ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ

| Published : Jan 03 2024, 01:45 AM IST

ಸಾರಾಂಶ

ಎಸ್‌ಡ್ಲ್ಯೂಎಮ್2012ರ ನಿಯಮದಂತೆ ಹೋಟೇಲ್ ಹಾಗೂ ಕಲ್ಯಾಣ ಮಂಟಪ ಮಾಲೀಕರಿಗೆ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಕುರಿತು ಮಂಗಳವಾರ ಸಂಜೆ ಆಯೋಜಿಸಿದ್ದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ ಕುಮಾರ್ ಮಾತನಾಡಿದರು.

ಘನತ್ಯಾಜ್ಯ ವಿಲೇವಾರಿ ಕುರಿತು ಸಮಾಲೋಚನಾ ಸಭೆ । ಹೋಟೇಲ್ ,ಕ್ಯಾಂಟೀನ್, ಕಲ್ಯಾಣಮಂಟಪದ ಮಾಲೀಕರು ಭಾಗಿ

ಕನ್ನಡಪ್ರಭವಾರ್ತೆ ನೆಲಮಂಗಲ

ಸರ್ಕಾರ ತ್ಯಾಜ್ಯ ವಿಲೇವಾರಿ ಕುರಿತು ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿ ರಸ್ತೆ ಬದಿಯಲ್ಲಿ ಕಸ ವಿಲೇವಾರಿ ಮಾಡುವುದರಿಂದ ನಗರದ ಸ್ವಚ್ಚತೆ ಹಾಳಾಗುತ್ತದೆ. ಜತೆಗೆ ಸಾಕಷ್ಟು ಆನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರೂ ಕೈಜೊಡಿಸಿದಾಗ ಮಾತ್ರ ಸ್ವಚ್ಛ ಹಾಗೂ ಮಾದರಿ ನಗರ ನಿರ್ಮಾಣ ಮಾಡಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ ಕುಮಾರ್ ತಿಳಿಸಿದ್ದಾರೆ.

ಸದಾಶಿವನಗರದ ಎಸ್‌ಎಲ್‌ಆರ್ ಸಮುದಾಯ ಭವನದಲ್ಲಿ ನಗರಸಭೆಯಿಂದ ಎಸ್‌ಡ್ಲ್ಯೂಎಮ್2012ರ ನಿಯಮದಂತೆ ಹೋಟೇಲ್ ಹಾಗೂ ಕಲ್ಯಾಣ ಮಂಟಪ ಮಾಲೀಕರಿಗೆ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಕುರಿತು ಮಂಗಳವಾರ ಸಂಜೆ ಆಯೋಜಿಸಿದ್ದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೆಳಹಂತದಲ್ಲೇ ತ್ಯಾಜ್ಯ ವಿಂಗಡಣೆ ಮಾಡುವುದನ್ನು ರೂಢಿಸಿಕೊಳ್ಳಬೇಕಿದೆ. ಕೆಲ ಮಾಲೀಕರು ತೆರಿಗೆ ಹಣವನ್ನು ಕಟ್ಟದೇ ಬಾಕಿ ಉಳಿಸಿಕೊಂಡಿರುವವರು ಅದಷ್ಟು ಬೇಗ ಕಟ್ಟಬೇಕಿದೆ. ಜತೆಗೆ ಹೋಟೆಲ್‌ಗಳು ಕಡ್ಡಾಯವಾಗಿ ಪರವಾನಗಿಯನ್ನು ಪಡೆದುಕೊಳ್ಳಬೇಕಿದೆ. ಹಂತ ಹಂತವಾಗಿ ತ್ಯಾಜ್ಯ ನಿರ್ಮೂಲನೆ ಮಾಡಿ ಸ್ವಚ್ಛ ನಗರ ನಿರ್ಮಾಣಕ್ಕೆ ನಗರಸಭೆಯೊಂದಿಗೆ ಸಹಕಾರ ನೀಡಬೇಕಿದೆ ಎಂದರು.

ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಎಸ್‌ಡ್ಲ್ಯೂಎಮ್ 2012ರ ನಿಯಮದಂತೆ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ನಿಯಮಗಳಿದ್ದು, ಪ್ರತಿಯೊಬ್ಬರೂ ಅನುಸರಿಬೇಕಾಗಿದೆ. ನಗರದಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದನೆ ಮಾಡುವ ಹೋಟೇಲ್, ಡಾಬಾ ಸೇರಿದಂತೆ ಕಲ್ಯಾಣ ಮಂಟಪಗಳಿಗೆ ಹಸಿ ಕಸ, ಒಣ ಕಸ ಹಾಗೂ ಪರಿಸರಕ್ಕೆ ಹಾನಿಕಾರಕ ಕಸದ ಬಗ್ಗೆ ಮಾಹಿತಿ ನೀಡಲಾಗಿದೆ. ಹಸಿ ಕಸ 3 ರು, ಒಳ ಕಸ 2 ರು. ಸೇರಿದಂತೆ ಪರಿಸರಕ್ಕೆ ಹಾನಿಕಾರಕ ಕಸ 3 ರು.ಗಳನ್ನು ಪ್ರತಿ ಕೆಜಿಗೆ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕ ಈಗಾಗಲೇ ಭರ್ತಿಯಾಗಿದ್ದು, ಸರಿಯಾದ ರೀತಿ ವಿಂಗಡಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬ ಕಾನೂನನ್ನು ಪಾಲನೆ ಮಾಡಬೇಕಿದೆ. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳಲಾಗುವುದು ಎಂದರು.

ಕೆರೆ ಅಭಿವೃದ್ಧಿ:

ನಗರದ ಕೆರೆ ಹಾಗೂ ಬಿನ್ನಮಂಗಲ ಕೆರೆಯನ್ನು ಪ್ರತಿಷ್ಠಿತ ಕಂಪನಿಯೊಂದು ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿ ಮಾಡಲು ಮುಂದೆ ಬಂದಿದೆ. ಈಗಾಗಲೇ ನಗರಸಭೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದು, ಆದಷ್ಟು ಬೇಗ ಕೆರೆ ಹೂಳು ಎತ್ತುವುದು, ಪಾದಚಾರಿ ಸಂಚಾರಕ್ಕೆ ಟ್ರಾಕ್ ಪಾರ್ಕ್ ನಿರ್ಮಾಣ ಸೇರಿದಂತೆ ಕೆರೆ ಅಭಿವೃದ್ಧಿ ಕಾರ್ಯವನ್ನು ಮಾಡಲಾಗುವುದು ಎಂದು ಪೌರಾಯುಕ್ತ ಮನುಕುಮಾರ್ ಮಾಹಿತಿ ನೀಡಿದರು.

ಸಭೆಯಲ್ಲಿ ಚರ್ಚೆಯಾದ ವಿಷಯ:

ನಗರದಲ್ಲಿ ಪ್ಲಾಸ್ಟಿಕ್ ಮಾರಾಟ ಹೆಚ್ಚಾಗಿದ್ದು, ಸಾಕಷ್ಟು ಸಮಸ್ಯೆಯಾಗುತ್ತಿದೆ. ಪ್ಲಾಸ್ಟಿಕ್ ನಿಯಂತ್ರಣ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಹೋಟೇಲ್, ಡಾಬಾ ಸೇರಿದಂತೆ ಕಲ್ಯಾಣ ಮಂಟಪಗಳಿಂದ ಉತ್ಪಾದನೆಯಾಗುವ ಕಸವನ್ನು ಸರಿಯಾದ ಸಮಯಕ್ಕೆ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಲಾಗುತ್ತಿದೆ. ರಸ್ತೆ ಬದಿಯಲ್ಲಿ ಮೊಬೈಲ್ ಕ್ಯಾಂಟಿನ್ ನಡೆಸುವವರಿಂದ ಕಸದ ಸಮಸ್ಯೆ ಹೆಚ್ಚಾಗುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಹೋಟೇಲ್ ಮಾಲೀಕರು ಚರ್ಚಿಸಿದರು.

ನಗರಸಭೆ ಉಪಾಧ್ಯಕ್ಷೆ ಸುಜಾತ ಮುನಿಯಪ್ಪ, ಆರೋಗ್ಯ ನಿರೀಕ್ಷಕಿ ಬಿ.ಜಿ.ಮಮತ, ರವಿಕುಮಾರ್, ಸಮುದಾಯ ಸಂಘಟಕ ನಾರಾಯಣಸ್ವಾಮಿ, ಮುಖಂಡ ಮಂಜುನಾಥ್, ಬಸವರಾಜು ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.