ಉದಯಗಿರಿ ಗಲಭೆ: ಎಂ.ಲಕ್ಷ್ಮಣ್‌ ಅವರನ್ನು ಸಾಕ್ಷಿಯಾಗಿ ಪರಿಗಣಿಸಲು ಆಗ್ರಹ

| Published : Feb 14 2025, 12:31 AM IST

ಉದಯಗಿರಿ ಗಲಭೆ: ಎಂ.ಲಕ್ಷ್ಮಣ್‌ ಅವರನ್ನು ಸಾಕ್ಷಿಯಾಗಿ ಪರಿಗಣಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

‘ತನಗಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ’ ಎಂದು ದೇಶದ ಏಳಿಗೆ, ಹಿತಕ್ಕಾಗಿ ಸದಾ ಶ್ರಮಿಸುತ್ತಿರುವ, ಪ್ರವಾಹ, ಬರಗಾಲ, ರಾಷ್ಟ್ರೀಯ ವಿಪತ್ತಿನ ವೇಳೆ ಶಿಸ್ತಿನ ಸಿಪಾಯಿಗಳಂತೆ ದುಡಿಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂರುವ ಬದಲು ಪೊಲೀಸ್ ಇಲಾಖೆ ಕೂಡಲೇ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರನ್ನೇ ಸಾಕ್ಷಿಯಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಉದಯಗಿರಿ ಗಲಭೆಗೆ ಸಂಬಂಧಿಸಿದಂತೆ ಮನಸೋಇಚ್ಛೆ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಅವರನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌ ಆಗ್ರಹಿಸಿದ್ದಾರೆ.

ಗಲಭೆ ನಡೆಸುವ ಉದ್ದೇಶದಿಂದ 300ಕ್ಕೂ ಹೆಚ್ಚು ಆರ್‌ಎಸ್‌ಎಸ್‌ ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆ. ಅವರಲ್ಲಿ 50 ಕಾರ್ಯಕರ್ತರು ಉದಯಗಿರಿಗೆ ಬಂದಿದ್ದಾರೆ. ವೇಷ ಮರೆಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತರು ಟೋಪಿ ಹಾಕಿಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ವಕ್ತಾರ ಲಕ್ಷ್ಮಣರವರ ಮಾಹಿತಿ ನಿಜಕ್ಕೂ ವಿಸ್ಮಯಕಾರಿಯಾಗಿದೆ. ಈ ಕೂಡಲೇ ಲಕ್ಷ್ಮಣ್‌ರನ್ನು ಪೊಲೀಸರು ವಶಕ್ಕೆ ಪಡೆದು ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.

ಇದರಿಂದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣ, ಹುಬ್ಬಳ್ಳಿ ಗಲಭೆ ಪ್ರಕರಣ, ನಾಗಮಂಗಲ ಗಲಭೆ ಪ್ರಕರಣ, ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸಂಗತಿಗಳು ಎಂ.ಲಕ್ಷ್ಮಣ್‌ ಅವರಿಂದ ಸಿಕ್ಕರೂ ಸಿಗಬಹುದು. ರಾಜ್ಯ ಗುಪ್ತಚರ ಇಲಾಖೆ, ಪೊಲೀಸರಿಗೆ ಸಿಗದ ಮಾಹಿತಿ ಇವರ ಬಳಿ ಇದೆ ಎಂದರೆ ನಿಜಕ್ಕೂ ಆಶ್ಚರ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆಗೆ ಕಲ್ಲು ತೂರಾಟ ಮಾಡುವ ಮೊದಲು ರಾಶಿ ರಾಶಿ ಕಲ್ಲನ್ನು ಎಲ್ಲಿಂದ ತಂದಿದ್ದರು. ಕಲ್ಲು ತೂರಲು ಪ್ರಚೋದನೆ ನೀಡಿದವರು ಯಾರು, ಕಲ್ಲು ತೂರುವವರನ್ನು ಯಾವ ಯಾವ ವಾಹನದಲ್ಲಿ ಎಲ್ಲಿಂದ ಕರೆತಂದಿದ್ದರು ಎನ್ನುವ ಸಂಪೂರ್ಣ ಮಾಹಿತಿ ಇದ್ದರೂ ಒಬ್ಬ ಜವಾಬ್ದಾರಿ ರಾಷ್ಟ್ರೀಯ ಪಕ್ಷದ ರಾಜ್ಯ ವಕ್ತಾರನಾಗಿ ಗಲಭೆ ನಡೆಯುವ ಮೊದಲೇ ಪೊಲೀಸರಿಗೆ ಮಾಹಿತಿ ನೀಡಲಿಲ್ಲವೇಕೆ ಎಂಬ ಅನುಮಾನಗಳು ಮೂಡುತ್ತಿವೆ ಎಂದಿದ್ದಾರೆ.

‘ತನಗಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ’ ಎಂದು ದೇಶದ ಏಳಿಗೆ, ಹಿತಕ್ಕಾಗಿ ಸದಾ ಶ್ರಮಿಸುತ್ತಿರುವ, ಪ್ರವಾಹ, ಬರಗಾಲ, ರಾಷ್ಟ್ರೀಯ ವಿಪತ್ತಿನ ವೇಳೆ ಶಿಸ್ತಿನ ಸಿಪಾಯಿಗಳಂತೆ ದುಡಿಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂರುವ ಬದಲು ಪೊಲೀಸ್ ಇಲಾಖೆ ಕೂಡಲೇ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರನ್ನೇ ಸಾಕ್ಷಿಯಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಿದರೆ ಸತ್ಯಾಸತ್ಯತೆ, ಹೊರಗೆ ಬರುತ್ತದೆ ಎಂದು ತಿಳಿಸಿದ್ದಾರೆ.