ಸಾರಾಂಶ
ಮೈಸೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಮೈಸೂರು ಮಹಾನಗರ ಪಾಲಿಕೆ ಶಾಖೆಗೆ ಪಾಲಿಕೆ ಬೀಗ ಜಡಿದಿರುವ ಘಟನೆ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಮೈಸೂರು ಮಹಾನಗರ ಪಾಲಿಕೆ ಶಾಖೆಗೆ ಪಾಲಿಕೆ ಬೀಗ ಜಡಿದಿರುವ ಘಟನೆ ಮಂಗಳವಾರ ನಡೆದಿದೆ.
ಈ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಬೆಳಗ್ಗೆ ಬ್ಯಾಂಕಿಗೆ ತೆರಳಿದ್ದ ವೇಳೆ ತಾವು ಹಾಕಿದ್ದ ಬೀಗದ ಮೇಲೆ ಮತ್ತೊಂದು ಬೀಗ ಜಡಿರುವುದನ್ನು ಕಂಡು ದಂಗಾದರು. ನಂತರ ಪಾಲಿಕೆ ಸಿಬ್ಬಂದಿಯನ್ನು ವಿಚಾರಿಸಿದಾಗ, ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಬೀಗ ಜಡಿಯಲಾಗಿದೆ ಎಂದು ಗೊತ್ತಾಗಿದೆ.ಇದರಿಂದಾಗಿ ಬ್ಯಾಂಕಿನ ವಹಿವಾಟಿಗಾಗಿ ಆಗಮಿಸಿದ್ದ ಗ್ರಾಹಕರು ಸೇವೆ ಸಿಗದೇ ಪರದಾಡಿದ ಪ್ರಸಂಗ ಸಹ ನಡೆಯಿತು. ಇನ್ನೂ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಗ್ರಾಹಕರೊಂದಿಗೆ ಶಾಖೆ ಹೊರ ಭಾಗದಲ್ಲೇ ಅಸಹಾಯಕರಾಗಿ ಕುಳಿತ್ತಿದ್ದು ಕಂಡು ಬಂತು.
ಬಾಡಿಗೆ ವಿವಾದಪಾಲಿಕೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್ ಬಿಐ ಶಾಖೆಯು ಪ್ರತಿ ತಿಂಗಳು ಪಾಲಿಕೆಗೆ ಬಾಡಿಗೆ ಪಾವತಿಸುತ್ತಿತ್ತು. ಆದರೆ, ಪರಿಷ್ಕೃತ ಬಾಡಿಗೆ ಪಾವತಿಸುವಂತೆ ಪಾಲಿಕೆಯು ಬ್ಯಾಂಕಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಸಮಸ್ಯೆ ಬಗೆಹರೆಯದಿದ್ದ ಹಿನ್ನೆಲೆಯಲ್ಲಿ ಪಾಲಿಕೆಯು ಯಾವುದೇ ಮುನ್ಸೂಚನೆ ನೀಡದೇ ಬ್ಯಾಂಕಿಗೆ ಬೀಗ ಜಡಿದಿದೆ.
ಈ ವಿಚಾರ ಸಂಬಂಧ ಎಸ್ ಬಿಐ ಪಾಲಿಕೆ ಶಾಖೆಯ ವ್ಯವಸ್ಥಾಪಕ ವೆಂಕಟರಾಜು ಅವರು ಪಾಲಿಕೆ ಆಯುಕ್ತರನ್ನು ಭೇಟಿಯಾಗಿ, ಬಾಡಿಗೆ ವಿಚಾರವು ಇತ್ಯರ್ಥ ಆಗುವವರೆಗೂ ಬ್ಯಾಂಕ್ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.