನು ಕಳೆದುಕೊಳ್ಳಬಾರದೆಂಬ ಕಾರಣಕ್ಕೆ ಊರಿನವರ ಮನವೊಲಿಸಿ ಈ ಶಾಲೆಗೆ ಮಕ್ಕಳನ್ನು ಸೇರಿಸಿದೆವು. ಈಗ ಈ ಶಿಕ್ಷಕರುಗಳು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದಾರೆಂದು ಆರೋಪಿಸಿ ಗ್ರಾಮಸ್ಥರು ಮತ್ತು ಮಕ್ಕಳ ಪೋಷಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಮಕ್ಕಳನ್ನು ಮುಂದಿಟ್ಟುಕೊಂಡೇ ಪೋಷಕರು ಮಕ್ಕಳ ಸಾಮರ್ಥ್ಯವನ್ನು ಶಿಕ್ಷಕರ ಮುಂದೆ ಅಳೆದರು. ನಿಮ್ಮ ಮಕ್ಕಳು ಮಾತ್ರ ವಿದ್ಯಾವಂತರಾಗಬೇಕು. ನಮ್ಮ ಮಕ್ಕಳು ಆಗಬಾರದಾ ? ಸರ್ಕಾರ ಲಕ್ಷಾಂತರ ರೂಪಾಯಿ ಸಂಬಳ ನೀಡಿದರೂ ಸಹ ನೀವು ಮಕ್ಕಳ ಬಗ್ಗೆ ಗಮನ ಕೊಡುವುದಿಲ್ಲವಲ್ಲಾ ನಿಮಗೆ ಆ ದೇವರು ಒಳ್ಳೆಯದು ಮಾಡೋಲ್ಲ. ಮಕ್ಕಳಿಗೆ ಮೋಸ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ಎಂದು ತರಾಟೆ ತೆಗೆದುಕೊಂಡರು. ಎಲ್ಲದಕ್ಕೂ ನಾಲ್ವರು ಶಿಕ್ಷಕರಿಂದ ನಿರುತ್ತರ ಬಂತು.ಟಿಸಿ ಕೊಡಿ - ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆಂಬ ವಿಷಯ ತಿಳಿದ ಬಿಇಓ ಸೋಮಶೇಖರ್ ರವರು ಕೂಡಲೇ ಕ್ಷೇತ್ರ ಸಂಪನ್ಮೂಲಾಧಿಕಾರಿಗಳಾದ ವೀಣಾ ರವರನ್ನು ಹಾಗು ಸಿಆರ್‌ಪಿ ಲೋಕೇಶ್ ಸೇರಿದಂತೆ ಇತರೆ ಸಿಬ್ಬಂದಿಯನ್ನು ಕಳಿಸಿದರು. ಈ ಸಂಧರ್ಭದಲ್ಲಿ ಪೋಷಕರು ಮುಖ್ಯ ಶಿಕ್ಷಕ, ಸಹ ಶಿಕ್ಷಕರ ಆರೋಪಗಳ ಸುರಿಮಳೆಗೈದರು. ಇಲ್ಲಿಂದ ನಾಲ್ಕು ಶಿಕ್ಷಕರನ್ನು ಎತ್ತಂಗಡಿ ಮಾಡಿ ಬೇರೆ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ನಮ್ಮ ಮಕ್ಕಳ ಟಿಸಿ ಕೊಟ್ಟುಬಿಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.
ಪೋಷಕರ ಅಹವಾಲು ಆಲಿಸಿದ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿ ಗಮನಿಸಿದ ಬಿಆರ್‌ಸಿ ವೀಣಾ ರವರು ನಾಲ್ವರು ಶಿಕ್ಷಕರನ್ನು ಪೋಷಕರ ಎದುರೇ ತರಾಟೆಗೆ ತೆಗದುಕೊಂಡರು. ಉತ್ತರ ಪತ್ರಿಕೆಯನ್ನು ಮನೆಗೆ ಕಳಿಸಿದ ಬಗ್ಗೆ ಮತ್ತು ಉತ್ತರವನ್ನು ತರಗತಿಯಲ್ಲಿ ಬರೆಸಿದ್ದ ಬಗ್ಗೆ ಮಕ್ಕಳಿಂದ ಮಾಹಿತಿ ಸಂಗ್ರಹಿಸಿದರು. ಪೋಷಕರು ಮತ್ತು ಸಾರ್ವಜನಿಕರು ನೀಡಿದ ದೂರಿನನ್ವಯ ನಾಲ್ಕು ಶಿಕ್ಷಕರನ್ನೂ ಬೇರೆಗೆ ವರ್ಗಾಯಿಸುವಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಪೋಷಕರಿಗೆ ಬಿಆರ್‌ಸಿ ವೀಣಾ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗುಡಿಗೌಡರಾದ ಸತೀಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ್, ಸದಸ್ಯರಾದ ಚಂದ್ರಶೇಖರ್, ಬಸವರಾಜು, ಓಂಕಾರಾಚಾರ್, ಜಬಿಬುಲ್ಲಾ, ಸಂತೋಷ್, ಸಚಿನ್, ಗುರುಮೂರ್ತಿ, ಶಿವಕುಮಾರ್, ಯೋಗಾನಂದಮೂರ್ತಿ, ರಂಗಸ್ವಾಮಿ, ಮಂಗಳಗೌರಿ, ಆಶಾ ಸೇರಿದಂತೆ ಹಲವರು ಇದ್ದರು.