ಗೃಹ ಪ್ರವೇಶ ಆಹ್ವಾನ ಪತ್ರಿಕೆಯಲ್ಲಿ ಅಧ್ಯಾತ್ಮ ಪ್ರೇಮ!

| Published : Apr 28 2025, 11:46 PM IST

ಸಾರಾಂಶ

ಹುನ್ನೂರದ ಶಿಕ್ಷಕಿಯೊಬ್ಬರು ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಸಿದ್ಧೇಶ್ವರ ಶ್ರೀಗಳ ಪ್ರವಚನದ ಮನೆಯೊಡೆಯ ಪುಸ್ತಕವನ್ನು ಮುದ್ರಿಸಿ ಮುಖಪುಟದ ಹಿಂಬದಿ ಹಾಳೆಯಲ್ಲಿ ಗೃಹಪ್ರವೇಶದ ವಿವಿರ ಪ್ರಕಟಿಸಿ ಪುಸ್ತಕವನ್ನೇ ಆಹ್ವಾನ ಪತ್ರಿಕೆಯಾಗಿ ಹಂಚುವ ಮೂಲಕ ಅಧ್ಯಾತ್ಮ ಹಾಗೂ ಪುಸ್ತಕ ಪ್ರೇಮ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ:

ಬನಹಟ್ಟಿಯ ಶಿಕ್ಷಕಿಯೊಬ್ಬರು ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಸಿದ್ಧೇಶ್ವರ ಶ್ರೀಗಳ ಪ್ರವಚನದ ಮನೆಯೊಡೆಯ ಪುಸ್ತಕವನ್ನು ಮುದ್ರಿಸಿ ಮುಖಪುಟದ ಹಿಂಬದಿ ಹಾಳೆಯಲ್ಲಿ ಗೃಹಪ್ರವೇಶದ ವಿವಿರ ಪ್ರಕಟಿಸಿ ಪುಸ್ತಕವನ್ನೇ ಆಹ್ವಾನ ಪತ್ರಿಕೆಯಾಗಿ ಹಂಚುವ ಮೂಲಕ ಅಧ್ಯಾತ್ಮ ಹಾಗೂ ಪುಸ್ತಕ ಪ್ರೇಮ ಮೆರೆದಿದ್ದಾರೆ.ಜಮಖಂಡಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂ.೧ರಲ್ಲಿ ಶಿಕ್ಷಕಿ ಶಾರದಾ ಈಶ್ವರಪ್ಪ ಚಿಮ್ಮಡ ಅವರು ಹುನ್ನೂರ ಗ್ರಾಮದ ಗಣೇಶ ನಗರದಲ್ಲಿ ಸೀತಾರಾಮ ಮಂದಿರದ ಹಿಂದೆ ನೂತನ ಮನೆ ನಿರ್ಮಿಸಿದ್ದು, ನೂತನ ಮನೆಯ ಗೃಹ ಪ್ರವೇಶಕ್ಕೆ ಆಹ್ವಾನ ಪತ್ರಿಕೆ ಬದಲು ಆಧ್ಯಾತ್ಮಿಕತೆ ಹಾಗೂ ಪುಸ್ತಕ ಪ್ರೇಮ ಹೆಚ್ಚಿಸಲು ಮತ್ತು ಮುದ್ರಕರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ವಿಜಯಪುರ ಜ್ಞಾನಯೋಗ ಫೌಂಡೇಶನ್ ವತಿಯಿಂದ ಡಾ.ಶ್ರದ್ಧಾನಂದ ಸ್ವಾಮಿಗಳ ಸಂಪಾದಕತ್ವದಲ್ಲಿ ರಚಿತ ಸಿದ್ಧೇಶ್ವರ ಶ್ರೀಗಳ ಪ್ರವಚನ ಒಳಗೊಂಡ ಮನೆಯೊಡೆಯ ಪುಸ್ತಕವನ್ನು ಅಗತ್ಯವಾದಷ್ಟು ಪ್ರತಿಗಳನ್ನು ಮುದ್ರಣ ಮಾಡಿಸಿ ಆಹ್ವಾನ ಪತ್ರಿಕೆಯನ್ನಾಗಿ ವಿತರಿಸಿದ್ದಾರೆ.

ಇದೊಂದು ಸಾಹಿತ್ಯದ ಕೆಲಸ ಮತ್ತು ಪುಸ್ತಕ ಪ್ರೇಮ ಬೆಳೆಸಿದಂತೆ, ಜ್ಞಾನದ ದಾಸೋಹ ಮಾಡಿದಷ್ಟೆ ಸಮಾನವಾಗಿದೆ, ಅಂತರಂಗದ ಬೆಳಕು ಎಲ್ಲ ಕಡೆಗೂ ಹರವಿಕೊಳ್ಳುತ್ತದೆ ಹಾಗೂ ಆತ್ಮಜ್ಯೋತಿ ಬೆಳಗುತ್ತದೆ. ಈ ಕಾರ್ಯ ಮಾಡಿದ ಶಿಕ್ಷಕಿಯ ಕಾರ್ಯ ಶ್ಲಾಘನೀಯ.

ಸಿದ್ದರಾಜ ಪೂಜಾರಿ ಹಿರಿಯ ಸಾಹಿತಿ

ಕಡಿಮೆ ಬೆಲೆಯ ಕಾಗದಲ್ಲಿ ಗೃಹ ಪ್ರವೇಶದ ಆಮಂತ್ರಣ ಮುದ್ರಿಸಿ ವಿತರಿಸುವುದು ಬೇಡ, ಮೊಬೈಲ್‌ ಬಳಕೆ ಕಡಿಮೆಯಾಗಿ ಪುಸ್ತಕ ಸಂಸ್ಕೃತಿ ಬೆಳೆಯಲಿ, ಜನರಲ್ಲಿ ಆಧ್ಯಾತ್ಮಿಕತೆ ಬೆಳೆಸಿದಂತಾಗಲಿದೆ. ಎಲ್ಲದಕ್ಕಿಂತ ಮಿಗಿಲಾಗಿ ಸಿದ್ದೇಶ್ವರ ಶ್ರೀಗಳ ಹಾಗೂ ಒಂದಿಷ್ಟು ಕನ್ನಡದ ಸೇವೆ ಮಾಡಿದ ತೃಪ್ತಿ ನನಗಿದೆ.

- ಶಾರದಾ ಈಶ್ವರ ಚಿಮ್ಮಡ, ಶಿಕ್ಷಕಿ ಜಮಖಂಡಿ