ಶಾಲೆಗೆ ಬೀಗ ಜಡಿದು ಪ್ರತಿಭಟನೆ

| Published : Sep 19 2025, 01:00 AM IST

ಸಾರಾಂಶ

ನಿಯೋಜನೆ ಮೇರೆಗೆ ಕಳೆದೆರಡು ದಶಕದಿಂದ ಬೇರೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯನ್ನು ವಾಪಾಸ್ ಮೂಲ ಶಾಲೆಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ತಾಲೂಕಿನ ಸಾಲೂರು ಸರ್ಕಾರಿ ಶಾಲೆಯ ಗ್ರಾಮಸ್ಥರು, ಪೋಷಕರ ಜತೆ ಮಕ್ಕಳು ಸೇರಿಕೊಂಡು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಸಾಲೂರು ಗ್ರಾಮದಲ್ಲಿ ನಡೆದಿದೆ.

ಶಿಕಾರಿಪುರ: ನಿಯೋಜನೆ ಮೇರೆಗೆ ಕಳೆದೆರಡು ದಶಕದಿಂದ ಬೇರೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯನ್ನು ವಾಪಾಸ್ ಮೂಲ ಶಾಲೆಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ತಾಲೂಕಿನ ಸಾಲೂರು ಸರ್ಕಾರಿ ಶಾಲೆಯ ಗ್ರಾಮಸ್ಥರು, ಪೋಷಕರ ಜತೆ ಮಕ್ಕಳು ಸೇರಿಕೊಂಡು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಸಾಲೂರು ಗ್ರಾಮದಲ್ಲಿ ನಡೆದಿದೆ.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತಾಲೂಕಿನ ಸಾಲೂರು ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ 1999ರಲ್ಲಿ ಶಿರಾಳಕೊಪ್ಪದ ಸರ್ಕಾರಿ ಶಾಲೆಗೆ ನಿಯೋಜನೆ ಮೇರೆಗೆ ತೆರಳಿದ್ದು, ಇದುವರೆಗೂ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯ ನಿಯೋಜನೆ ರದ್ದುಗೊಳಿಸಿ ವಾಪಾಸ್ ಸಾಲೂರು ಗ್ರಾಮದ ಮೂಲ ಶಾಲೆಗೆ ಕಳುಹಿಸುವಂತೆ ಆಗ್ರಹಿಸಿದರಲ್ಲದೆ, ಈ ಬಗ್ಗೆ ಹಲವು ಬಾರಿ ಶಾಲಾಭಿವೃದ್ಧಿ ಸಮಿತಿಯಿಂದ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.ಸತತ 26 ವರ್ಷಗಳಿಂದ ನಿಯೋಜನೆ ಮೇರೆಗೆ ತೆರಳಿರುವ ಶಿಕ್ಷಕಿಯ ಅನುಪಸ್ಥಿತಿಯಿಂದಾಗಿ ಫಲಿತಾಂಶದಲ್ಲಿ ತೀವ್ರ ಕುಸಿತವಾಗುತ್ತಿದ್ದು, ಹಲವು ಬಾರಿ ಸಲ್ಲಿಸಿದ ಮನವಿಗೆ ಸ್ಪಂದನೆ ದೊರೆಯದಿರುವುದು ಡಿಡಿಪಿಐ, ಬಿಇಒ ಮತ್ತಿತರ ಇಲಾಖೆ ಹಿರಿಯ ಅಧಿಕಾರಿ ಸಹಿತ ಜನಪ್ರತಿನಿಧಿಗಳ ಪರೋಕ್ಷ ಕುಮ್ಮಕ್ಕು ಕಾರಣವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕಳೆದ ಜೂನ್‌ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜನೆಯನ್ನು ರದ್ದುಪಡಿಸಿದ್ದರೂ ಸಹಿತ ಇದುವರೆಗೂ ಗ್ರಾಮದ ಶಾಲೆಗೆ ಕರ್ತವ್ಯಕ್ಕೆ ವಾಪಾಸಾಗದ ಶಿಕ್ಷಕಿಯ ಉದ್ಧಟತನ ವರ್ತನೆ ಬಗ್ಗೆ ಕಿಡಿಕಾರಿದರು.ಶಿಕ್ಷಣ ಸಚಿವರು, ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷ ಶಾಸಕರ ಸ್ವ ಕ್ಷೇತ್ರದಲ್ಲಿಯೇ ಶಿಕ್ಷಕಿ ಬೇಜವಾಬ್ದಾರಿ ವರ್ತನೆ ಅಕ್ಷ್ಯಮ್ಯವಾಗಿದ್ದು ಕೂಡಲೇ ಈ ಬಗ್ಗೆ ತುರ್ತು ಕ್ರಮಕೈಗೊಂಡು ಶಿಕ್ಷಕಿ ಮೂಲ ಶಾಲೆಗೆ ವಾಪಸಾಗಿ ಕರ್ತವ್ಯ ನಿರ್ವಹಿಸಲು ಸಚಿವರು ನಿಗಾವಹಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಹಣುಮಂತನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ನಾಯ್ಕ, ರವಿನಾಯ್ಕ, ಚಂದ್ರು, ಶರವಣ ಸಹಿತ ಗ್ರಾಮಸ್ಥರು ಪೋಷಕರು ಹಾಜರಿದ್ದರು.