ಸಾರಾಂಶ
ಕೊಪ್ಪಳ: ಗ್ರಾಮಗಳ ಮತ್ತು ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸಿ, ಅಗತ್ಯ ಮುಂಜಾಗ್ರತೆ ವಹಿಸುವಂತೆ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಅವರು ವೈದ್ಯಾಧಿಕಾರಿಗಳಿಗೆ ಮತ್ತು ಮಹಿಳಾ ಶುಶ್ರೂಷಾಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇತ್ತೀಚೆಗೆ ಕೊಪ್ಪಳ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಮತ್ತು ಕೊಪ್ಪಳ ಎನ್‌ಸಿಡಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ "ವಿಶ್ವ ಕ್ಯಾನ್ಸರ್ ದಿನಾಚರಣೆ " ಪ್ರಯುಕ್ತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಪ್ರತಿ ವರ್ಷ ಫೆ. 4ರಂದು "ವಿಶ್ವ ಕ್ಯಾನ್ಸರ್ ದಿನಾಚರಣೆ " ನಡೆಯುತ್ತದೆ. ಇದರ ಉದ್ದೇಶ ಕ್ಯಾನ್ಸರ್ ಹರಡುವ ರೀತಿ, ಲಕ್ಷಣಗಳು ಅದರ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ಮುಖ್ಯವಾಗಿ ಈ ರೋಗವು ಅಸಾಂಕ್ರಾಮಿಕವಾಗಿದೆ. ಸಾಮಾನ್ಯವಾಗಿ ಪುರುಷರಲ್ಲಿ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ವಾಸಿಯಾಗದ ಗಾಯ, ಅಸಹಜ ರಕ್ತಸ್ರಾವ, ಬಹಳ ದಿನಗಳ ಕೆಮ್ಮು, ಬಹಳ ದಿನಗಳ ಧ್ವನಿ, ನೋವಿಲ್ಲದ ಗಡ್ಡೆ ಅಥವಾ ಊತ ಇವು ಕ್ಯಾನ್ಸರ್ ರೋಗದ ಲಕ್ಷಣಗಳಾಗಿರಬಹುದು. ಇವುಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಹತ್ತಿರ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಲ್ಲದೇ ಕ್ಯಾನ್ಸರ್ ಲಕ್ಷಣಗಳು ಕಂಡುಬರುವವರು ಮುಂಜಾಗ್ರತೆ ಕ್ರಮವಾಗಿ ಆರೋಗ್ಯಕರ ಜೀವನ ಶೈಲಿ ನಡೆಸಬೇಕು. ಸಿರಿದಾನ್ಯಗಳಿಂದ ತಯಾರಿಸಿದ ಆಹಾರ ಸೇವನೆ, ಬಣ್ಣಗಳಿಂದ ಕೂಡಿದ ಆಹಾರ ಪದಾರ್ಥಗಳಾದ ಬೇಕರಿ ಪದಾರ್ಥ, ಗೋಬಿ, ಮುಂತಾದವುಗಳನ್ನು ಹೆಚ್ಚಾಗಿ ಬಳಕೆ ಮಾಡಬಾರದು. ಇದರ ಬದಲಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಹೆಚ್ಚು ಬಳಕೆ ಮಾಡುವುದು, ಕ್ಯಾನ್ಸರ್ ಪ್ರತಿರೋಧಕ ಶಕ್ತಿಯಿರುವ ಆಹಾರ ಪದಾರ್ಥಗಳ ಬಳಕೆ, ಆಹಾರದಲ್ಲಿ ಹೆಚ್ಚಿನ ರೀತಿಯ ತರಕಾರಿ, ಹಣ್ಣು-ಹಂಪಲುಗಳ ಬಳಕೆ ಮಾಡುವ ಬಗ್ಗೆ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಜನರಿಗೆ ಸೂಕ್ಷ್ಮವಾಗಿ ಅರ್ಥೈಸಬೇಕು ಎಂದರು.
ಕೊಪ್ಪಳ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, "ವಿಶಿಷ್ಟತೆಯಿಂದ ಏಕತೆ " ಎಂಬ ಈ ವರ್ಷ ಘೋಷವಾಕ್ಯದೊಂದಿಗೆ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಮುಂಬರುವ ಮಾರ್ಚ್ ತಿಂಗಳಿಂದ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಗೃಹ ಆರೋಗ್ಯ ಯೋಜನೆಯಡಿ ಉಚಿತವಾಗಿ ಬಾಯಿ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ರೋಗಿಗಳಿಗೆ ಪ್ರಾಥಮಿಕ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಗುವುದು. ಜತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಹ ಪರೀಕ್ಷಿಸಿ, ಚಿಕಿತ್ಸೆ ನೀಡಿ, ಅನುಸರಣೆ ಮಾಡಲಾಗುತ್ತದೆ. ಒಟ್ಟಾರೆಯಾಗಿ ಉತ್ತಮವಾದ ಆರೋಗ್ಯಕರ ಜೀವನ ಶೈಲಿಯಿಂದ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾ ಡಾ. ರವೀಂದ್ರನಾಥ ಎಂ.ಎಚ್., ಜಿಲ್ಲಾ ರೋಗವಾಹ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ವೆಂಟಕೇಶ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್., ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ್) ಸಹಾಯಕ ಪ್ರಾಧ್ಯಾಪಕ ಡಾ. ಸುರೇಖಾ, ಗದಗ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ರಾಜು, ಪಬ್ಲಿಕ್ ಪ್ರಾಸಿಕ್ಯೂಟರ್ ಗೌರಮ್ಮ ದೇಸಾಯಿ ಉಪಸ್ಥಿತರಿದ್ದರು.