ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ಸತೀಶ್‌ ರೆಡ್ಡಿ ಶ್ರೀರಾಮುಲುನನ್ನು ಮುಗಿಸಿ ಎಂದು ತೆಲುಗಿನಲ್ಲಿ ಹೇಳುವ ವೀಡಿಯೋ ಸಿಕ್ಕಿದೆ.

ಬಳ್ಳಾರಿ: ಬ್ಯಾನರ್ ಗಲಾಟೆ ವೇಳೆ ಶ್ರೀರಾಮುಲು ಅವರನ್ನು ಹತ್ಯೆಗೈಯುವ ಸಂಚು ರೂಪಿಸಲಾಗಿತ್ತು. ಆದರೆ, ಶ್ರೀರಾಮುಲು ಮೇಲೆ ದಾಳಿ ಮಾಡುವ ಧೈರ್ಯ ಯಾರೂ ಮಾಡಿಲ್ಲ. ಹೀಗಾಗಿ ಶ್ರೀರಾಮುಲು ಪಾರಾಗಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ಸತೀಶ್‌ ರೆಡ್ಡಿ ಶ್ರೀರಾಮುಲುನನ್ನು ಮುಗಿಸಿ ಎಂದು ತೆಲುಗಿನಲ್ಲಿ ಹೇಳುವ ವೀಡಿಯೋ ಸಿಕ್ಕಿದೆ. ಈ ವೀಡಿಯೋದಲ್ಲಿ ತೆಲುಗಿನಲ್ಲಿ ಮಾತನಾಡುವ ಸತೀಶ್ ರೆಡ್ಡಿ, ಶ್ರೀರಾಮುಲು ಮುಗಿಸಿ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ. ತೆಲುಗಿನಲ್ಲಿ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಂತಹ ಅವಾಚ್ಯ ಶಬ್ದಗಳನ್ನು ಹೇಳಲು ನನ್ನ ಕೈಲೂ ಸಾಧ್ಯವಾಗುವುದಿಲ್ಲ. ಅಷ್ಟರಮಟ್ಟಿಗೆ ಅವಾಚ್ಯವಾಗಿದೆ ಎಂದು ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಗಲಭೆ ವೇಳೆಯಲ್ಲಿ ದೊರೆತ ವೀಡಿಯೋ ತೋರಿಸಿದರಾದರೂ ಶ್ರೀರಾಮುಲು ಮೇಲೆ ದಾಳಿ ಮಾಡುವಂತೆ ಸತೀಶ್ ರೆಡ್ಡಿ ಹೇಳುವ ಮಾತುಗಳು ಸ್ಪಷ್ಟವಾಗಿ ಕೇಳಿ ಬರಲಿಲ್ಲ.

ಸಿಐಡಿ ಕಣ್ಣೊರೆಸುವ ತಂತ್ರ:

ಸಿಐಡಿ ಹಾಗೂ ಪೊಲೀಸ್ ಬೇರೆ ಬೇರೆಯಲ್ಲ. ಹೆಸರಷ್ಟೇ ಬೇರೆ. ಹೀಗಾಗಿ ಸಿಐಡಿಯಿಂದ ಸತ್ಯ ಬಹಿರಂಗವಾಗುತ್ತದೆ ಎಂಬ ವಿಶ್ವಾಸವಿಲ್ಲ. ಒಂದು ವೇಳೆ ಪೊಲೀಸರು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದರೆ ಇಷ್ಟೊತ್ತಿಗೆ ಬ್ಯಾನರ್ ಗಲಭೆ ಪ್ರಕರಣದಲ್ಲಿ ಶಾಸಕ ನಾರಾ ಭರತ್ ರೆಡ್ಡಿಯನ್ನು ಬಂಧಿಸಬೇಕಿತ್ತು. ಆದರೆ, ಘಟನೆ ನಡೆದು 10 ದಿನಗಳು ಕಳೆದರೂ ಶಾಸಕನ ಬಂಧನವಾಗಿಲ್ಲ. ಸಿಐಡಿ ತನಿಖೆ ಹೆಸರಿನಲ್ಲಿ ಟೈಮ್ ಪಾಸ್ ಮಾಡಲಾಗುತ್ತಿದೆ. ಗಲಭೆಯ ವಿಚಾರವನ್ನು ತಣ್ಣಗಾಗಿಸಲು ಸರ್ಕಾರದ ತಂತ್ರವಿದು ಎಂದು ಆರೋಪಿಸಿದ ಜನಾರ್ದನ ರೆಡ್ಡಿ, ಬ್ಯಾನರ್ ಗಲಭೆಯ ಸತ್ಯಾಸತ್ಯತೆ ಹೊರಬರಲು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.

ಬಳ್ಳಾರಿ ರಾಜ್ಯದಿಂದ ಜನ:

ಬ್ಯಾನರ್ ಗಲಭೆ ಪ್ರಕರಣ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಜ. 17ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ನಾಡಿನ ಎಲ್ಲ ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಲಿದ್ದಾರೆ. ಹೋರಾಟದ ರೂಪುರೇಷೆಗಳನ್ನು ಪಕ್ಷದ ರಾಜ್ಯ ನಾಯಕರು ನಿರ್ಧರಿಸಲಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಪಕ್ಷದ ಹಿರಿಯ ಮುಖಂಡರು ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳುವರು. ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಪತ್ರ ನೀಡಿದ್ದಾರೆ ಎಂದು ಹೇಳಿದರು.

ಬ್ಯಾನರ್ ಗಲಭೆ ಪ್ರಕರಣದಲ್ಲಿ ನಾನು ನಿರೀಕ್ಷಣಾ ಜಾಮೀನು ಪಡೆದಿಲ್ಲ. ಎಂಥೆಂಥ ಪ್ರಕರಣಗಳಿಗೂ ನಾನು ನಿರೀಕ್ಷಣಾ ಜಾಮೀನು ಪಡೆದವನಲ್ಲ. ನಮ್ಮ ಮನೆ ಬಳಿಯೇ ಅವರೇ ಬಂದು ಗಲಾಟೆ ಮಾಡಿದ್ದು, ನಮ್ಮ ಮೇಲೆಯೇ ದಾಳಿ ನಡೆಸಿದ್ದಾರೆ. ಹೀಗಿರುವಾಗ ನಾನೇಕೆ ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಲಿ? ಎಂದು ಪ್ರಶ್ನಿಸಿದರು.

ಎಎಸ್ಪಿ ರವಿಕುಮಾರ್, ಡಿವೈಎಸ್ಪಿ ನಂದಾರೆಡ್ಡಿ ವಿರುದ್ಧ ನೀಡಿದ್ದ ದೂರು ದಾಖಲಾಗಿಲ್ಲ. ಹೀಗಾಗಿ ನ್ಯಾಯಾಲಯ ಮೊರೆ ಹೋಗುತ್ತಿದ್ದೇನೆ. ಇನ್ನೆರಡು ದಿನಗಳಲ್ಲಿ ರಿಟ್‌ ಪಿಟಿಷನ್ ಹಾಕುತ್ತೇನೆ ಎಂದು ತಿಳಿಸಿದರು. ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಇದ್ದರು.