ಉಡುಪಿ: ನಗರದ ಅಂಬಾಗಿಲು ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಶಾಖೆಯನ್ನು ಬುಧವಾರ ಉದ್ಘಾಟಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಮುರಳಿಧರ ಕುಂಜಿಬೆಟ್ಟು ಪ್ರಾರ್ಥನೆ ನೆರವೇರಿಸಿದರು. ಶಾಖಾ ವ್ಯವಸ್ಥಾಪಕ ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿದರು.
ಬ್ಯಾಂಕಿನ ಬೆಂಗಳೂರು ವೃತ್ತದ ನೆಟ್‌ವರ್ಕ್-3 ನ ಮಹಾಪ್ರಬಂಧಕ ಸಂಜಯ್ ಕುಮಾರ್ ಝಾ ಶಾಖೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಹಕರೆಲ್ಲರೂ ಈ ನೂತನ ಶಾಖೆಯ ಪ್ರಯೋಜನವನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಂಗಳೂರು ಆಡಳಿತ ಕಚೇರಿಯ ಉಪಮಹಾಪ್ರಬಂಧಕ ಕೃಷ್ಣ ಮೋಹನ್ ಮುಚರ್ಲ ಅವರು ಶಾಖೆಯ ಹೆಸರನ್ನು ಅನಾವರಣಗೊಳಿಸಿದರು. ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಬಿ. ಪ್ರಕಾಶ್ ಅಡಿಗ ಮಾತನಾಡಿ, ಈ ನೂತನ ಶಾಖೆ ಅಂಬಾಗಿಲು ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಹತ್ತಿರದಿಂದ, ವೇಗವಾಗಿ ಮತ್ತು ಸುರಕ್ಷಿತವಾಗಿ ಒದಗಿಸಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಖೆಯ ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್, ಸಿಬ್ಬಂದಿಗಳಾದ ಅನಿಲ್ ಕುಮಾರ್, ಅಭಯಲಾಲ್ ದಾಸ್, ಜಗದೀಶ್ ಕಾಮತ್, ಶ್ರೀನಿವಾಸ ಎಂ. ವಿ., ಪ್ರಾದೇಶಿಕ ಕಚೇರಿಯ ಇತರ ಅಧಿಕಾರಿಗಳು, ಹತ್ತಿರದ ಶಾಖೆಯ ಸಿಬ್ಬಂದಿಗಳು, ಸ್ಥಳೀಯ ಗಣ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಗ್ರಾಹಕರಾದ ವಾಸುದೇವ, ಕಟ್ಟಡ ಮಾಲೀಕರಾದ ರೋಹಿಣಿ ಕಿಣಿ ಅವರನ್ನು ಗೌರವಿಸಲಾಯಿತು. ಮನಿಷಾ ಕಾರ್ಯಕ್ರಮ ನಿರ್ವಹಿಸಿದರು.