ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಸರ್ಕಾರಿ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಆ್ಯಂಬುಲೇನ್ಸ್ ವಾಹನದ ಚಾಲಕನ ಕರ್ತವ್ಯ ನಿರ್ಲಕ್ಷ್ಯದ ಕಾರಣ ಬುಧವಾರ ಮಧ್ಯಾಹ್ನ ಆಸ್ಪತ್ರೆಯೆಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾನೆ ಎಂದು ಆರೋಪಿಸಿ, ಗ್ರಾಮಸ್ಥರು ಆಕ್ರೋಶಗೊಂಡು ಆಸ್ಪತ್ರೆ ಅವರಣದಲ್ಲಿ ನಿಲ್ಲಿಸಲಾಗಿದ್ದ 108 ಆ್ಯಂಬುಲೆನ್ಸ್‌ ಮೇಲೆ ಕಲ್ಲು ತೂರಿದ್ದರಿಂದ ವಾಹನದ ಗಾಜಿಗೆ ಹಾನಿಯಾಗಿದೆ. ಅಲ್ಲದೆ, ಆಸ್ಪತ್ರೆ ಕಿಟಕಿ ಗಾಜುಗಳೂ ಒಡೆದುಹೋದ ಘಟನೆ ಜರುಗಿದೆ.

- ಚಾಲಕನ ಕರ್ತವ್ಯ ನಿರ್ಲಕ್ಷ್ಯದಿಂದಲೇ ಸೈಯದ್‌ ಸಾವು ಎಂದು ಆರೋಪಿಸಿ ಗ್ರಾಮಸ್ಥರ ಪ್ರತಿಭಟನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸಾಸ್ವೇಹಳ್ಳಿ ಸರ್ಕಾರಿ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಆ್ಯಂಬುಲೇನ್ಸ್ ವಾಹನದ ಚಾಲಕನ ಕರ್ತವ್ಯ ನಿರ್ಲಕ್ಷ್ಯದ ಕಾರಣ ಬುಧವಾರ ಮಧ್ಯಾಹ್ನ ಆಸ್ಪತ್ರೆಯೆಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾನೆ ಎಂದು ಆರೋಪಿಸಿ, ಗ್ರಾಮಸ್ಥರು ಆಕ್ರೋಶಗೊಂಡು ಆಸ್ಪತ್ರೆ ಅವರಣದಲ್ಲಿ ನಿಲ್ಲಿಸಲಾಗಿದ್ದ 108 ಆ್ಯಂಬುಲೆನ್ಸ್‌ ಮೇಲೆ ಕಲ್ಲು ತೂರಿದ್ದರಿಂದ ವಾಹನದ ಗಾಜಿಗೆ ಹಾನಿಯಾಗಿದೆ. ಅಲ್ಲದೆ, ಆಸ್ಪತ್ರೆ ಕಿಟಕಿ ಗಾಜುಗಳೂ ಒಡೆದುಹೋದ ಘಟನೆ ಜರುಗಿದೆ.

ಸಾಸ್ವೇಹಳ್ಳಿ ಹೋಬಳಿಯ ಮಲ್ಲಿಕಟ್ಟೆ ಗ್ರಾಮದ ಸೈಯದ್ ಅಮೀರ್ ಜಾನ್ ಸಾಬ್ (80) ಮೃತ ದುರ್ದೈವಿ. ಸಂಬಂಧಿಕರು ಬುಧವಾರ ಮಧ್ಯಾಹ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದರು. ಆಗ ವೈದ್ಯ ಡಾ.ಮಂಜುನಾಥ್ ವ್ಯಕ್ತಿಯ ದೇಹದ ಪರಿಸ್ಥಿತಿಗಳನ್ನು ಪರೀಕ್ಷಿಸಿ ಸಂಬಂಧಿಕರಿಗೆ ವಿವರಿಸುತ್ತಿದ್ದರು. ಇದೇ ಸಮಯಕ್ಕೆ ಸಂಬಂಧಿಗಳು, 108 ವಾಹನಕ್ಕಾಗಿ ಕರೆ ಮಾಡಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಮುಂದಾದರು. ಆಗ ಆ್ಯಂಬುಲೆನ್ಸ್ ಚಾಲಕ ವಾಹನದಲ್ಲಿ ಇರದೇ ಬೇರೆಡೆ ಹೋಗಿದ್ದರಿಂದ ವಾಹನ ಸ್ಥಳಕ್ಕೆ ಬರುವುದು ತಡವಾಗಿತ್ತು. ಅಷ್ಟರಲ್ಲಾಗಲೇ ವೃದ್ಧ ಅಮೀರ್‌ ಜಾನ್‌ ಸಾಬ್‌ ಆಸ್ಪತ್ರೆಯಲ್ಲಿಯೇ ಮರಣ ಹೊಂದಿದ್ದರು.

ಇದರಿಂದ ಕುಪಿತರಾದ ಸಂಬಂಧಿಗಳು, ಗ್ರಾಮಸ್ಥರು ಆ್ಯಂಬುಲೆನ್ಸ್‌ ವಾಹನದ ಮೇಲೆ ಕಲ್ಲು ತೂರಾಡಿ ಆಸ್ಪತ್ರೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಹಾಗೂ ಹೊನ್ನಾಳಿ ಪೊಲೀಸರು ಭೇಟಿ ಕೊಟ್ಟು ಘಟನೆ ಕುರಿತಂತೆ ಮಾಹಿತಿ ಪಡೆದರು.

ಆ್ಯಂಬುಲೆನ್ಸ್‌ ಚಾಲಕನ ಕರ್ತವ್ಯಲೋಪ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ವೈದ್ಯರು ಭರವಸೆ ನೀಡಿದರು. ಅನಂತರ ಪ್ರತಿಭಟನಾನಿರತರು ಶಾಂತರಾಗಿ, ಮೃತದೇಹವನ್ನು ಆಸ್ಪತ್ರೆಯಿಂದ ಸಾಗಿಸಿದರು.

- - -

(ಕೋಟ್‌) ನಾನು ಆಸ್ಪತ್ರೆ ಆವರಣದ ಹೊರಗಡೆ ಇದ್ದೆ. ಆ್ಯಂಬುಲೆನ್ಸ್ ಬಳಿ ಬರುತ್ತಿದ್ದೇನೆ ಎಂದು ತಿಳಿಸಿ ಬರುವಷ್ಟರಲ್ಲಿ ಆ್ಯಂಬುಲೆನ್ಸ್ ಗಾಜು ಹೊಡೆಯಲಾಗಿತ್ತು.

- ರಂಗನಾಥ್, 108 ಆ್ಯಂಬುಲೆನ್ಸ್‌ ಚಾಲಕ.

ಆ್ಯಂಬುಲೆನ್ಸ್ ಚಾಲಕರ ನಿರ್ಲಕ್ಷ್ಯದ ಕುರಿತು ನಿರಂತರವಾಗಿ ದೂರುಗಳು ಕೇಳಿಬರುತ್ತಿವೆ. ಸದರಿ ವಾಹನದ ಚಾಲಕರ ಬದಲಾವಣೆ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ.

- ಡಾ.ಗಿರೀಶ್, ತಾಲೂಕು ವೈದ್ಯಾಧಿಕಾರಿ, ಹೊನ್ನಾಳಿ.

- - -

-24ಎಚ್.ಎಲ್.ಐ1:

ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಪ್ರಾಥಮಿಕ ಆರೋಗ್ಯದಲ್ಲಿ ಬುಧವಾರ ಆ್ಯಂಬುಲೆನ್ಸ್ ಚಾಲಕನ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

-24ಎಚ್.ಎಲ್.ಐ1ಎ: ಕಲ್ಲು ತೂರಿದ್ದರಿಂದ ಆಸ್ಪತ್ರೆಯ ಆ್ಯಂಬುಲೆನ್ಸ್‌ನ ಗಾಜಿಗೆ ಹಾನಿಯಾಯಿತು.