ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶವಿಲ್ಲದ ಕಾಲಘಟ್ಟದಲ್ಲಿ ಸಾಮಾಜಿಕ ಕಂದಾಚಾರಗಳನ್ನು ಮೆಟ್ಟಿನಿಂತು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿ ಬಾಯಿ ಫುಲೆ ಅವರು ದೇಶದ ಹೆಣ್ಣುಮಕ್ಕಳ ಪಾಲಿನ ಅಕ್ಷರದವ್ವ ಆಗಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ಹಾಗೂ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಶುಕ್ರವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಬಾಫುಲೆ ಅವರ 194ನೇ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು
ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು, ಸಾಮಾಜಿಕ ಸಮಾನತೆಯ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾವಿತ್ರಿ ಬಾಯಿ ಫುಲೆ ಅವರು ಭಾರತೀಯ ಸಮಾಜಕ್ಕೆ ನವಚೈತನ್ಯ ತುಂಬಿದರು ಎಂದರು.ಈ ಕ್ರಾಂತಿಕಾರಿ ಕಾರ್ಯಕ್ಕೆ ಪತಿ ಜ್ಯೋತಿಬಾ ಫುಲೆ ನೆರವಾಗಿದ್ದರು. ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎನ್ನುತ್ತೇವೆ, ಸಾವಿತ್ರಿ ಬಾಯಿಯ ಯಶಸ್ಸಿನ ಹಿಂದೆ ಅವರ ಪತಿ ಇದ್ದರು. ಸ್ತ್ರೀ ಶಿಕ್ಷಣಕ್ಕಾಗಿ ಸಾವಿತ್ರಿ ಬಾಯಿ ಶಾಲೆ ತೆರೆದಾಗ ತೀವ್ರ ವಿರೋಧ ವ್ಯಕ್ತವಾಯಿತು. ಇವರ ಪ್ರಗತಿಪರ ಕೆಲಸಗಳನ್ನು ಹತ್ತಿಕ್ಕಲು ಎಷ್ಟೇ ಅಡೆತಡೆಗಳು ಎದುರಾದರೂ ಸಾವಿತ್ರಿ ಬಾಯಿ ಎದೆಗುಂದಲಿಲ್ಲ, ಅದನ್ನೆಲ್ಲಾ ಬಲವಾಗಿ ಪ್ರತಿಭಟಿಸಿದರು ಎಂದು ಶಾಸಕ ಸುರೇಶ್‌ಗೌಡರು ಹೇಳಿದರು.
ಇವರು ಕೇವಲ ಒಂದು ಶಾಲೆಯನ್ನು ಆರಂಭಿಸಿ ಸಂತೃಪ್ತರಾಗಲಿಲ್ಲ, ಪತಿ ಜ್ಯೋತಿಬಾ ಜೊತೆ ಸೇರಿ ಮಹಾರಾಷ್ಟ್ರದ ಅನೇಕ ಕಡೆ ಇಂತಹ 18 ಶಾಲೆಗಳನ್ನು ತೆರೆದರು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಪ್ರಯತ್ನಗಳಿಗಷ್ಟೇ ಅವರು ತೃಪ್ತರಾಗಲಿಲ್ಲ. ಸಾಮಾಜಿಕ ಸುಧಾರಣಾಗಳಲ್ಲಿಯೂ ತೊಡಗಿಸಿಕೊಂಡರು. ವಿಧವಾ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟರು ಎಂದರು. ಬಾಲ್ಯ ವಿವಾಹ ನಿಷೇಧಕ್ಕೆ ಹೋರಾಡಿದರು. ಭ್ರೂಣ ಹತ್ಯೆ ವಿರುದ್ಧ ಜನಜಾಗೃತಿ ಮೂಡಿಸಿದರು. ಅಸ್ಪೃಶ್ಯತೆ, ಜಾತಿ ಪದ್ದತಿ ನಿರ್ಮೂಲನೆಗೆ ಹೋರಾಟ ಮಾಡಿದರು. ಸಾವಿತ್ರಿ ಬಾವಿ ಫುಲೆ ಅವರು ಸಾಮಾಜಿಕ ಬದಲಾವಣೆಯ ಕ್ರಾಂತಿಕಾರರಾಗಿ ನಮ್ಮ ಮಹಿಳೆಯರ ಬಾಳಿನ ಬೆಳಕಾಗಿದ್ದಾರೆ ಎಂದು ಹೇಳಿದರು.ಡಯಟ್ ಉಪನ್ಯಾಸಕಿ ಎನ್.ಶಾಂತಲಾ ಉಪನ್ಯಾಸ ನೀಡಿದರು. ಸಂಘದ ಜಿಲ್ಲಾಧ್ಯಕ್ಷೆ ಪಿ.ಎಸ್.ಅನುಸೂಯದೇವಿ, ಪ್ರಧಾನ ಕಾರ್ಯದರ್ಶಿ ಎನ್.ಶೋಭಾ, ಖಜಾಂಚಿ ಹೇಮಾವತಿ, ತಾಲ್ಲೂಕು ಅಧ್ಯಕ್ಷೆ ಸಿದ್ದಮ್ಮ, ಪ್ರಧಾನ ಕಾರ್ಯದರ್ಶಿ ಆರ್.ನಾಗಮಣಿ, ಖಜಾಂಚಿ ಲೋಕಮ್ಮ ಮತ್ತಿತರರು ಭಾಗವಹಿಸಿದ್ದರು.