ಸಾರಾಂಶ
ಡಿಬ್ಲ್ಯೂಸಿ ಸದಸ್ಯ ಸಲೀಂ ಪಾಷಾ ಮಾತನಾಡಿ, ವಕ್ಫ್ ಆಸ್ತಿಗಳನ್ನು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಬಳಸಬೇಕಾಗಿದೆ. ಆದರೆ, ಈ ತಿದ್ದುಪಡಿ ಅದನ್ನು ನಷ್ಟಪಡುವಂತೆ ಮಾಡಲಿದೆ. ಇದು ಒಂದು ದೊಡ್ಡ ಕುತಂತ್ರ ಎಂದು ದೂರಿದರು.
ಕನ್ನಡಪ್ರಭವಾರ್ತೆ ಚನ್ನಪಟ್ಟಣ
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಗುರುವಾರ ನಗರದ ತಾಲೂಕು ಕಚೇರಿ ಎದುರು ಜಮಾಯಿಸಿದ ಎಸ್‌ಡಿಪಿಐ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ತಿದ್ದುಪಡಿ ಮಸೂದೆಯನ್ನು ತಕ್ಷಣ ವಾಪಸ್ಸು ಪಡೆಯುವಂತೆ ಆಗ್ರಹಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮ್ಜದ್ ಶರೀಫ್ ಮಾತನಾಡಿ, ಈ ಮಸೂದೆ ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಅಸಾಂವಿಧಾನಿಕ ಮತ್ತು ಪಕ್ಷಪಾತದಿಂದ ಕೂಡಿದೆ. ಸರ್ಕಾರವು ಜನರ ಅಭಿಪ್ರಾಯವನ್ನು ಪರಿಗಣಿಸದೆ, ತನ್ನಿಚ್ಛೆಯಂತೆ ನಿರ್ಧಾರ ಕೈಗೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಡಿಬ್ಲ್ಯೂಸಿ ಸದಸ್ಯ ಸಲೀಂ ಪಾಷಾ ಮಾತನಾಡಿ, ವಕ್ಫ್ ಆಸ್ತಿಗಳನ್ನು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಬಳಸಬೇಕಾಗಿದೆ. ಆದರೆ, ಈ ತಿದ್ದುಪಡಿ ಅದನ್ನು ನಷ್ಟಪಡುವಂತೆ ಮಾಡಲಿದೆ. ಇದು ಒಂದು ದೊಡ್ಡ ಕುತಂತ್ರ ಎಂದು ದೂರಿದರು.
ವಕ್ಫ್ ತಿದ್ದುಪಡಿಯನ್ನು ವಿರೋಧಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಜ್ಹರ್ ಪಾಷಾ, ಚನ್ನಪಟ್ಟಣ ತಾಲೂಕು ಉಪಾಧ್ಯಕ್ಷ ಮೊಹಮ್ಮದ್ ಫಾಜಿಲ್, ರಾಮನಗರ ಅಧ್ಯಕ್ಷ ಮಹಬೂಬ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.