ಹರಿಹರ ನಗರಸಭೆಯನ್ನು ಮಹಾನಗರ ಪಾಲಿಕೆ ದಾವಣಗೆರೆಗೆ ಸೇರಿಸಿ ಬೃಹತ್ ನಗರ ಪಾಲಿಕೆಯನ್ನಾಗಿ ಮಾಡಿಸಬೇಕು ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿಗೆ ಜಿಲ್ಲಾ ಬಹುಜನ ಸಮಾಜ ಪಾರ್ಟಿ ಮನವಿ ಮಾಡಿದೆ.
- ಶಾಸಕ, ಸಚಿವ, ಡಿಸಿಗೆ ಬಿಎಸ್‌ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನವಿ
- - -ಕನ್ನಡಪ್ರಭ ವಾರ್ತೆ ಹರಿಹರ
ಹರಿಹರ ನಗರಸಭೆಯನ್ನು ಮಹಾನಗರ ಪಾಲಿಕೆ ದಾವಣಗೆರೆಗೆ ಸೇರಿಸಿ ಬೃಹತ್ ನಗರ ಪಾಲಿಕೆಯನ್ನಾಗಿ ಮಾಡಿಸಬೇಕು ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿಗೆ ಜಿಲ್ಲಾ ಬಹುಜನ ಸಮಾಜ ಪಾರ್ಟಿ ಮನವಿ ಮಾಡಿದೆ.ಹರಿಹರ ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ, ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯೇ ಇದಕ್ಕೆ ಕಾರಣ. ನಗರ ಸ್ವಚ್ಛತೆ ಹಾಗೂ ನಗರ ಅಭಿವೃದ್ಧಿ ಹಿಂದುಳಿದಿದೆ. ಒಂದು ಬಾರಿ ವಿಧಾನಸಭೆ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿ ಮರು ಚುನಾವಣೆಯಲ್ಲಿ ಆಯ್ಕೆಯಾಗದೇ ಇರುವುದು. ಹರಿಹರ ಕ್ಷೇತ್ರದ ವಿಧಾನಸಭಾ ಸದಸ್ಯರು ಇರುವಾಗ ಸರ್ಕಾರ ಬೇರೆ ಪಕ್ಷದ್ದಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಇರುವುದರಿಂದ ಹರಿಹರ ನಗರಸಭೆಯನ್ನು ಮಹಾನಗರ ಪಾಲಿಕೆ ದಾವಣಗೆರೆಗೆ ಸೇರಿಸಿ ಬೃಹತ್ ನಗರ ಪಾಲಿಕೆಯನ್ನಾಗಿ ಮಾಡಿಸಬೇಕು. ಇದರಿಂದ ನಗರ ಅಭಿವೃದ್ಧಿ ಹೊಂದುತ್ತದೆ. ಆಡಳಿತ ವ್ಯವಸ್ಥೆ ಚುರುಕಾಗುತ್ತದೆ. ಅನುದಾನ ಅತಿ ಹೆಚ್ಚಾಗಿ ಬರುತ್ತದೆ. ನಗರವೂ ಸುಂದರವಾಗುತ್ತದೆ ಎಂದಿದ್ದಾರೆ.ಹುಬ್ಬಳ್ಳಿಯಿಂದ 40 ಕಿಮೀ ದೂರದಲ್ಲಿ ಧಾರವಾಡ ನಗರ ಇದ್ದರೂ ಬೃಹತ್ ನಗರ ಪಾಲಿಕೆ ಹುಬ್ಬಳ್ಳಿಯೊಂದಿಗೆ ಸೇರಿದೆ. ಅದೇ ರೀತಿ ದಾವಣಗೆರೆಯಿಂದ ಕೇವಲ 10 ಕಿಮೀ ದೂರವಿರುವ ಹರಿಹರ ನಗರವನ್ನು ದಾವಣಗೆರೆ ಮಹಾನಗರ ಪಾಲಿಕೆಗೆ ಸೇರ್ಪಡೆಯಾಗಬೇಕು. ಹೀಗಾದಲ್ಲಿ ಬೃಹತ್ ದಾವಣಗೆರೆ ಮಹಾನಗರ ಪಾಲಿಕೆ ಆಗುತ್ತದೆ. ಹರಿಹರ ನಗರದ ಅಭಿವೃದ್ಧಿಯ ಕಾರಣಕ್ಕಾಗಿ ದಾವಣಗೆರೆ ಪಾಲಿಕೆಗೆ ಸೇರ್ಪಡೆಗೊಳ್ಳಿಸುವ ಮೂಲಕ ಹರಿಹರ- ದಾವಣಗೆರೆ ನಗರವನ್ನಾಗಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನವಿ ಮಾಡಿದ್ದಾರೆ.
- - -