ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ಸರ್ಚ್ ಸಮಿತಿ ಸಲ್ಲಿಸಿದ ಶಿಫಾರಸು ಕಡತ ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿಗಳ ಕಚೇರಿಯಲ್ಲೇ ಉಳಿದುಕೊಂಡಿದೆ. ಇದರಿಂದಾಗಿ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಅಭಿವೃದ್ಧಿ ಕುರಿತಂತೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಂತಾಗಿದೆ.ಜುಲೈನಿಂದ ಖಾಲಿ ಬಿದ್ದಿರುವ ಶಿವಮೊಗ್ಗ ಕುವೆಂಪು ವಿವಿ, ಮಂಗಳೂರು ವಿವಿ, ಬಳ್ಳಾರಿ ಕೃಷ್ಣದೇವರಾಯ ವಿವಿ ಹಾಗೂ ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಕುಲಪತಿ ಆಯ್ಕೆಗೆ ರಾಜ್ಯ ಸರ್ಕಾರ ಸರ್ಚ್ ಕಮಿಟಿ ನೇಮಿಸಿತ್ತು. ಈ ಸರ್ಚ್ ಕಮಿಟಿ ಸಪ್ಟೆಂಬರ್‌ನಲ್ಲೇ ಕುಲಪತಿ ಸ್ಥಾನಕ್ಕೆ ತಲಾ ಮೂರು ಹೆಸರುಗಳನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಒಂದು ತಿಂಗಳೊಳಗೆ ಹೊಸ ಕುಲಪತಿ ಹೆಸರು ಹೊರಬೀಳುವ ನಿರೀಕ್ಷೆಯಲ್ಲಿದ್ದವರಿಗೆ ಹುಸಿಯಾಗಿತ್ತು. ತಿಂಗಳು ಮೂರು ಕಳೆದರೂ ಶಿಫಾರಸು ಕಡತ ಮುಖ್ಯಮಂತ್ರಿಗಳ ಕಚೇರಿಯಲ್ಲೇ ಬಿದ್ದುಕೊಂಡಿದೆ.
ಸಿಎಂ ಅಂಕಿತಕ್ಕೆ ಮೀನಮೇಷ!:ಕುಲಪತಿಗಳ ಆಯ್ಕೆಗೆ ಬೇಕಾದ ಎಲ್ಲ ರೀತಿಯ ಪ್ರಕ್ರಿಯೆಗಳೂ ನಿಯಮ ಪ್ರಕಾರ ನಡೆದಿದೆ. ಮುಖ್ಯಮಂತ್ರಿಗಳು ಶಿಫಾರಸುಗೊಂಡ ಮೂರು ಹೆಸರು ಪೈಕಿ ಒಂದು ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸುವುದು ಕ್ರಮ. ಬಳಿಕ ರಾಜ್ಯಪಾಲರು ಅನುಮೋದಿಸುವುದು ನಿಯಮ. ಆದರೆ ಶಿಫಾರಸು ಕಡತ ಇನ್ನೂ ಸಿಎಂ ಕಚೇರಿಯಲ್ಲೇ ಇರುವುದು ಕುಲಪತಿ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ. ಇಷ್ಟಕ್ಕೂ ಸಿಎಂ ಅಂಕಿತಕ್ಕೆ ಮೀನಮೇಷ ಯಾಕೆ ಎಂಬುದಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಕುಲಪತಿ ಸ್ಥಾನದ ಆಕಾಂಕ್ಷಿಗಳು ಪದೇ ಪದೇ ಸಿಎಂ ಕಚೇರಿಗೆ ಎಡತಾಕುತ್ತಿರುವುದು ಬಿಟ್ಟೆರೆ ಕಡತ ಸ್ವಲ್ಪವೂ ಮಿಸುಕಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.ಕುಲಪತಿ ಆಯ್ಕೆಯೇ ಸವಾಲು: ಮೂಲಗಳ ಮಾಹಿತಿ ಪ್ರಕಾರ, ಎಲ್ಲ ನಾಲ್ಕು ವಿವಿಗಳಿಗೂ ಕುಲಪತಿ ಸ್ಥಾನಕ್ಕೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಸಿಎಂ ಮುಂದೆ ಆಕಾಂಕ್ಷಿಗಳು ಇನ್ನಿಲ್ಲದ ಒತ್ತಡ ಹಾಕಿದ್ದಾರೆ. ಇದೇ ವೇಳೆ ಮತ್ತೂ ಕೆಲವು ಆಕಾಂಕ್ಷಿಗಳು ಬಿಜೆಪಿ ಹಾಗೂ ಸಂಘಪರಿವಾರ ಮೂಲಕ ರಾಜ್ಯಪಾಲರ ಬಳಿಯೂ ಪ್ರಬಲ ಲಾಬಿ ನಡೆಸಿದ್ದಾರೆ. ಈ ಗೊಂದಲವೇ ಕುಲಪತಿ ಸ್ಥಾನ ನೇಮಕ ಶಿಫಾರಸು ಕಡತಕ್ಕೆ ಸಿಎಂ ಅಂಕಿತ ಹಾಕಲು ಹಿಂದೇಟು ಹಾಕಲು ಕಾರಣ ಎಂದು ಹೇಳಲಾಗುತ್ತಿದೆ.
ಮಂಗಳೂರು ವಿವಿ ಕುಲಪತಿ ಸ್ಥಾನಕ್ಕೆ ಮೈಸೂರು ವಿವಿ ನಿವೃತ್ತ ಪ್ರೊಫೆಸರ್ ಮುಜಾಫರ್ ಅಸ್ಸಾದಿ, ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಪಿ.ಎಲ್.ಧರ್ಮ ಹಾಗೂ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಕಿಶೋರ್ ಕುಮಾರ್ ಹೆಸರು ಶಿಫಾರಸುಗೊಂಡಿದೆ. ಇವರಲ್ಲಿ ಪ್ರೊ.ಮುಜಾಫರ್ ಅಸ್ಸಾದಿ ಹಾಗೂ ಪ್ರೊ.ಪಿ.ಎಲ್.ಧರ್ಮ ಹೆಸರು ಶಿವಮೊಗ್ಗ ವಿವಿ ಕುಲಪತಿ ಸ್ಥಾನಕ್ಕೂ ಕೇಳಿಬಂದಿದೆ. ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರ ಡೀನ್ ಅವಧಿ ಮಾರ್ಚ್‌ಗೆ ಕೊನೆಗೊಳ್ಳುತ್ತದೆ.ಕುಲಪತಿಗಳ ಆಯ್ಕೆಗೆ ಸಂಬಂಧಿಸಿ ಸರ್ಚ್ ಕಮಿಟಿ ಶಿಫಾರಸಿನ ಅವಧಿ ಆರು ತಿಂಗಳು ಇರುತ್ತದೆ. ಸರ್ಚ್ ಕಮಿಟಿ ಕುಲಪತಿ ಸ್ಥಾನಕ್ಕೆ ಶಿಫಾರಸು ಮಾಡಿದ ಬಳಿಕವೂ ಆರು ತಿಂಗಳ ಒಳಗೆ ನೇಮಕವಾಗದಿದ್ದರೆ, ಮತ್ತೆ ಪ್ರಕಟಣೆ ಹೊರಡಿಸಬೇಕಾಗುತ್ತದೆ. ಈಗ ಮೂರು ತಿಂಗಳೇ ಕಳೆದಿದೆ. ಈ ನಡುವೆ ಉನ್ನತ ಶಿಕ್ಷಣ ಸಚಿವ ಸುಧಾಕರ್ ಕೂಡ ಇತ್ತೀಚೆಗೆ ಕುಲಪತಿಗಳ ನೇಮಕ ವಿಚಾರದ ಕಡತ ಸಿಎಂ ಕಚೇರಿಯಲ್ಲಿದೆ, ಶೀಘ್ರವೇ ಕುಲಪತಿಗಳ ನೇಮಕ ಆಗಲಿದೆ ಎಂದಿದ್ದರು.ವಿಳಂಬವಾದರೆ ಸಮಸ್ಯೆ ಏನು?
ವಿವಿಗಳಲ್ಲಿ ಕಾಯಂ ಕುಲಪತಿ ಇದ್ದರೆ ಆಡಳಿತಾತ್ಮಕ ವಿಚಾರಗಳಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಸುಲಭವಾಗುತ್ತದೆ. ಪ್ರಭಾರ ಕುಲಪತಿ ಇರುವಲ್ಲಿ ಅಂತಹ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಗದು. ಪ್ರಭಾರವಾಗಿ ಕುಲಪತಿ ಹುದ್ದೆಯಲ್ಲಿ ಇರುವವರು ಯಾವುದೇ ತೀರ್ಮಾನ ಕೈಗೊಳ್ಳಲು ಮುಂದಾಗುವುದಿಲ್ಲ ಇಲ್ಲವೇ ಸಿಂಡಿಕೇಟ್ ಸದಸ್ಯರು ಅದಕ್ಕೆ ಆಸ್ಪದ ನೀಡುವುದಿಲ್ಲ ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಆರೋಪ.ಇದಕ್ಕೆ ಉದಾಹರಣೆ ಎಂಬಂತೆ, ಮಂಗಳೂರು ವಿವಿಯಲ್ಲಿ ಯುಜಿಸಿಯಿಂದ 11 ಮತ್ತು 12ನೇ ಹಣಕಾಸು ಯೋಜನೆಯಡಿ ಸುಮಾರು 5.65 ಕೋಟಿ ರು. ಮೊತ್ತ ಬರಬೇಕಾಗಿದೆ. ಈ ಬಗ್ಗೆ ಯುಟಿಲೈಸೇಷನ್ ಸರ್ಟಿಫಿಕೆಟ್ ಕೂಡ ಸಲ್ಲಿಸಲಾಗಿದೆ. ಈ ಬಗ್ಗೆ ದೆಹಲಿ ಮಟ್ಟದಲ್ಲಿ ಫಾಲೋಅಪ್ ಮಾತ್ರ ಸರಿಯಾಗಿ ಮಾಡುತ್ತಿಲ್ಲ. ಪ್ರಸಕ್ತ ಈ ವಿವಿಯಲ್ಲಿ ಪ್ರಭಾರ ಕುಲಪತಿ ಇದ್ದಾರೆ. ವಿವಿ ಮಾತ್ರ ಹಣಕಾಸಿನ ಮುಗ್ಗಟ್ಟಿನಿಂದ ನಲುಗುತ್ತಿದೆ. ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಹೆಣಗಾಡುತ್ತಿದೆ. ಇಂಥದ್ದರಲ್ಲಿ ಕೋಟಿಗಟ್ಟಲೆ ಮೊತ್ತ ತರಿಸಲು ಯಾರೂ ಇಚ್ಛಾಶಕ್ತಿ ತೋರಿಸದೇ ಇರುವುದು ದುರಂತವೇ ಸರಿ.