ದಾಬಸ್‍ಪೇಟೆ: ಹಾಲು ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ಪ್ರೋತ್ಸಾಹ ಧನ ಹಾಗೂ ಹಾಲಿನ ಖರೀದಿ ದರ ಹೆಚ್ಚಿಸಬೇಕೆಂದು ಆಗ್ರಹಿಸಿ ನೆಲಮಂಗಲ ತಾಲೂಕು ಹಾಲು ಉತ್ಪಾದಕರು ಬಮೂಲ್ ಕಚೇರಿಯಿಂದ ನೆಲಮಂಗಲ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಸಿದರು.

ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ಮಾತನಾಡಿ, ಹಾಲು ಉತ್ಪಾದಕರಿಗೆ ಸಿಗುತ್ತಿರುವ ಆದಾಯ ಮತ್ತು ಉತ್ಪಾದನಾ ವೆಚ್ಚಗಳ ನಡುವೆ ದೊಡ್ಡ ಅಂತರ ಉಂಟಾಗಿದೆ. ಪಶು ಆಹಾರ, ಮೇವು, ಔಷಧಿ, ಕಾರ್ಮಿಕ ವೆಚ್ಚ ಸೇರಿದಂತೆ ಎಲ್ಲಾ ಖರ್ಚುಗಳು ಗಣನೀಯವಾಗಿ ಹೆಚ್ಚಳವಾಗಿವೆ. ಇದು ಹಾಲು ಉತ್ಪಾದನೆ ರೈತರಿಗೆ ಹೊರೆಯಾಗುತ್ತಿದೆ ಎಂದು ಹೇಳಿದರು.

ಹಾಲು ಉತ್ಪಾದಕರು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಹೈನುಗಾರಿಕೆ ಸಾವಿರಾರು ಕುಟುಂಬಗಳ ಜೀವನಾಧಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಉತ್ಪಾದನಾ ವೆಚ್ಚಗಳು ಏರಿಕೆಯಾಗಿದ್ದರೂ ಹಾಲಿನ ದರದಲ್ಲಿ ತಕ್ಕಮಟ್ಟಿನ ಹೆಚ್ಚಳವಾಗಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಲೀಟರ್‌ಗೆ 5ರಿಂದ 10 ರು.ಗಳಿಗೆ ಹೆಚ್ಚಿಸುವುದರ ಜೊತೆಗೆ ಹಾಲಿನ ಖರೀದಿ ದರವನ್ನು ಲೀಟರ್‌ಗೆ 10 ರು. ಹೆಚ್ಚಳ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೋಂಪುರ ವಿಎಸ್‍ಎಸ್‍ಎನ್ ಸಂಘದ ಅಧ್ಯಕ್ಷ ಮೋಹನ್ ಕುಮಾರ್, ಅಂದಾನಯ್ಯ, ಜೆಡಿಎಸ್ ಮುಖಂಡ ಮೋಹನ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರಾಹುಲ್ ಗೌಡ್ರು, ಮಾಜಿ ಉಪಾಧ್ಯಕ್ಷ ಬೀರಗೊಂಡನಹಳ್ಳಿ ಬೈರೇಶ್, ತಾಪಂ ಮಾಜಿ ಅಧ್ಯಕ್ಷ ಪುಟ್ಟಗಂಗಯ್ಯ, ಮುಖಂಡರಾದ ಮಂಜುನಾಥ್, ಗಾಂಧಿಗ್ರಾಮ ಚಲುವರಾಜು, ಬೂದಿಹಾಳ್ ಮಂಜುನಾಥ್, ಭಟ್ಟರಹಳ್ಳಿ ಮಂಜುನಾಥ್, ಕಳಲುಘಟ್ಟ ಬಾಬು, ಜಗದೀಶ್ ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ರೈತ ಮುಖಂಡರು, ಮಹಿಳಾ ಹಾಲು ಉತ್ಪಾದಕರು ಭಾಗವಹಿಸಿದ್ದರು.

ಪೋಟೋ 4 :


ನೆಲಮಂಗಲ ತಾಲೂಕು ಹಾಲು ಉತ್ಪಾದಕರು ಹಾಗೂ ರೈತರು ಹಾಲಿನ ಪ್ರೋತ್ಸಾಹ ಬೆಲೆ ಹೆಚ್ಚಿಸಬೇಕೆಂದು ಆಗ್ರಹಿಸಿ ನೆಲಮಂಗಲದ ಬಮೂಲ್ ಕಚೇರಿಯಿಂದ ನೆಲಮಂಗಲ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಸಿದರು.