ಮೇ 5ರಿಂದ ಪರಿಶಿಷ್ಟ ಜಾತಿ ಸಮೀಕ್ಷೆ: ಸಾರ್ವಜನಿಕರ ಸಹಕಾರಕ್ಕೆ ಜಿಲ್ಲಾಧಿಕಾರಿ ಮನವಿ

| Published : Apr 28 2025, 11:46 PM IST

ಮೇ 5ರಿಂದ ಪರಿಶಿಷ್ಟ ಜಾತಿ ಸಮೀಕ್ಷೆ: ಸಾರ್ವಜನಿಕರ ಸಹಕಾರಕ್ಕೆ ಜಿಲ್ಲಾಧಿಕಾರಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಮೀಕ್ಷೆ ನಡೆಸುವ ಸಂಬಂಧ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಮೇ 5 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಿ ಸಮೀಕ್ಷೆ ನಡೆಸುವ ಕಾರ್ಯವು ಶಾಲಾ ಶಿಕ್ಷಕರಿಂದ ನಡೆಯಲಿದೆ. ನಡೆಯಲಿದ್ದು, ಮನೆ ಮನೆಗೆ ದತ್ತಾಂಶ ಶೇಖರಣೆಗೆ ಆಗಮಿಸುವ ಶಿಕ್ಷಕರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಹೇಳಿದ್ದಾರೆ.

ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಮೀಕ್ಷೆ ನಡೆಸುವ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮೀಕ್ಷೆಗೆ ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದ್ದು, ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಇತರ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 75,000 ಕ್ಕೂ ಹೆಚ್ಚು ಜನರಿದ್ದು, ಅವರ ಸಮೀಕ್ಷೆ ನಡೆಸಲು 1000 - 1100 ಗಣತಿದಾರರ ಅವಶ್ಯಕತೆ ಇದ್ದು, ಈ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದರು.

ಸರ್ಕಾರದಿಂದ ಕಾಲಕಾಲಕ್ಕೆ ನೀಡುವ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ವಯ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ಸಮೀಕ್ಷೆ ಕಾರ್ಯ ಯಶಸ್ವಿ ಆಗುವಂತೆ ಕ್ರಮವಹಿಸಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ, ಜಿ.ಪಂ. ಉಪ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಸಹಾಯಕ ಕಮೀಷನರ್ ರಶ್ಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ಡಯಟ್ ಉಪ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.