ಸತ್ಯದ ಅನ್ವೇಷಣೆಯಿಂದ ಸಂಶೋಧನೆ ಸಾಧ್ಯ

| Published : Apr 28 2025, 11:46 PM IST

ಸಾರಾಂಶ

ಎಸ್‌ಜೆಸಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ 3ನೇ ಐಇಇಇ ನಾಲೆಡ್ಜ್ ಇಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್ (ಜ್ಞಾನ ಇಂಜಿನಿಯರಿಂಗ್ ಸಂವಹನ ವ್ಯವಸ್ಥೆಗಳು) ಎಂಬ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆದಿ ಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅವಶ್ಯಕತೆ ಜೊತೆಗೆ ಉತ್ಕೃಷ್ಟತೆಯನ್ನು ಸಾಧಿಸುವ ತುಡಿತ ಮತ್ತು ಸತ್ಯದ ಅನ್ವೇಷಣೆ ಸಂಶೋಧನೆಗೆ ಕಾರಣವಾಗುತ್ತದೆ. ಹೊಸ ಸಂಶೋಧನೆಯನ್ನು ಮಾಡುವುದರ ಜೊತೆಗೆ ಅದನ್ನು ಪ್ರಚುರಪಡಿಸುವುದು ಕೂಡ ಅನಿವಾರ್ಯ. ಸಮ್ಮೇಳನಗಳು ಹೊಸ ಅನ್ವೇಷಣೆಗಳ ಪ್ರಕಾಶನಕ್ಕೆ ಅನುಕೂಲ ಮಾಡಿಕೊಡುತ್ತವೆ ಎಂದು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಮಹಾ ವಿದ್ಯಾಲಯದ ವೈಮಾನಿಕ ವಿಭಾಗದ ಬಿಜಿಎಸ್ ಕಾನ್ಫ್‌ರೆನ್ಸ್ ಹಾಲ್‌ ನಲ್ಲಿ ಸೋಮವಾರ ಬೆಂಗಳೂರಿನ ಐಇಇಇ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ 3ನೇ ಐಇಇಇ ನಾಲೆಡ್ಜ್ ಇಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್ (ಜ್ಞಾನ ಇಂಜಿನಿಯರಿಂಗ್ ಸಂವಹನ ವ್ಯವಸ್ಥೆಗಳು) ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು,

ಭಾರತದ ಅಭಿವೃದ್ಧಿ ಪಥವನ್ನು ರೂಪಿಸುವಲ್ಲಿ ಅತ್ಯಾಧುನಿಕ ಸಂಶೋಧನೆಯ ಮಹತ್ವವನ್ನು ತಿಳಿಸಿ, ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಡೇಟಾ ಸೈನ್ಸ್ ಮತ್ತು ನವೀಕರಿಸಬಹುದಾದ ಶಕ್ತಿಯಂತಹ ಕ್ಷೇತ್ರಗಳಲ್ಲಿ ತೀವ್ರವಾದ ಸಂಶೋಧನೆಯ ಅಗತ್ಯವಿದೆ ಎಂದರು.

ಆಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷಿತ ಸಿದ್ದಾಂತವನ್ನು ವಿವರಿಸಿ, ಜ್ಞಾನ ಇಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಯಂತ್ರಕಲಿಕೆ ತಂತ್ರಜ್ಞಾನವು ಜನರ ಗುಣಮಟ್ಟದ ಜೀವನ ಶೈಲಿಗೆ ಪೂರಕವಾಗಬೇಕು, ಸಂಶೋಧನೆಯು ದೇಶದ ಜಿಡಿಪಿ ಮೌಲ್ಯ, ಆರ್ಥಿಕತೆಗೆ ಸಂಶೋಧನೆ, ಅನ್ವೇಷಣೆಗಳು ಹೇಗೆ ಅನುಕೂಲವಾಗುತ್ತವೆ. ದೇಶದ ಸಮಗ್ರ ಬೆಳವಣಿಗೆಗೆ ಸಂಶೋಧಕರ ಪಾತ್ರ, ರಾಷ್ಟ್ರದ ಅಭಿವೃದ್ಧಿಗೆ ಉಪಯೋಗವಾಗುವ ಸಂಶೋಧನೆಗಳಿಗೆ ಒತ್ತು ನೀಡಬೇಕೆಂದು ತಿಳಿಸಿದರು.

ಧಾರವಾಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್‌ಮೇಷನ್ ಟೆಕ್ನಾಲಜಿಯ ನಿರ್ದೇಶಕ ಡಾ. ಮಹದೇವ ಪ್ರಸನ್ನ ಮಾತನಾಡಿ, ತಂತ್ರಜ್ಞಾನ ಯುಗದ ವಿವರಣೆಗೆ ಬಂದರೆ ಕೃತಕ ಬುದ್ದಿಮತ್ತೆಯು, ಯಂತ್ರಕಲಿಕೆ ತಂತ್ರಜ್ಞಾನ ಬಳಸಿ ಹೇಗೆ ಡೇಟಾ ಸಂಗ್ರಹಿಸಲಾಗುತ್ತದೆ. ಬಹಳಷ್ಟು ಡೇಟಾವನ್ನು ಸ್ವಯಂಚಾಲಿತವಾಗಿ ರಚಿಸಲಾಗಿದೆ ಮತ್ತು ಸಂಸ್ಕರಿಸಲಾಗುತ್ತದೆ. ಇದು ಅಸಾಧ್ಯ ಕೆಲಸವನ್ನು ಸ್ವಯಂಚಾಲಿತವಾಗಿ ಸಂಸ್ಕರಿಸುತ್ತದೆ. ದತ್ತಾಂಶ ಬಳಸಿಕೊಳ್ಳುವುದು ಮತ್ತು ಸಂಸ್ಕರಿಸುವುದು ಅದನ್ನು ಲಕ್ಷಾಂತರ ಡೇಟಾ ಪಾಯಿಂಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಿ ಸಾಮಾನ್ಯ ಮಾಹಿತಿಯಾಗಿ ಕಲಿಯುವುದು ಅದನ್ನು ಜ್ಞಾನವಾಗಿ ಪರಿವರ್ತಿಸಿ ಮಾನವ ಸಮಾಜಕ್ಕೆ ನೀಡಬೇಕು ಮತ್ತು ಸಂಶೋಧನೆಗೆ ಹೆಚ್ಚು ಆದ್ಯತೆ ಕೊಡಬೇಕು ಎಂದರು. ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್‌ಮೇಷನ್ ಟೆಕ್ನಾಲಜಿಯ ಅಸೋಸಿಯೇಟ್ ಡೀನ್ (ಆರ್ ಆ್ಯಂಡ್ ಡಿ) ಡಾ.ಬಿ.ಡಿ.ಪರಮೇಶಚಾರಿ ಮಾತನಾಡಿ, ಐಇಇಇ ವಿಶ್ವದ ಅತಿ ದೊಡ್ಡ ತಾಂತ್ರಿಕ ವೃತ್ತಿಯ ಸಂಸ್ಥೆಯಾಗಿದ್ದು, ಬೆಂಗಳೂರು ವಿದ್ಯಾರ್ಥಿ ವಿಭಾಗದ ಸುಮಾರು 50 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತದೆ. ಐಇಇಇಯಿಂದ ವಿಶ್ವದಾದ್ಯಂತ ಸುಮಾರು 2000 ಕಾನ್ಫರೆನ್ಸ್‌ಗಳು ನಡೆಯುತ್ತವೆ.

ನಮ್ಮ ಭಾರತದಲ್ಲಿ 200 ಕಾನ್ಫರೆನ್ಸ್‌ಗಳು, ಬೆಂಗಳೂರು ವಿಭಾಗದಿಂದ 50 ಕಾನ್ಫರೆನ್ಸ್‌ಗಳು ನಡೆಯುತ್ತವೆ. ಈ ರೀತಿಯ ಕಾನ್ಫರೆನ್ಸ್‌ಗಳು ಗುಣಮಟ್ಟ ಕಾಪಾಡಲು, ಸಹಯೋಗ, ತಕ್ಷಣದ ಪ್ರತಿಕ್ರಿಯೆ, ನೇರ ಸಂಪರ್ಕ ಹಾಗೂ ಇತ್ತೀಚಿನ ಪ್ರವೃತ್ತಿಗಳು ವೃತ್ತಿಪರ ಜೀವನದಲ್ಲಿ ಹೇಗೆ ಸಹಕಾರಿಯಾಗಿವೆ ಎಂದು ಹೇಳಿದರು.

ಪ್ರಾಂಶುಪಾಲ ಡಾ.ಜಿ.ಟಿ ರಾಜು ಮಾತನಾಡಿ, ನಾಲೆಡ್ಜ್ ಇಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್‌ಗಳ ಅಭಿವೃದ್ಧಿಯು 21ನೇ ಶತಮಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಈ ಸಂವಹನ ವ್ಯವಸ್ಥೆಯು ಜ್ಞಾನವನ್ನು ಪಡೆದುಕೊಳ್ಳುವ ಮತ್ತು ರಚನೆ ಮಾಡುವ ಸಾಮರ್ಥ್ಯವನ್ನು ಇಂದಿನ ಕೈಗಾರಿಕೆಗಳನ್ನು ಕ್ರಾಂತಿಗೊಳಿಸಿದೆ. ಹಾಗೆಯೇ ಮಾನವನ ಭೌತಿಕ ಮತ್ತು ಸಮಾಜದಲ್ಲಿನ ಬದಲಾವಣೆಗಳನ್ನು ಮರು ವ್ಯಾಖ್ಯಾನಿಸಲು ಈ ಐಇಇಇ ಕಾನ್ಫರೆನ್ಸ್ ಬಹು ಮುಖ್ಯವಾಗಿದೆ. ವಿಜ್ಞಾನ ಮತ್ತು ಸಮಾಜದ ಪ್ರಗತಿಗೆ ವಿಚಾರಣಾ ಮನೋಭಾವ, ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ನಾವಿನ್ಯತೆ ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

ಎಸ್‌ಜೆಸಿಐಟಿಯ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎಚ್.ಮಂಜುನಾಥ್ ಕುಮಾರ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಮ್ಮೇಳನದ ಮಹತ್ವ, ಪೂರ್ವಸಿದ್ದತೆ 1234 ಸಂಶೋಧನಾ ಲೇಖನಗಳು ವಿವಿಧ ದೇಶಗಳ ಭಾಗಗಳಿಂದ ಸಲ್ಲಿಸಿದ್ದರು. 900ಕ್ಕೂ ಹೆಚ್ಚು ತಜ್ಞರ ವಿಮರ್ಶೆ ಪ್ರಕ್ರಿಯೆಯಲ್ಲಿ ಸ್ವೀಕರಿಸಿದ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಆಹ್ವಾನಿತ ಮತ್ತು ಪ್ರತಿಷ್ಠಿತ ಭಾಷಣಕಾರರಾಗಿ ಡಾ.ಎಸ್. ಸೋಮನಾಥ, ಪ್ರೊ.ಐಎಎಸ್ಸಿ, ಫಾರ್ಮರ್ ಚೇರ್‌ಮೆನ್, ಐಎಸ್ಆರ್‌ಒ ಬೆಂಗಳೂರು ಆನ್‌ಲೈನ್ ಮುಖಾಂತರ ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ಎಸ್‌ಜೆಸಿಐಟಿ ಆಡಳಿತ ಅಧಿಕಾರಿ ಜಿಆರ್ ರಂಗಸ್ವಾಮಿ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ರಾಜಶೇಖರ್, ಡಾ.ಭಾರತಿ, ಡಾ.ತ್ಯಾಗರಾಜ್, ಡಾ.ನಾರಾಯಣ್, ಕಾಲೇಜಿನ ಭೋಧಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.